ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯ ಸ್ಕಾರ್ಪಿಯೊ ಮಧ್ಯಪ್ರದೇಶದಲ್ಲಿ ಪತ್ತೆ!

Last Updated 5 ಜುಲೈ 2018, 17:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ತಿಂಗಳು ಇಲ್ಲಿನ ಸೆಟ್ಲ್‌ಮೆಂಟ್‌ನ ಬಾಳವ್ವನ ಚೌಕದಿಂದ ಕಳುವಾಗಿದ್ದ ₹ 16 ಲಕ್ಷ ಮೌಲ್ಯದ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಬೆಂಡಿಗೇರಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಾಳವ್ವ ಚೌಕ 7ನೇ ಕ್ರಾಸ್‌ ನಿವಾಸಿ ಅರುಣ ದತ್ತವಾಡ ಅವರು ಮನೆ ಎದುರು ನಿಲ್ಲಿಸಿದ್ದ ವಾಹನವನ್ನು ಕಳ್ಳರು ಎಗರಿಸಿದ್ದರು. ಈ ಕುರಿತು ಅರುಣ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ಆ ಕಾರು ಮಧ್ಯಪ್ರದೇಶದ ನಿಮುಚ್‌ ಜಿಲ್ಲೆಯ ಹಂಗಾರಿಯಾ ಎಂಬ ಗ್ರಾಮದಲ್ಲಿ ಪತ್ತೆಯಾಗಿತ್ತು!

ಕಾರು ಕಳುವಾದ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ಮೊದಲು ಮಾಡಿದ ಕೆಲಸ ಮನೆ ಸುತ್ತಮುತ್ತಲಿನ ಸಿ.ಸಿ. ಟಿ.ವಿ. ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದು. ಆದರೆ, ಅದರಲ್ಲಿ ಅಂತಹ ಪೂರಕ ಮಾಹಿತಿ ಸಿಗಲಿಲ್ಲ. ಆದರೆ, ವೈಜ್ಞಾನಿಕವಾಗಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಾಹನದ ಚಾಸಿ ನಂಬರ್‌ ಹಾಗೂ ಎಫ್ಐಆರ್‌ ಪ್ರತಿಯನ್ನು ಭಾರತದಾದ್ಯಂತ ಇರುವ ಎಲ್ಲ ಮಹೀಂದ್ರ ಶೋರೂಮ್‌ಗಳು ಹಾಗೂ ಸರ್ವಿಸ್‌ ಸೆಂಟರ್‌ಗಳಿಗೆ ರವಾನಿಸಿದರು.

10 ದಿನಗಳ ಹಿಂದೆ ನಿಮುಚ್‌ನಲ್ಲಿ ಕಳ್ಳರು ಈ ಕಾರನ್ನು ಸರ್ವಿಸ್‌ಗೆ ಬಿಟ್ಟಿದ್ದರು. ಗಾಡಿಯ ಚಾಸಿ ನಂಬರ್‌ ಪತ್ತೆ ಹಚ್ಚಿದ ಸರ್ವಿಸ್‌ ಸೆಂಟರ್‌ ಸಿಬ್ಬಂದಿ ಬೆಂಡಿಗೇರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತನಿಖಾ ತಂಡದ ಸದಸ್ಯರು ಮಧ್ಯಪ್ರದೇಶಕ್ಕೆ ತೆರಳಿ ಕಾರನ್ನು ವಶಕ್ಕೆ ಪಡೆದರು ಎಂದು ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಫ್ಟ್‌ವೇರ್‌ ಬದಲು: ದುಬಾರಿ ವಾಹನ ಮಹೀಂದ್ರ ಸ್ಕಾರ್ಪಿಯೊವನ್ನು ಅಷ್ಟು ಸುಲಭವಾಗಿ ಕದಿಯಲಾಗದು. ಆದರೂ, ಚಾಲಾಕಿ ಕಳ್ಳರು ವಾಹನದ ಸಾಫ್ಟ್‌ವೇರ್‌ ಬದಲಿಸಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದರು. ಸಾಫ್ಟ್‌ವೇರ್‌ನ ನೇವಿಗೇಶನ್‌ ನೋಡಿದಾಗ ಪಾಕಿಸ್ತಾನದ ಗಡಿಯಲ್ಲಿ ವಾಹನ ಸಂಚಾರ ನಡೆಸಿರುವುದು ಗೊತ್ತಾಯಿತು. ಮಧ್ಯಪ್ರದೇಶಕ್ಕೆ ತೆರಳಿದ ಸಿಬ್ಬಂದಿ ವಾಹನದ ಒಳಹೊಕ್ಕು ನೋಡಿದಾಗ ಗಾಂಜಾದ ವಾಸನೆ ಬಡಿಯಿತು. ಕಾರಿನ ಗಾಜು, ನಂಬರ್‌ ಪ್ಲೇಟ್‌ ಬದಲಾಯಿಸಿದ್ದರು. ಬ್ರೆಕ್‌ ಲೈಟ್‌ಗಳನ್ನು ತೆರವುಗೊಳಿಸಿದ್ದರು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT