ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಪೀಳಿಗೆಗೆ ಆರ್‌.ಎನ್. ಶೆಟ್ಟಿ ಪ್ರೇರಣೆ’-ಪ್ರಸಾದ ಅಬ್ಬಯ್ಯ

ಆರ್‌.ಎನ್. ಶೆಟ್ಟಿ ಪುತ್ಥಳಿ ಅನಾವರಣ, ಸ್ಮರಣಾರ್ಥ ಪ್ರಶಸ್ತಿ ಪ್ರದಾನ
Last Updated 10 ಮೇ 2022, 12:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಸಾಧ್ಯವಾದುದನ್ನು ಸತತ ಪ್ರಯತ್ನದ ಮೂಲಕ ಸಾಧಿಸಿ ತೋರಿಸಿರುವ ಡಾ. ಆರ್‌.ಎನ್. ಶೆಟ್ಟಿ ಅವರು, ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಹಾಗಾಗಿಯೇ, ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲೂ ಅವರ ಹೆಸರು ಚಿರಪರಿಚಿತವಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ -ಧಾರವಾಡ ಬಂಟರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಆರ್.ಎನ್. ಶೆಟ್ಟಿ ಅವರ ಪುತ್ಥಳಿ ಅನಾವರಣ ಮತ್ತು ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನುಷ್ಯನ ಜೀವನ, ನಡೆ-ನುಡಿ ಹೇಗಿರಬೇಕು ಎಂಬುದಕ್ಕೆ ಶೆಟ್ಟಿ ಅವರು ಆದರ್ಶಪ್ರಾಯರಾಗಿದ್ದರು’ ಎಂದರು.

‘ಶಿಕ್ಷಣ, ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹೆಸರು ಮಾಡಿದ್ದ ಅವರು ದಾನ–ಧರ್ಮದಲ್ಲೂ ಎತ್ತಿದ ಕೈ. ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದ ಅವರು ಲೆಕ್ಕವಿರದಷ್ಟು ಮಂದಿಗೆ ಸಹಾಯ ಮಾಡಿದ್ದಾರೆ. ಕೋವಿಡ್ –19 ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ದಿನಸಿ ವಿತರಿಸಿದ್ದಾರೆ. ಮನುಷ್ಯನ ಸಾರ್ಥಕ ಜೀವನ ಹೇಗಿರಬೇಕು ಎಂಬುದಕ್ಕೆ ಅವರು ನಿದರ್ಶನವಾಗಿದ್ದಾರೆ’ ಎಂದು ಬಣ್ಣಿಸಿದರು.

ರಾಜ್ಯ ಹೊಟೇಲ್‌ಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ‘ಆರ್.ಎನ್. ಶೆಟ್ಟಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮುದಾಯ ಮುನ್ನಡೆಯುತ್ತಿದೆ. ಮುರುಡೇಶ್ವರ ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾದುದು’ ಎಂದು ನೆನೆದರು.

ಶೆಟ್ಟಿ ಅವರ ಪುತ್ಥಳಿಯನ್ನು ಗಣ್ಯರು ಅನಾವರಣಗೊಳಿಸಿದರು. ನಂತರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಬಂಟರ ಸಂಘದ ಸಂಸ್ಥಾಪಕ ಸದಸ್ಯ ಕೆ. ಜಯಂತ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ವಸಂತ ಹೊರಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಸತೀಶ ಆರ್. ಶೆಟ್ಟಿ, ಸುನೀಲ ಶೆಟ್ಟಿ, ಜೀವನ ಶೆಟ್ಟಿ, ಶೋಭಾ ಶೆಟ್ಟಿ, ರಾಜಣ್ಣ ಕೊರವಿ ಹಾಗೂ ಮಹೇಂದ್ರ ಸಿಂಘಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT