ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಜನಾಭಿಪ್ರಾಯ ಸಂಗ್ರಹ

Last Updated 12 ಡಿಸೆಂಬರ್ 2020, 11:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಲವಾರು ವಿಷಯಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ 13 ಜಿಲ್ಲೆಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು, ಜನವರಿ 12ರಂದು ಜನರ ಅಭಿಪ್ರಾಯವನ್ನು ಪ್ರಕಟಿಸುತ್ತೇವೆ ಎಂದು ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಸ್‌. ಶಂಕರಣ್ಣ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರತಿ ಜಿಲ್ಲೆಗಳಲ್ಲಿ ಕಾರ್ಮಿಕರು, ಆಟೊ ಚಾಲಕರು, ಶಿಕ್ಷಕರು, ವೈದ್ಯರು ಹೀಗೆ ಎಲ್ಲ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಮುಂದಿನ ಹಾದಿಯ ಬಗ್ಗೆ ಯೋಜನೆ ರೂಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಭಾನುವಾರ (ಡಿ. 13) ಸಂಜೆ 5 ಗಂಟೆಗೆ ನವನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಚಾಲನೆ ನೀಡಲಾಗುವುದು. ನವನಗರದಿಂದ ನವರಾಜ್ಯ ಸ್ಥಾಪನೆಯ ಹೋರಾಟಕ್ಕೆ ಮುನ್ನುಡಿ ಬರೆಯಲಾಗುವುದು’ ಎಂದು ಹೇಳಿದರು.

‘ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಂಜುಂಡಪ್ಪ ಮತ್ತು ಡಾ. ಸರೋಜಿನಿ ಮಹಿಷಿ ವರದಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು, ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು, ಬೆಳಗಾವಿ ವಿಧಾನಸೌಧದಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ಸಮನಾಗಿಯೇ ಅಧಿವೇಶನ ನಡೆಸಬೇಕು, ಬಾಗಲಕೋಟೆಯಲ್ಲಿ ಕೃಷ್ಣಭಾಗ್ಯ ಜಲನಿಗಮ ನಿಯಮಿತದ ಪ್ರಧಾನ ಕಚೇರಿ ಸ್ಥಾಪಿಸಬೇಕು ಹೀಗೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರೂ ಸರ್ಕಾರ ಈಡೇರಿಸಿಲ್ಲ. ಆದ್ದರಿಂದ ಮೊದಲು ಜನಾಭಿಪ್ರಾಯ ಸಂಗ್ರಹಿಸಲಾಗುವುದು’ ಎಂದರು.

ಸಂಘಟನೆಯ ಪ್ರಮುಖರಾದ ವಿ.ಸಿ. ಹಿರೇಮಠ, ಸುನೀಲ ರೇವಣಕರ, ಮಲ್ಲಯ್ಯ ಹಿರೇಮಠ ಮತ್ತು ಅಕ್ಷಯ ಅಗರವಾಲ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT