ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ–ಕಾಲೇಜುಗಳ ಪುನರಾರಂಭ; ಮೊದಲ ದಿನ ಮಿಶ್ರ ಪ್ರತಿಕ್ರಿಯೆ

ಮಕ್ಕಳಿಗೆ ಸಿಹಿ ವಿತರಿಸಿ ಸ್ವಾಗತ
Last Updated 1 ಜನವರಿ 2021, 13:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾದಿಂದಾಗಿ ಮುಚ್ಚಿದ್ದ ಶಾಲಾ– ಕಾಲೇಜುಗಳು ಶುಕ್ರವಾರದಿಂದ ಪುನರಾರಂಭವಾಗಿದ್ದು, ಮೊದಲ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ತಿಂಗಳುಗಳ ಬಳಿಕ ತೆರೆದ ಶಾಲೆಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗಿತ್ತು. ಕೆಲವೆಡೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಚಾಕಲೇಟ್ ನೀಡಿ ಸ್ವಾಗತಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿವರೆಗೆ ನಿತ್ಯ ಹಾಗೂ 6ರಿಂದ 9ನೇ ತರಗತಿವರೆಗೆ ವಿದ್ಯಾಗಮದ ತರಗತಿಗಳು ಇಂದು ಜರುಗಿದವು.ಕೆಲವೆಡೆ ಪೋಷಕರೇ ಮಕ್ಕಳನ್ನು ಶಾಲೆಗೆ ಕರೆತಂದು ಬಿಟ್ಟು ಹೋದರು. ಬಹುತೇಕಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅರ್ಧದಷ್ಟಿತ್ತು.

ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿದರು. ಎಲ್ಲರೂ ಮಾಸ್ಕ ಧರಿಸಿದ್ದರು. ವಿದ್ಯಾರ್ಥಿಗಳು ತಂದಿದ್ದ ಪೋಷಕರ ಒಪ್ಪಿಗೆ ಪತ್ರವನ್ನು ಸಿಬ್ಬಂದಿ ಪರಿಶೀಲಿಸಿ ತರಗತಿಗೆ ಪ್ರವೇಶ ನೀಡಿದರು.

ಅರ್ಧದಷ್ಟು ಹಾಜರಿ:‘ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ 333 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿದ್ದು, ಎಲ್ಲಾ ಕಡೆ ಶೇ 40–50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿರುವ ವರದಿಯಾಗಿದೆ. ಮೊದಲ ದಿನವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ಒಂದೆರಡು ದಿನದೊಳಗೆ ಯಥಾ ರೀತಿ ಎಲ್ಲರೂ ಶಾಲೆಗೆ ಬರಲಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗ್ರಾಮೀಣ ತಾಲ್ಲೂಕಿನಲ್ಲಿ 223 ಶಾಲೆಗಳಿದ್ದು, ಎಲ್ಲಾ ಕಡೆ ಅರ್ಧದಷ್ಟು ವಿದ್ಯಾರ್ಥಿಗಳು ಬಂದಿದ್ದಾರೆ. ಮಾರ್ಗಸೂಚಿ ಪ್ರಕಾರ ಕೋವಿಡ್ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಹುಷಾರಾಗುವವರೆಗೆ ಶಾಲೆಗೆ ಕಳಿಸದಂತೆ ಪೋಷಕರಿಗೆ ಸೂಚನೆ ನೀಡಿದ್ದೇವೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ತಿಳಿಸಿದರು.

ಕೆಲ ಪಿಯು ಕಾಲೇಜುಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಕಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ನಗರದಕಾಡಸಿದ್ದೇಶ್ವರ ಕಲಾ ಮತ್ತು ಎಚ್‌.ಎಸ್. ಕೋತಂಬರಿ ವಿಜ್ಞಾನ ಪಿಯು ಕಾಲೇಜಿನಲ್ಲಿ ಶೇ 80ರಷ್ಟು ವಿಜ್ಞಾನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.

‘ವಿಜ್ಞಾನ ಕಾಲೇಜಿನ127ರ ಪೈಕಿ 75 ವಿದ್ಯಾರ್ಥಿಗಳು ಬಂದಿದ್ದರು. ಕಲಾ ವಿಭಾಗದಲ್ಲಿ ಮಾತ್ರ ಶೇ 25ರಷ್ಟು ವಿದ್ಯಾರ್ಥಿಗಳಿದ್ದರು’ ಎಂದು ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು

‘ಆನ್‌ಲೈನ್ ತರಗತಿಗಿಂತ ಶಾಲೆಗೆ ಬಂದು ಪಾಠ ಕೇಳುವುದೇ ಹೆಚ್ಚು ಖುಷಿ ಕೊಡುತ್ತದೆ. ಬಹಳ ದಿನಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ’ ಎಂದು ಪೆಂಡಾರ ಗಲ್ಲಿ ಶಾಲೆ ವಿದ್ಯಾರ್ಥಿಗಳಾದದಾನೇಶ್ವರಿ ಪಾಟೀಲ ಮತ್ತುವಿಜಯಲಕ್ಷ್ಮಿ ಕುಬಸದ ಸಂತಸ ವ್ಯಕ್ತಪಡಿಸಿದರು.

ಸಚಿವ, ಶಾಸಕರ ಭೇಟಿ:ಕುಸುಗಲ್ ರಸ್ತೆಯಲ್ಲಿರುವ ಸಚಿವ ಸೇಂಟ್ ಮೈಕಲ್ ಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜತೆ ಸಂವಾದ ನಡೆಸಿದರು. ಪೆಂಡಾರ ಗಲ್ಲಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭೇಟಿ ನೀಡಿ, ಮೊದಲ ದಿನದ ಸಿದ್ಧತೆಯನ್ನು ಪರಿಶೀಲಿಸಿದರು.

ಚಾಕಲೇಟ್, ನೋಟ್ ಬುಕ್, ಮಾಸ್ಕ್ ವಿತರಣೆ

ತಾಲ್ಲೂಕಿನ ಕಟ್ನೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಗೋರ್ಲ ಅವರು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ವತಿಯಿಂದ ಎಸ್ಸೆಸ್ಸೆಲ್ಸಿಯ 180 ಮಕ್ಕಳಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು.

ವರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದವರಿಗೆ ನೋಟ್ ಪುಸ್ತಕಗಳು ವಿತರಿಸಲಾಯಿತು. ಹುಬ್ಬಳ್ಳಿಯ ವಿಶ್ವೇಶ್ವರನಗರದಲ್ಲಿರುವ ಸರ್ಕಾರಿ ಶಾಲೆ ಮಕ್ಕಳಿಗೆ ರೋಟರಿ ಕ್ಲಬ್‌ನವರು ಮಾಸ್ಕ್‌, ಪೆನ್ ಹಾಗೂ ನೋಟ್ ಬುಕ್‌ಗಳನ್ನು ನೀಡಿದರು.

ಅಮರಗೋಳ ಗೆಳೆಯರ ಬಳಗದ ವತಿಯಿಂದ ಗ್ರಾಮದ ಕನ್ನಡ ಹಿರಿಯ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್ ಅನ್ನು ವಿತರಿಸಲಾಯಿತು. ಹಳೇ ಹುಬ್ಬಳ್ಳಿಯ ಬಾಣತಿಕಟ್ಟಾದಲ್ಲಿರುವ ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಅಲ್ತಾಫ ಕಿತ್ತೂರ ಹೂ ನೀಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT