ಸೋಮವಾರ, ಜೂನ್ 14, 2021
22 °C
ವಾಹನಗಳ ಮೇಲೆ ಅನಗತ್ಯವಾಗಿ ಸಂಚರಿಸುವವರಿಗೆ ಎಚ್ಚರಿಕೆ ನೀಡಿದ ಪೊಲೀಸ್‌ ಕಮಿಷನರ್‌

ಹುಬ್ಬಳ್ಳಿ: ನಿಯಮ‌ ಮೀರಿದವರ ವಾಹನಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್ ನಿಷೇಧಾಜ್ಞೆಯ ಹೊಸ ನಿಯಮಗಳು ಸೋಮವಾರದಿಂದ ಜಾರಿಗೆ ಬಂದಿದ್ದು, ನಗರದಲ್ಲಿ ಪೊಲೀಸರು ಬೆಳಿಗ್ಗೆಯಿಂದಲೇ ಕಾರ್ಯನಿರತರಾಗಿದ್ದರು. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಅನಗತ್ಯವಾಗಿ ಬೈಕ್‌ ಮೇಲೆ ಸಂಚರಿಸುವವರನ್ನು ತರಾಟೆಗೆ ತೆಗೆದುಕೊಂಡು, ಬೈಕ್‌ಗಳನ್ನು ವಶಕ್ಕೆ ಪಡೆದರು.

ವಿವಿಧ ಬಡಾವಣೆಗಳಿಂದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಸಂಚಾರ ಬಂದ್ ಮಾಡಿದ್ದರು. ಚನ್ನಮ್ಮ ವೃತ್ತ, ಕೋರ್ಟ್ ವೃತ್ತ, ಕೇಶ್ವಾಪುರ ವೃತ್ತ, ಹೊಸೂರು ವೃತ್ತಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನು ತಡೆದು, ಚಾಲಕರನ್ನು ವಿಚಾರಿಸಿ ಮುಂದೆ ಬಿಡುತ್ತಿದ್ದರು. ಅನಗತ್ಯವಾಗಿ ಸಂಚರಿಸುತ್ತಿದ್ದವರ ಬೈಕ್, ರಿಕ್ಷಾಗಳನ್ನು ವಶಕ್ಕೆ ಪಡೆದರು.

ತಳ್ಳುಗಾಡಿ ಮೂಲಕ ಸಂಜೆ ಆರರವರೆಗೂ ತರಕಾರಿ, ಹಣ್ಣು ವ್ಯಾಪಾರಕ್ಕೆ ಅವಕಾಶ ನೀಡಿದ್ದಲ್ಲದೆ, ಬಡಾವಣೆಗಳಿಗೂ ತೆರಳಿ ವ್ಯಾಪಾರ ನಡೆಸಲು ಅನುಕೂಲ‌ ಮಾಡಿಕೊಡಲಾಗಿದೆ. ಆದರೂ, ನಗರದ ಜನತೆ ಮಾತ್ರ ಬೆಳಿಗ್ಗೆ ಹತ್ತರ ಒಳಗೇ ತರಕಾರಿ ಖರೀದಿಸಲು ಮನೆಯಿಂದ ಹೊರಗೆ ಬಂದಿದ್ದರು. ಕಾಲ್ನಡಿಗೆಯಲ್ಲಿಯೇ ತರಕಾರಿ ಖರೀದಿಸಲು ಬರಬೇಕೆನ್ನುವ ಆದೇಶದ ಹಿನ್ನೆಲೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ‌ ಬಂದಿದ್ದರು. ಕೇಶ್ವಾಪುರದ ರಸ್ತೆ ಅಕ್ಕಪಕ್ಕ ಜಾತ್ರೆಗೆ ತೆರಳುತ್ತಿದ್ದಂತೆ ಮಹಿಳೆಯರು ಕಂಡುಬಂದರು.

ಪೊಲೀಸ್ ಕಮಿಷನರ್ ಲಾಬೂರಾಮ್ ಮತ್ತು‌‌ ಡಿಸಿಪಿ ಕೆ. ರಾಮರಾಜನ್ ನಗರದಾದ್ಯಂತ ಸಂಚರಿಸಿ, ಪೊಲೀಸರು‌ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಚನ್ನಮ್ಮ ವೃತ್ತದಲ್ಲಿ ಸಂಚರಿಸುತ್ತಿದ್ದ ಪ್ರತಿಯೊಂದು ವಾಹನವನ್ನು ತಡೆದು, ಅನುಮಾನ ಬಂದವರ ವಾಹನಗಳನ್ನು ವಶಕ್ಕೆ ಪಡೆದರು.

ಕೆಲವರು ಔಷಧಿ ಅಂಗಡಿಗೆ ಬಂದಿದ್ದೇವೆ ಎಂದು ಹಳೆಯ ಚೀಟಿ ತೋರಿಸಿದರೆ, ಕೆಲವರು ‘ಕೋವಿಡ್ ಅಗತ್ಯ ಸೇವೆ’ ಎಂದು ಬರೆಸಿ ಬೈಕ್‌ಗೆ, ಟ್ಯಾಕ್ಸಿಗೆ ಅಂಟಿಸಿಕೊಂಡು ಬಂದಿದ್ದರು. ಅವರ ಸಂಪೂರ್ಣ ಮಾಹಿತಿ ಪಡೆದು, ಗುರುತು ಪತ್ರ ಪರಿಶೀಲಿಸಿ, ಸುಳ್ಳು ಹೇಳಿ ಸಂಚರಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಈ ವೇಳೆ ಮಾಧ್ಯಮದವರೊಂದಗೆ ಮಾತನಾಡಿದ ಅವರು, ‘ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ತುರ್ತು ಸೇವೆ, ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತುರ್ತು ಸೇವೆ ಎಂದು ಸುಳ್ಳು ಫಲಕ ಅಂಟಿಸಿಕೊಂಡು ಒಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಅನಗತ್ಯವಾಗಿ ಸಂಚರಿಸುವವರಿಂದ ನಾವು ಸಹ ಸಮಸ್ಯೆ ಅನುಭವಿಸುವಂತಾಗಿದೆ. ಕಾಲ್ನಡಿಗೆಯಲ್ಲಿ ಬಂದು ದಿನಸಿ ಖರೀದಿಸಬೇಕೆಂದರೆ, ನನ್ನಂತಹ ವಯಸ್ಸಾದವರಿಗೆ ಕಷ್ಟ. ಎಲ್ಲ ದಿನಸಿ ಮನೆ ಹತ್ತಿರ ಇರುವ ಅಂಗಡಿಗಳಲ್ಲಿ ಸಿಗುವುದಿಲ್ಲ. ತರಕಾರಿ ಸಹ ಬಡಾವಣೆಗಳಿಗೆ ಬರುವುದಿಲ್ಲ. ಬೆಳಿಗ್ಗೆ ಸಮಯವಾದರೂ ಬೈಕ್‌ಲ್ಲಿ ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡಬೇಕು’ ಎಂದು ಕುಸಗಲ್ ರಸ್ತೆಯ ರಾಮನಗರ ನಿವಾಸಿ ಹನ್ಮಂತಪ್ಪ ದುಂಡಗಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು