ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಸಾಹಿತ್ಯ ಯಾತ್ರೆ.. ಈಗ ಜಾತ್ರೆ..: ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸವಿನೆನಪು

Last Updated 3 ಜನವರಿ 2019, 9:51 IST
ಅಕ್ಷರ ಗಾತ್ರ

ಹುಬ್ಬಳ್ಳಿ:‘ನಾನು ಆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ್ದೆ. ಸಾಹಿತ್ಯದಲ್ಲಿ ಅಪಾರ ಒಲವಿತ್ತು. ಒಂದಿಷ್ಟು ಸಾಹಿತ್ಯ ಓದಿಕೊಂಡಿದ್ದೆ; ಕವಿತೆಗಳನ್ನೂ ಬರೆದಿದ್ದೆ. ಹೀಗಾಗಿ ಸಾಹಿತಿ ಅಂದುಕೊಂಡೇ ಈ ಸಮ್ಮೇಳನಕ್ಕೆ ಬಹಳ ಕುತೂಹಲ ಹಾಗೂ ಪ್ರೀತಿಯಿಂದಲೇ ಹೋಗಿದ್ದೆ’ ಎಂದು 1957ರಲ್ಲಿ ಧಾರವಾಡದ ಆರ್‌.ಎಲ್‌.ಎಸ್‌ ಹೈಸ್ಕೂಲ್‌ (ರಾಜಾ ಲಖಮನಗೌಡ ಸರದೇಸಾಯಿ ಪ್ರೌಢಶಾಲೆ) ಆವರಣದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಮೆಲುಕು ಹಾಕಿದವರು ಹಿರಿಯ ಸಾಹಿತಿ, ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು.

ಆಗ ಕೂಡ (1957ರ ಮೇ7,8 ಹಾಗೂ 9) ಈಗಿನಂತೆ ಮೂರು ದಿನಗಳ ಸಮ್ಮೇಳನವೇ ನಡೆದಿತ್ತು. ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ಇರಲಿಲ್ಲ. ವಿವಿಧ ವಿಷಯಗಳ ಗೋಷ್ಠಿ, ಸಂವಾದ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕಗಳೆಲ್ಲ ಇದ್ದವು. ದೊಡ್ಡ ಪೆಂಡಾಲ್ ಹಾಕಿದ್ದರು. ರೊಟ್ಟಿ, ಪುಂಡಿಪಲ್ಲೆ, ಸ್ವಾದಿಷ್ಟ ಭೋಜನಗಳೆಲ್ಲ ಆಗಲೂ ಇದ್ದವು. ಆದರೆ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಿರುವ ನೆನಪಿಲ್ಲ. ಮೊದಲೇ ಹಣಕೊಟ್ಟ ಕಸಾಪ ಸದಸ್ಯರಿಗಷ್ಟೇ ಇತ್ತು ಅಂತ ನೆನಪು.’

‘ನನ್ನ ಸ್ನೇಹಿತ ಶಿವಶಂಕರ ಅವರು ನನ್ನನ್ನು ಕಸಾಪ ಸದಸ್ಯನನ್ನಾಗಿ ಮಾಡಿದ್ದರಿಂದ ಒಂದಿಷ್ಟು ಹೆಚ್ಚೇ ಜವಾಬ್ದಾರಿ ಇದೆ ಅಂತ ಅನ್ನಿಸಿತ್ತು. ಜತೆಗೆ ಚಂಪಾ ಹಾಗೂ ಗಿರಡ್ಡಿ ಗೋವಿಂದರಾಜ ಕೂಡ ಆ ಸಮ್ಮೇಳನಕ್ಕೆ ಬಂದಿದ್ದರು. ಚಂಪಾನ ಪರಿಚಯ ಮೊದಲೇ ಇತ್ತು. ಆದರೆ ರೋಣದಿಂದ ಬಂದಿದ್ದ ಗಿರಡ್ಡಿ ಪರಿಚಯ ಆಗ ಇರಲಿಲ್ಲ.ಒಟ್ಟಿನಲ್ಲಿ ನಾವೆಲ್ಲ ಖುಷಿಯಿಂದ ಪಾಲ್ಗೊಂಡಿದ್ದೆವು’

‘ಸಮ್ಮೇಳನದ ಮುಖ್ಯ ಆಕರ್ಷಣೆ ಕವಿ ಕುವೆಂಪು. ನನಗೆ ತಿಳಿದಂತೆ ಆಗ ಅವರು ‘ಕುವೆಂಪು’ ಎಂದೇನೂ ಪ್ರಸಿದ್ಧರಾಗಿರಲಿಲ್ಲ. ಕವಿ ಡಾ.ಕೆ.ವಿ.ಪುಟ್ಟಪ್ಪ ಎಂದೇ ಹೆಸರಿತ್ತು. ಅವರು ಕುಟುಂಬ ಸಮೇತರಾಗಿ ಬಂದಿದ್ದರು. ಪೂರ್ಣಚಂದ್ರ ತೇಜಸ್ವಿ ಕೂಡ ಜತೆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ಕುಲಪತಿ ಡಿ.ಸಿ.ಪಾವಟೆ ಅವರ ಕಾರಿನಲ್ಲಿಯೇ ಸಮ್ಮೇಳನಕ್ಕೆ ಬಂದುಹೋಗುತ್ತಿದ್ದರು. ವಿಶೇಷವೆಂದರೆ ಸಮ್ಮೇಳನಾಧ್ಯಕ್ಷರ ದೊಡ್ಡ ಮೆರವಣಿಗೆಯನ್ನು ಕುವೆಂಪು ನಯವಾಗಿ ನಿರಾಕರಿಸಿದ್ದರು. ಸಮ್ಮೇಳನದಲ್ಲಿ ಲಿಖಿತ ಭಾಷಣವನ್ನು ಗಂಭೀರವಾಗಿ ಓದಿದರು.ಕೊನೆಯಲ್ಲಿ ‘ಓ ನನ್ನ ಚೇತನಾ, ಆಗು ನೀ ಅನಿಕೇತನ’ ಕವಿತೆಯನ್ನು ಮೊದಲ ಸಲ ಅವರು ವೇದಿಕೆಯಲ್ಲಿ ಓದಿ ತಮ್ಮ ಭಾಷಣ ಮುಗಿಸಿದ್ದು ಈಗಲೂ ನೆನಪಿದೆ.’

‘ನಂತರ ಕವಿಗೋಷ್ಠಿಯೊಂದರ ಅಧ್ಯಕ್ಷತೆಯನ್ನು ಕುವೆಂಪು ವಹಿಸಿದ್ದರು. ಅಲ್ಲಿಯೂ ಒಂದು ಕವಿತೆಯನ್ನು ಓದಿದ್ದರು.ಅವರ ಅಧ್ಯಕ್ಷೀಯ ಭಾಷಣ ಗಂಭೀರವಾಗಿತ್ತು ನಿಜ. ಆದರೆ ನಮ್ಮೆಲ್ಲರಿಗೂ ಹುರುಪು ತುಂಬುವಂತೇನೂ ಇರಲಿಲ್ಲ. ಅಷ್ಟೇ ಅಲ್ಲ ಅವರು ಮೂರು ದಿನ ಇದ್ದರೂ ಅವರನ್ನು ಅಭಿಮಾನದಿಂದ ಮುತ್ತಿಕೊಂಡ ಯಾರಿಗೂ ತಮ್ಮ ಹಸ್ತಾಕ್ಷರ ಮಾತ್ರ ಕೊಡಲಿಲ್ಲ, ಅದರಿಂದ ನಮ್ಮ ಧಾರವಾಡ ಮಂದಿಗೆ ಬ್ಯಾಸರಾನೂ ಆಗಿತ್ತು’

‘ಸಮ್ಮೇಳನವನ್ನು ಎಸ್‌.ನಿಜಲಿಂಗಪ್ಪ ಅವರು ಉದ್ಘಾಟಿಸಿದ್ದರು. ಭಾಷಣ ಮಾಡಿದವರ ಪೈಕಿ ಆದ್ಯ ರಂಗಾಚಾರ್ಯರು (ಶ್ರೀರಂಗ), ಶ್ರೀನಿವಾಸ ಹಾವನೂರ, ಎಸ್‌.ಸಿ.ನಂದಿಮಠ, ರಾ.ಯ.ಧಾರವಾಡಕರ, ಕಸಾಪ ಅಧ್ಯಕ್ಷ ಬಿ.ಶಿವಮೂರ್ತಿ ಶಾಸ್ತ್ರಿ (ಇವರು ಸಾಹಿತಿ ಅನಕೃ ಅವರನ್ನು ಕೇವಲ 4 ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷರಾಗಿದ್ದರು!) ಇವರೆಲ್ಲ ಭಾಳ ಚಂದ ಭಾಷಣ ಮಾಡಿದ್ದರು’

‘ದ.ರಾ.ಬೇಂದ್ರೆ ಅವರು ನಿಜಾರ್ಥದಲ್ಲಿ ಆಗ ದೊಡ್ಡ ಆಕರ್ಷಣೆಯಾಗಿದ್ದರು. ಮೂರು ದಿನ ಹಕ್ಕಿ ಹಂಗೆ ಹಾರಾಡಿಕೊಂತ ಲವಲವಿಕೆಯಿಂದ ಸಮ್ಮೇಳನದಲ್ಲಿ ಓಡಾಡಿ ಎಲ್ಲರ ಮನ ಗೆದ್ದಿದ್ದರು. ಕವಿಗೋಷ್ಠಿಯಲ್ಲಿ ಕವನ ಓದಿದರು. ಅವರೊಂದಿಗೆ ಮಧುರ ಚೆನ್ನ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ ಅವರಂಥ ಘಟಾನುಘಟಿಗಳು ಇದ್ದರು. ನಿಜಾರ್ಥದಲ್ಲಿ ಈ ಸಮ್ಮೇಳನ ಸಾಹಿತ್ಯಯಾತ್ರೆಗೆ ಬಂದ್ಹಂಗ ಇತ್ತು...’

‘2ನೇ ದಿನ ಬೆಳಿಗ್ಗೆ ಒಂದು ವಿಷಾದಕರ ಘಟನೆ ನಡೀತು. ಸಮ್ಮೇಳನಕ್ಕಾಗಿ ಸಾಕಷ್ಟು ಸಹಾಯ ಮಾಡಿದ್ದ ಧಾರವಾಡ ಜಿಲ್ಲಾ ಕಲೆಕ್ಟರ್‌ ಆಗಿದ್ದ ಎಸ್‌.ವೆಂಕಟಾಚಲಂ ಅವರು ನಸುಕಿನ 5 ಗಂಟೆಗೆ ತೀರಿಕೊಂಡಿದ್ದರು. ಅವರು ಯುವ ಅಧಿಕಾರಿ. ಅವರ ಸಾವು ನಮಗೆಲ್ಲ ಆಘಾತಕಾರಿಯಾಗಿತ್ತು. ಆದರೆ ಸಮ್ಮೇಳನ ಮಾತ್ರ ಸುಸೂತ್ರವಾಗಿಯೇ ಮುಂದುವರಿಯಿತು.’

‘ಸಮ್ಮೇಳನದ 2ನೇ ದಿನ ಸಂಜೆ ಕೃಷ್ಣ ಕುಮಾರ್‌ ಕಲ್ಲೂರ ಅವರ ‘ಜಾಗೃತ ರಾಷ್ಟ್ರ’ ನಾಟಕ ಬಹಳ ಸುಂದರವಾಗಿ ಮೂಡಿಬಂದಿತ್ತು. ಒಟ್ಟಾರೆ ಇಡೀ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲು ಕಾರಣೀಕರ್ತರಾದವರು ಡಿ.ಸಿ.ಪಾವಟೆ,ಸದಾಶಿವ ಒಡೆಯರ್‌ ಹಾಗೂ ಕವಿ ಚೆನ್ನವೀರ ಕಣವಿ ಅವರು.’

‘ಆಗಲೂ ಕೂಡ ಈಗಿನಂತೆ ಸಮ್ಮೇಳನದ ಕೊನೆಯಲ್ಲಿ ಗೊತ್ತುವಳಿ ಅಂಗೀಕಾರ ಮಾಡಿದ್ದ ನೆನಪು...’ ಎಂದು ಗತ ಕಾಲದ ಸಮ್ಮೇಳನದ ನೆನಪುಗಳ ಮೆರವಣಿಗೆಯಲ್ಲಿ ಕರೆದೊಯ್ದರು ಸಿದ್ಧಲಿಂಗ ಪಟ್ಟಣಶೆಟ್ಟರು.

ಅಂದು ‘ಕುವೆಂಪು’ ಬಹುದೊಡ್ಡ ಆಕರ್ಷಣೆ...

ಮೊದಲ ಬಾರಿಗೆ ಮೈಸೂರು ಪ್ರಾಂತ್ಯದಿಂದ ಹೊರಗೆ ನಡೆದ ಸಮ್ಮೇಳನ ಎನ್ನುವುದು ಧಾರವಾಡದಲ್ಲಿ ನಡೆದ ಸಮ್ಮೇಳನದ ಹೆಗ್ಗಳಿಕೆ.

‘ಕುವೆಂಪು ಅವರೇ ಸಾಹಿತ್ಯ ಸಮ್ಮೇಳನದ ಬಹುದೊಡ್ಡ ಆಕರ್ಷಣೆಯಾಗಿದ್ದರು’ ಎನ್ನುತ್ತಾರೆ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪನವರು.

‘ಕುವೆಂಪು ಅವರನ್ನು ಹತ್ತಿರದಿಂದ ನೋಡಬೇಕು, ಕುವೆಂಪು ಅವರ ಮಾತು ಕೇಳಬೇಕು’ –ಇವೆರಡೇ 1957ರಲ್ಲಿ ಧಾರವಾಡದಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯ ಪ್ರೇಮಿಗಳ ಬಹುದೊಡ್ಡ ಆಸೆಗಳಾಗಿದ್ದವು. ಆ ಆಸೆಗಳನ್ನು ನಾಡಿನ ವಿವಿಧೆಡೆಗಳಿಂದ ಬಂದಿದ್ದ ಸಾಹಿತ್ಯ ಪ್ರೇಮಿಗಳು ಈಡೇರಿಸಿಕೊಂಡರು.’

‘ಕವಿ ಕುವೆಂಪು ಅವರನ್ನು ಆಗಿನ ಧಾರವಾಡ ವಿಶ್ವ ವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ ಅವರೇ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ಸಮ್ಮೇಳನದ ಅಧ್ಯಕ್ಷರಾಗಿ ಕುವೆಂಪು ಬಂದಿದ್ದರು. ಆಗ ನಾನು ಸಿಂಡಿಕೇಟ್‌ ಸದಸ್ಯನಾಗಿದ್ದೆ’ ಎಂದು ಆ ಕಾಲವನ್ನು ಪುಟ್ಟಪ್ಪ ಮೆಲುಕು ಹಾಕಿದರು.

ಸಮ್ಮೇಳನದ ಜತೆಗೆ ಧಾರವಾಡ ವಿವಿಯ ಘಟಿಕೋತ್ಸವ ಕೂಡ ಇತ್ತು. ಅಲ್ಲಿಯೂ ಕುವೆಂಪು ಪಾಲ್ಗೊಂಡಿದ್ದರು. ಧಾರವಾಡದಲ್ಲಿ ಆಗ ನಡೆದ ಸಾಹಿತ್ಯ ಸಮ್ಮೇಳನ ಈಗಿನಂತೆ ಅದ್ಧೂರಿ ಮೆರವಣಿಗೆ, ಭಾರಿ ಭೋಜನ ವ್ಯವಸ್ಥೆಯಾಗಲಿ ಇದ್ದಿರಲಿಲ್ಲ’ ಎಂದು ನೆನಪಿಸಿಕೊಂಡರು.

ಆಗಿನದು ಈಗಿನಂತೆ ಬಹುಕೋಟಿ ವೆಚ್ಚದ ಅದ್ಧೂರಿ ಸಮ್ಮೇಳನವಲ್ಲ. ಈಗಿನಂತೆ ಹತ್ತಾರು ಕೋಟಿ ಹಣವನ್ನು ಸಮ್ಮೇಳನದ ಖರ್ಚಿಗಾಗಿ ಸರ್ಕಾರ ಕೊಡುತ್ತಿರಲಿಲ್ಲ. ಈಗಿನ ಸಮ್ಮೇಳನದ ಬಗ್ಗೆ ನನಗೇನೂ ಕುತೂಹಲವಿಲ್ಲ. ಒಂದರ್ಥದಲ್ಲಿ ಹಣ ಪೋಲು ಅಷ್ಟೆ ಎನ್ನುತ್ತಾರೆ ಪಾಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT