ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ | ಶೆಟ್ಟರ್‌ ವಾಪಸ್; ಕಾಂಗ್ರೆಸ್‌ಗೆ ಸವಾಲು

ಯಾರಿಗೆ ಒಲಿಯಲಿದೆ ವಿಧಾನ ಪರಿಷತ ಸದಸ್ಯ ಸ್ಥಾನ?
ಶ್ರೀಕಾಂತ ಕಲ್ಲಮ್ಮನವರ
Published 31 ಜನವರಿ 2024, 6:03 IST
Last Updated 31 ಜನವರಿ 2024, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂಬತ್ತೇ ತಿಂಗಳಲ್ಲಿ ಮಾತೃಪಕ್ಷ ಬಿಜೆಪಿಗೆ ಜಗದೀಶ ಶೆಟ್ಟರ್‌ ವಾಪಸ್ಸಾಗಿದ್ದು ಧಾರವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್‌ ವಲಯದಲ್ಲಿ ಅಚ್ಚರಿ, ಆಘಾತದ ಜೊತೆಗೆ ಅಸಮಾಧಾನ ವ್ಯಕ್ತವಾಗಿದೆ. ಈ ಬೆಳವಣಿಗೆಯು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ.

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್‌ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿತ್ತು. ಆದರೆ, 35 ಸಾವಿರಕ್ಕೂ ಹೆಚ್ಚು ಮತಗಳಿಂದ ಶೆಟ್ಟರ್ ಸೋತರು. ಇಷ್ಟು ದೊಡ್ಡ ಅಂತರದಲ್ಲಿ ಹಿಂದೆ ಕಾಂಗ್ರೆಸ್‌ ಸೋತಿರಲಿಲ್ಲ. ಪಕ್ಷದ ಸಾಂಪ್ರದಾಯಿಕ ಮತದಾರರಾದ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗದವರು ದೂರ ಸರಿದಿದ್ದೇ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ಹೊಂದಿದ್ದ ಹಲವು ಕಾಂಗ್ರೆಸ್‌ ಮುಖಂಡರ ಭವಿಷ್ಯಕ್ಕೂ ಇದು ಹೊಡೆತ ಕೊಟ್ಟಿತ್ತು. ಈಗ ಪುನಃ ಆ ಮುಖಂಡರ ಮನವೊಲಿಸಿ, ಲೋಕಸಭೆ ಚುನಾವಣೆಗೆ ಅಣಿಗೊಳಿಸುವ ಜವಾಬ್ದಾರಿ ಪಕ್ಷದ ಹಿರಿಯ ಮುಖಂಡರ ಮೇಲಿದೆ. ಇದಲ್ಲದೇ, ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಜಾತಿ ಲೆಕ್ಕಾಚಾರ, ಹಿರಿತನ ಹಾಗೂ ಅನುಭವ ಎಲ್ಲವನ್ನೂ ಪರಿಗಣಿಸಬೇಕಿದೆ.

‘ಮುಖಂಡರು ಹೀಗೆ ಬಂದು, ವಾಪಸ್‌ ಹೋದರೆ ನಮ್ಮ ಸ್ಥಿತಿ ಏನಾಗಬಾರದು. ಇಷ್ಟು ವರ್ಷ ನಾವು ದುಡಿದ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಇಲ್ಲಿದ್ದಾಗ ಅವರ ಪರ ಘೋಷಣೆ ಕೂಗಿದ ನಮಗೆ ಈಗ ಅವರ ವಿರುದ್ಧ ಘೋಷಣೆ ಕೂಗುವುದು ಹೇಗೆ? ಇವರ ನಡುವೆ ನಮ್ಮ ಭವಿಷ್ಯದ ಕಥೆ ಏನು’ ಎಂದು ಕಾರ್ಯಕರ್ತರೊಬ್ಬರು ಅಳಲು ತೋಡಿಕೊಂಡರು.

ಪಕ್ಷ ಸೇರ್ಪಡೆಗೆ ತಾತ್ಕಾಲಿಕ ತಡೆ:

ಕಾಂಗ್ರೆಸ್‌ ಕಡೆ ಮುಖ ಮಾಡಿದ್ದ ಬಿಜೆಪಿಯ ಕೆಲ ನಾಯಕರು ಈಗ ಹಿಂದೇಟು ಹಾಕಿದ್ದಾರೆ. ಶೆಟ್ಟರ್‌ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ  ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದ ಕುಂದಗೋಳದ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ.

ವಿಧಾನ ಪರಿಷತ್ ಸದಸ್ಯ ಯಾರು?:

ಜಗದೀಶ ಶೆಟ್ಟರ್‌ ಪಕ್ಷದ ತೊರೆದು ರಾಜೀನಾಮೆ ಸಲ್ಲಿಸಿರುವ ವಿಧಾನ ಪರಿಷತ್ತು ಸದಸ್ಯ ಸ್ಥಾನ ಯಾರಿಗೆ ದೊರೆಯಲಿದೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಆ ಸ್ಥಾನ ನೀಡಬೇಕೆಂಬ ಬೇಡಿಕೆ ವ್ಯಕ್ತಾಗಿದೆ. ಇದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಅವರ ಮುಂದಿನ ನಡೆಯ ನಿರೀಕ್ಷೆಯಲ್ಲಿ ಹಲವರು ಇದ್ದಾರೆ.

ಕಾಂಗ್ರೆಸ್‌ ಪಕ್ಷದ ಕೈ ಚಿಹ್ನೆ
ಕಾಂಗ್ರೆಸ್‌ ಪಕ್ಷದ ಕೈ ಚಿಹ್ನೆ

* 9 ತಿಂಗಳಲ್ಲಿ ಜಗದೀಶ ಶೆಟ್ಟರ್‌ ಬಿಜೆಪಿಗೆ ವಾಪಸ್‌ * ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಹೆಚ್ಚು ಮುತುವರ್ಜಿ * ಕಾಂಗ್ರೆಸ್‌ ಸೇರ್ಪಡೆಗೆ ತಾತ್ಕಾಲಿಕ ತಡೆ

- ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದು ನಿಜ. ಆದರೆ ಅಧಿಕೃತವಾಗಿ ಕಾಂಗ್ರೆಸ್‌ ಸೇರಿರಲಿಲ್ಲ. ಸದ್ಯಕ್ಕೆ ನಾನು ಪಕ್ಷೇತರ ಇದ್ದೇನೆ. ಮುಂದಿನ ನಡೆ ಬಗ್ಗೆ ಇನ್ನೂ ಯೋಚಿಸಿಲ್ಲ.
ಎಸ್‌.ಐ. ಚಿಕ್ಕನಗೌಡ್ರ ಮಾಜಿ ಶಾಸಕ
ವಿಧಾನ ಪರಿಷತ್ತು ಸದಸ್ಯ ಸ್ಥಾನಕ್ಕೆ ಕಾರ್ಯಕರ್ತರನ್ನು ನೇಮಿಸುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನಾನೂ ಸೇರಿ ಹಲವರು ಆಕಾಂಕ್ಷಿಯಾಗಿದ್ದೇವೆ.
ಅನಿಲಕುಮಾರ ಪಾಟೀಲ ಅಧ್ಯಕ್ಷ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT