ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿ ಸಮುದ್ರದಲ್ಲಿ ದಯಾಮರಣಕ್ಕೆ ಮಹದಾಯಿ ಹೋರಾಟಗಾರರ ಕೋರಿಕೆ

Last Updated 18 ಫೆಬ್ರುವರಿ 2020, 9:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಕುರಿತು ಕೂಡಲೇ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದರೆ ಅರಬ್ಬಿ ಸಮುದ್ರದಲ್ಲಿ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ದೆಹಲಿಗೆ ತೆರಳಿ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಧಿಸೂಚನೆ ಹೊರಡಿಸದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಬೇಕೆಂದು ಹಿಂದೆಯೂ ಕೋರಿದ್ದೆವು. ಆದರೆ, ಈ ಬಾರಿ ಅರಬ್ಬಿ ಸಮುದ್ರದಲ್ಲಿಯೇ ಅವಕಾಶ ಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ಸ್ಥಳೀಯವಾಗಿಯೇ ದಯಾಮರಣ ಪಡೆದರೆ ನಮ್ಮ ಸಮಾಧಿ ಮೇಲೆಯೇ ನೂರಾರು ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆ ಅವಕಾಶ ಕೊಡಲು ನಮಗೆ ಇಷ್ಟವಿಲ್ಲ. ಮಹದಾಯಿ ನೀರಿಗಾಗಿ ಹೋರಾಡಿ ಮೃತಪಟ್ಟ ರೈತರ ಸಮಾಧಿ ಮೇಲೆ ಈಗಲೂ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದೇವೆ. ಇದಕ್ಕೆ ಈಗಾಗಲೇ ₹45 ಸಾವಿರ ಖರ್ಚಾಗಿದೆ. ವಕಾಲತ್ತು ಮಾಡಲು ವಕೀಲರಿಗೆ ಕೊಡಲು ₹1.5 ಲಕ್ಷ ಹಣ ಕೊಡಬೇಕಾಗಿದೆ. ಇದಕ್ಕಾಗಿ ಆಸಕ್ತ ದಾನಿಗಳು ನೆರವು ನೀಡಬೇಕು. ಹಣ ಸಂಗ್ರಹವಾಗದಿದ್ದರೆ ಸ್ಥಿತಿವಂತ ರೈತರಿಂದ ಹಣ ಕಲೆ ಹಾಕಲಾಗುವುದು. ರಾಜಕಾರಣಿಗಳು ಹಣ ನೀಡಿದರೆ ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಓಡಾಟಕ್ಕೆ ಜನಪ್ರತಿನಿಧಿಗಳಿಗೆ ಹಣ ಕೊಟ್ಟರೂ ಕೆಲಸ ಆಗಿಲ್ಲ

ಮಹದಾಯಿ ನೀರಿಗೆ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಓಡಾಟದ ಉದ್ದೇಶಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಶಿವಕುಮಾರ ಉದಾಸಿ ಅವರ ಖಾತೆಗೆ ತಲಾ ₹5 ಸಾವಿರ ಜಮೆ ಮಾಡಿದ್ದೆವು. ಆದರೂ ಕೆಲಸವಾಗಿಲ್ಲ ಎಂದು ಸೊಬರದಮಠ ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ನಿಧಿಗೆ ₹10 ಸಾವಿರ ಕೊಟ್ಟಿದ್ದೆವು. ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಅಂಚೆ ಮೂಲಕ ₹5000 ನೀಡಿದ್ದೆವು. ಕೆಲ ದಿನಗಳ ಬಳಿಕ ಗದ್ದಿಗೌಡರ ಹಣ ಮರಳಿಸಿದ್ದಾರೆ'. ‘ಹಣದ ಕೊರತೆಯಿಂದ ಜನಪ್ರತಿನಿಧಿಗಳು ನಮ್ಮ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಹಣ ಸಂದಾಯ ಮಾಡಿದ್ದೇವೆ. ಈಗಲೂ ಓಡಾಟದ ಖರ್ಚಿಗೆ ಹಣದ ಅಗತ್ಯವಿದ್ದರೆ ಕೊಡುತ್ತೇವೆ. ಮಹದಾಯಿ ಅಧಿಸೂಚನೆ ಹೊರಡಿಸುವ ಕೆಲಸವನ್ನು ಅವರು ತುರ್ತಾಗಿ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT