ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೇ ಅಪಘಾತಕ್ಕೆ ಕಾರಣವಾಹನ ಸವಾರಿ ಇರಲಿ ಜಾಗೃತಿ

Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ಸಂಜೆ ಬೇಗ ಬರುತ್ತೇನೆ ಎಂದು ಮನೆಯಿಂದ ಹೊರಟ ಸೂರಜ್‌, ವಾಪಸ್‌ ಬಂದಿದ್ದು ಹೆಣವಾಗಿಯೇ!

ಹಠ ಮಾಡಿ, ಕಾಡಿ, ಬೇಡಿ, ಊಟ, ತಿಂಡಿ ಬಿಟ್ಟು ಹೆತ್ತವರಿಂದ ಹಣ ಪಡೆದು ಬೈಕ್‌ ಖರೀದಿಸಿದ್ದ. ಬೈಕ್‌ ಓಡಿಸುವಾಗ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಒಂದೆರಡು ಬಾರಿ ದಂಡ ಪಾವತಿಸುವಂತೆ ಮನೆಗೆ ನೋಟಿಸ್‌ ಸಹ ಬಂದಿತ್ತು. ಆದರೂ, ಹೆಲ್ಮೆಟ್‌ ಧರಿಸದೆ ಎಕ್ಸಲೇಟರ್‌ ತಿರುಗಿಸುತ್ತ ಹೈವೇಲಿ 80, 100ರ ವೇಗದಲ್ಲಿ ಬೈಕ್‌ ಓಡಿಸುತ್ತಿದ್ದ. ಬೈಕ್‌ ಖರೀದಿಸಿದಾಗಲೇ ಅವನ ಸಾವು ಸಹ ಹತ್ತಿರವಾಗಿತ್ತು. ಹೆಲ್ಮೆಟ್‌ ಧರಿಸದೆ ವೇಗವಾಗಿ ಬೈಕ್‌ ಓಡಿಸುವಾಗ ಎದುರಿಗೆ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ.

ಅವನು ಅರುಣ್‌. ಕಾರು ಚಾಲಕ. ವಿಪರೀತ ಎನ್ನುವಷ್ಟು ಮೊಬೈಲ್‌ ಖಯಾಲಿ. ವಾಹನ ಚಲಾಯಿಸುವಾಗಲು ಸಹ ಮಾತನಾಡುತ್ತಿದ್ದನು. ಸ್ನೇಹಿತರು, ಕುಟುಂಬದವರು ಎಷ್ಟೇ ಹೇಳಿದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಿದ್ದಾಗ ಒಂದು ದಿನ ಕುಟುಂಬವೊಂದು ಮೈಸೂರು ಪ್ರವಾಸಕ್ಕೆ ತೆರಳಲು ಅವನ ಕಾರನ್ನು ಬಾಡಿಗೆ ಪಡೆಯುತ್ತದೆ. ಮಾರ್ಗ ಮಧ್ಯದಲ್ಲಿ ಮೊಬೈಲ್‌ ಕರೆ ಬಂದಾಗ, ಕಾರು ಚಲಾಯಿಸುತ್ತಲೇ ಕಾಲ್‌ ರಿಸೀವ್‌ ಮಾಡುತ್ತಾನೆ. ಎದುರಿಗೆ ಇರುವ ತಿರುವಿನಲ್ಲಿ ವಾಹನ ಧುತ್ತೆಂದು ಎದುರಾಯಿತು. ಅಷ್ಟೇ!! ಕಾರಿನಲ್ಲಿದ್ದ ಇಬ್ಬರು ಮಕ್ಕಳು ಹಾಗೂ ಗಂಡ–ಹೆಂಡತಿ ಸೇರಿ ಚಾಲಕ ಅರುಣ್‌ ಸಹ ಶಿವನ ಪಾದ ಸೇರಿಕೊಂಡರು.

ಇವು ಉದಾಹರಣೆಗಳಷ್ಟೇ! ನಮ್ಮ ಸುತ್ತಮುತ್ತ ಪ್ರತಿನಿತ್ಯ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಪ್ರತಿಯೊಂದು ಅಪಘಾತ ನೋವಿಗೆ ಮುನ್ನುಡಿ. ಅಪಘಾತಕ್ಕೊಳಗಾದ ವ್ಯಕ್ತಿ ಗಂಭೀರ ಗಾಯಗೊಳ್ಳಬಹುದು. ಕೈ, ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲನಾಗಬಹುದು. ಅಪಘಾತದ ತೀವ್ರತೆಗೆ ತಲೆಯೇ ನುಚ್ಚು ನೂರಾಗಬಹುದು. ಏನಾಗಬಹುದು ಎಂದು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆ ಕ್ಷಣದ ನಂತರದ ಸಮಯವೆಲ್ಲ ಭೀಕರ, ಭೀಭತ್ಸ, ಭಯಾನಕ. ನಂಬಿದ ಜೀವಗಳೆಲ್ಲ ಉಸಿರು ಇರುವವರೆಗೂ ಕಣ್ಣೀರಲ್ಲೇ ಕೈ ತೊಳೆಯುತ್ತ ಬದುಕಬೇಕು.

ಹುಬ್ಬಳ್ಳಿ–ಧಾರವಾಡ ನಗರದಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬರೋಬ್ಬರಿ 291 ಜನ ಮೃತಪಟ್ಟಿದ್ದಾರೆ. 1,451 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಶೇ 90ರಷ್ಟು ಅಪಘಾತಗಳು ವಾಹನ ಸವಾರರು ರಸ್ತೆ ನಿಯಮಾವಳಿಗಳನ್ನು ಪಾಲಿಸದಿರುವುದೇ ಇದಕ್ಕೆ ಕಾರಣವಾಗಿದೆ. ಸಿಗ್ನಲ್‌ ಜಂಪ್‌ ಮಾಡುವುದು, ಹೆಲ್ಮೆಟ್‌ ಧರಿಸ ದೆ ಬೈಕ್‌ ಸವಾರಿ ಮಾಡುವುದು, ಸೀಟ್‌ ಬೆಲ್ಟ್‌ ಧರಿಸದೆ ವಾಹನ ಚಲಾಯಿಸುವುದು, ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ, ಎದುರಿನ ವಾಹನ ಹಿಂದಿಕ್ಕುವ ಭರದಲ್ಲಿ ಸಂಚಾರ ನಿಯಮಾವಳಿ ಉಲ್ಲಂಘನೆ ಹೀಗೆ ಒಂದಿಲ್ಲೊಂದು ಕಾರಣಗಳಿಂದ ಅಪಘಾತಗಳು ಸಂಭವಿಸಿವೆ. ಎಷ್ಟು ಶ್ರೀಮಂತನಾದರೇನು? ಚಿಕಿತ್ಸೆಗೆ ಎಷ್ಟು ಹಣ ವೆಚ್ಚ ಮಾಡಿದರೇನು? ಹೋದ ಜೀವ, ಕಳೆದು ಕೊಂಡ ಕಾಲು, ಕೈ ಮತ್ತೆ ಬರುವುದೇ? ಜೀವಕ್ಕಿಂತ ಅಮೂಲ್ಯವಾದದ್ದು ಏನಿದೆ? ಕೈ–ಕಾಲು ಚೆನ್ನಾಗಿದ್ದರೆ ಬೇಡಿಯಾದರೂ ತಿನ್ನಬಹುದು. ಆದರೆ, ಅದೇ ಇಲ್ಲದಿದ್ದರೇ, ಸ್ವಾವಲಂಬಿ ಬದುಕು ಸಾಧ್ಯವೇ? ಕುಟುಂಬದವರ ಕಣ್ಣೀರು ಒರೆಸಲು ಸಾಧ್ಯವೇ?

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣಕ್ಕೆ ಸಂಚಾರ ನಿಯಮಾವಳಿ ಉಲ್ಲಂಘನೆಯಾಗುತ್ತಿರುವುದೇ ಪ್ರಮುಖ ಕಾರಣ ಎಂದು ಸಂಚಾರ ಹಾಗೂ ಸುರಕ್ಷತಾ ವಿಭಾಗದ ಆಯುಕ್ತ ಪಿ.ಎಸ್‌.ಸಂಧು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ದೇಶದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿರುವುದಾಗಿ ತಿಳಿಸಿರುವ ಅವರು, ಅಪಘಾತದ ತೀವ್ರತೆ ಹಾಗೂ ನಂತರ ಪರಿಸ್ಥಿತಿಯನ್ನು ನಗರದ ಆಟೊ, ಕ್ಯಾಬ್‌ ವಾಹನ ಚಾಲಕರಿಗೆ ಹಾಗೂ ಶಾಲಾ, ಕಾಲೇಜು ಪಾಲಕರ ಹಾಗೂ ಶಿಕ್ಷಕರ ವರ್ಗಕ್ಕೆ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು.

ಕುಟುಂಬಕ್ಕೆ ಆಧಾರಸ್ತಂಭವಾಗಿರುವವರೇ ಅಪಘಾತದಲ್ಲಿ ಮೃತಪಟ್ಟರೆ, ಮುಂದೆ ಕುಟುಂಬದ ಪರಿಸ್ಥಿತಿಯೇನು? ಮೋಜು–ಮಸ್ತಿ, ಸಾಹಸ, ದುಸ್ಸಾಹಸಕ್ಕೆ ಕೈ ಹಾಕುವಾಗ ಒಂದು ಬಾರಿ ಮನೆ ಸದಸ್ಯರನ್ನು ನೆನೆಪಿಸಿಕೊಳ್ಳಬೇಕು. ಅವರ ಮುಖವನ್ನು ಕಣ್ಮುಂದೆ ತಂದುಕೊಳ್ಳಬೇಕು. ನಮ್ಮನ್ನು ಎಷ್ಟು ನಂಬಿದ್ದಾರೆ, ಅವರ ಬದುಕಿಗೆ ನಾವು ಎಷ್ಟು ಅನಿವಾರ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹೊಟ್ಟೆಪಾಡಿಗಾಗಿ ಎಲ್ಲಿಗೋ ಬಂದು, ರಸ್ತೆಯಲ್ಲಿ ಪ್ರಾಣ ಕೊಟ್ಟು ಹೆತ್ತವರ ಕಣ್ಣಲ್ಲಿ ನೀರು ಸುರಿಯುವಂತೆ ಮಾಡಬಾರದು. ಕುಟುಂಬವನ್ನು ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಬಾರದು ಎನ್ನುವ ಭಾವಾರ್ಥ ಅವರ ನಲವತ್ತೈದು ನಿಮಿಷದ ಭಾಷಣದಲ್ಲಿ ಅಡಕವಾಗಿತ್ತು.

ಮೂರು ವರ್ಷಗಳಲ್ಲಿ 291 ಬಲಿ

ಅವಳಿನಗರದ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 291 ಜೀವಗಳು ಬಲಿಯಾಗಿವೆ. ಜತೆಗೆ 1,451 ಜನರು ಗಾಯಗೊಂಡಿದ್ದಾರೆ. 2017ರಲ್ಲಿ 87, 2018ರಲ್ಲಿ 84 ಹಾಗೂ 2019ರ ಜೂನ್‌ವರೆಗೆ 40 ಜನರು ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಹೊಸ ದಂಡ ಪದ್ಧತಿ ಜಾರಿ ಬಳಿಕ ನಿತ್ಯ ₹3 ಲಕ್ಷ ದಂಡ ಸಂಗ್ರಹವಾಗುತ್ತಿದೆ. 2017ರಲ್ಲಿ ಕೋಟಿ ಹಾಗೂ 2018ರಲ್ಲಿ ₹6 ಕೋಟಿ ದಂಡ ವಸೂಲಿಯಾಗಿದೆ. 2019ರಲ್ಲಿ ಜೂನ್‌ವರೆಗೆ ₹4 ಕೋಟಿ ದಂಡ ಸಂಗ್ರಹವಾಗಿದೆ. ನಗರವೇನೋ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಆದರೆ, ಮೂಲ ಸೌಲಭ್ಯಗಳಲ್ಲಿ ಒಂದಾದ ರಸ್ತೆಗಳು ಮಾತ್ರ ವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿಲ್ಲ. ರಸ್ತೆ ಕಾಮಗಾರಿ ನಡೆಯುವಾಗ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ ನಡುವೆ ಪರಸ್ಪರ ಹೊಂದಾಣಿಕೆಯೇ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಈ ನಡುವೆಯ, ಪೊಲೀಸ್‌ ಇಲಾಖೆ ಅಪಘಾತಗಳು ಸಂಭವಿಸುವ 14 ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನುವುದು ಸಹ ಸ್ವಾಗತಾರ್ಹ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT