ಶುಕ್ರವಾರ, ನವೆಂಬರ್ 15, 2019
27 °C

ಶೂಟೌಟ್‌: ಬಿಹಾರ ಮೂಲದ ವ್ಯಕ್ತಿ ಸಾವು

Published:
Updated:
Prajavani

ಹುಬ್ಬಳ್ಳಿ: ಬಿಹಾರ ಮೂಲದ ಪರ್ವೇಶ ಸಿಂಗ್‌ (35) ಎಂಬವರನ್ನು ಇಲ್ಲಿನ ಗೋಕುಲ ರಸ್ತೆ ಮಂಜುನಾಥ ನಗರದ ಕೊಠಾರಿ ಬಡಾವಣೆ ಬೀದಿಯಲ್ಲಿ ದುಷ್ಕರ್ಮಿಗಳು ಶನಿವಾರ ರಾತ್ರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಸ್ಕೂಟಿ ಮೇಲೆ ಹೊರಟಿದ್ದಾಗ ರಾತ್ರಿ 7.30ರ ವೇಳೆ ಶೂಟೌಟ್ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಏಕಾಏಕಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿಂಗ್‌ ಅವರು ರಿಲಯನ್ಸ್ ಟವರ್‌ ಅಳವಡಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿಗೆ ಬಂದು ಎರಡು ವರ್ಷಗಳಾಗಿದ್ದು, ಎರಡು ತಿಂಗಳ ಹಿಂದಷ್ಟೇ ಪತ್ನಿ ಪ್ರೀತಿ ಹಾಗೂ ಮೂರು ವರ್ಷದ ಮಗನನ್ನು ಕರೆಸಿಕೊಂಡಿದ್ದರು. ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾರೆ.

ನಿವೃತ್ತ ಪೊಲೀಸ್ ಸಿಬ್ಬಂದಿ ಕಲ್ಲಪ್ಪ ಗುಳ್ಳಪ್ಪ ಕೆಲಗೇರಿ ಅವರ ಮನೆಯಲ್ಲಿ ಬಾಡಿಗೆ ಇದ್ದ ಪರ್ವೇಶ, ಪತ್ನಿ ಪ್ರೀತಿ ಹೆಸರಲ್ಲಿ ಗಬ್ಬೂರ ಕ್ರಾಸ್‌ನಲ್ಲಿ ಟ್ರಾನ್ಸ್‌ಪೋರ್ಟ್‌ ವ್ಯವಹಾರ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದರು.

ಕೊಲೆಗೆ ಕಾರಣ ಗೊತ್ತಾಗಿಲ್ಲ. ವ್ಯವಹಾರದಲ್ಲಿ ಯಾರೊಂದಿಗಾದರೂ ದ್ವೇಷವಿತ್ತೇ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಪ್ರಕರಣ ನಡೆದ ಕೊಠಾರಿ ಬಡಾವಣೆ ಸುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಬೆರಳಚ್ಚು ತಜ್ಞ ಸಿಬ್ಬಂದಿ, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪೊಲೀಸ್ ಕಮಿಷನರ್‌ ಆರ್. ದಿಲೀಪ್, ಡಿಸಿಪಿಗಳಾದ ಡಿ.ಎಲ್. ನಾಗೇಶ್, ಶಿವಕುಮಾರ ಗುಣಾರೆ, ಹಾಗೂ ಎಸಿಪಿ ಎಚ್.ಕೆ. ಪಠಾಣ, ಗೋಕುಲ್ ರಸ್ತೆ ಇನ್‌ಸ್ಪೆಕ್ಟರ್‌ ನಿಂಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಕ್ರಿಯಿಸಿ (+)