ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯಾ ಮಹಿಷಿ ರಸ್ತೆಗೆ!

ಮುಗಿಯದ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಕಾಮಗಾರಿ; ಗ್ಯಾಸ್‌ ಪೈಪ್‌ಲೈನ್‌ಗೆ ರಸ್ತೆ ಅಗೆತ
Last Updated 20 ಜೂನ್ 2018, 8:38 IST
ಅಕ್ಷರ ಗಾತ್ರ

ಧಾರವಾಡ: ನಗರದ ದೈವಜ್ಞ ಕಲ್ಯಾಣ ಮಂಟಪದ ಬಳಿಯ ಬಾಗಲಕೋಟಿ ಪೆಟ್ರೋಲ್‌ ಪಂಪ್‌ನಿಂದ ಮಹಿಷಿ ರಸ್ತೆಯ ಮೂಲಕ ಎಮ್ಮಿಕೇರಿಗೆ ಬರುವಷ್ಟರಲ್ಲಿ ವಾಹನರು ಸುಸ್ತು ಹೊಡೆದಿರುತ್ತಾರೆ.

ಒಂದು ಬದಿಯ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಕಾಮಗಾರಿ, ಸಾಲದೆಂಬಂತೆ ಅದರ ಪಕ್ಕದಲ್ಲೇ ಅದಾನಿ ಕಂಪನಿಯು ಮನೆ ಮನೆಗೆ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುವುದಕ್ಕಾಗಿ ಆಳವಾಗಿ ರಸ್ತೆಯನ್ನು ಅಗೆದು ಹಾಕಿದೆ. ಪೈಪ್‌ಲೈನ್‌ ಕಾಮಗಾರಿ ಮುಕ್ತಾಯವಾದರೂ ಗುತ್ತಿಗೆದಾರರು ತಗ್ಗನ್ನು ಸರಿಯಾಗಿ ಮುಚ್ಚಿಲ್ಲ. ಹೀಗಾಗಿ, ಕಾರು, ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಈ ರಸ್ತೆಯಲ್ಲಿ ಸಾಗಬೇಕಿದೆ.

ತಿಂಗಳ ಹಿಂದೆ ಆರಂಭವಾದ ಸಿಮೆಂಟ್‌ ಕಾಂಕ್ರೀಟ್‌ ಕಾಮಗಾರಿ ಪೆಟ್ರೋಲ್‌ ಪಂಪ್‌ನಿಂದ ಕ್ರಿಶ್ಚಿಯನ್‌ ಸ್ಮಶಾನದವರೆಗೆ ಮಾತ್ರ ಮುಗಿದಿದೆ. ಕಳೆದ 15 ದಿನಗಳಿಂದ ಅರ್ಧಕ್ಕೇ ಸ್ಥಗಿತಗೊಂಡಿದೆ. ಆದರೆ, ರಸ್ತೆ ನಿರ್ಮಾಣಕ್ಕಾಗಿ ಅಳವಡಿಸಿದ ಕಬ್ಬಿಣದ ರಾಡ್‌ಗಳು ಪಾದಚಾರಿಗಳಿಗೆ, ವಾಹನ ಸವಾರರಿಗೆ ಸಾಕಷ್ಟು ಕಿರಿ ಕಿರಿ ಮಾಡುತ್ತಿವೆ. ಕೆಲಸ ಮರು ಆರಂಭಿಸಬೇಕು. ಇಲ್ಲದಿದ್ದರೆ ಆವುಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಮಹಿಷಿ ರಸ್ತೆ ನಿವಾಸಿ ಪ್ರಶಾಂತ ದೇಸಾಯಿ.

ಅದಾನಿ ಪೈಪ್‌ಲೈನ್‌ ಅಧ್ವಾನ: ಏಕಕಾಲಕ್ಕೇ ಅದಾನಿ ಕಂಪನಿಯವರು ಇಲ್ಲಿ ಗ್ಯಾಸ್‌ ಪೈಪ್‌ಲೈನ್‌ಗಾಗಿ ಎಡಬದಿಯ ರಸ್ತೆಯನ್ನು ಅಗೆದರು. ಪೈಪ್‌ ಸಹ ಜೋಡಿಸಿದರು. ಆದರೆ, ಸರಿಯಾಗಿ ತಗ್ಗು ಮುಚ್ಚದ್ದರಿಂದ ಕಾರು ಹಾಗೂ ಬೈಕ್‌ಗಳ ಚಕ್ರಗಳು ತಗ್ಗಿನಲ್ಲಿ ಸಿಲುಕಿಕೊಳ್ಳುತ್ತಿವೆ. ತಗ್ಗು ತಪ್ಪಿಸೋಣವೆಂದರೆ ಪಕ್ಕದಲ್ಲಿ ಸಿಮೆಂಟ್ ರಸ್ತೆ. ಹೀಗಾಗಿ, ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಸವಾರರ ಪರಿಸ್ಥಿತಿ ಎನ್ನುತ್ತಾರೆ ಇನ್ನೊಬ್ಬ ನಿವಾಸಿ ಬಾಳಪ್ಪ.

ಸಾಂಬ್ರಾಣಿ ಅವರ ಮನೆ ಪಕ್ಕದ ಕಿರು ಓಣಿಯಲ್ಲಿ ಇತ್ತೀಚೆಗೆ ಹೊಸದಾಗಿ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಅಂಚಿಗೆ ಹೊಂದಿಕೊಂಡಂತೆ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ನಿರ್ಲಕ್ಷ್ಯದಿಂದ ಮುಚ್ಚದೇ ಇರುವುದರಿಂದ ಅಲ್ಲಿ ತಗ್ಗು ಬಿದ್ದಿದೆ. ಹೀಗಾಗಿ, ರಸ್ತೆ ಏರಲು ವಾಹನಗಳು ಪ್ರಯಾಸಪಡಬೇಕಿದೆ ಎಂಬುದು ಸವಾರರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT