ಮಂಗಳವಾರ, ಮಾರ್ಚ್ 21, 2023
28 °C
ಕಮಿಷನರ್‌ ಗುಪ್ತಾ ಸಿಎಆರ್‌ ಡಿಸಿಪಿಗೆ ಪತ್ರ; ಶಸ್ತ್ರಸಜ್ಜಿತ ಸಿಬ್ಬಂದಿಯ ಬೆಂಗಾವಲಿಗೆ ಸೂಚನೆ

ಪತ್ರ ವ್ಯವಹಾರಕ್ಕೆ ಕಡಿವಾಣ; ಸಿಎಆರ್‌ಗೆ ಜವಾಬ್ದಾರಿ

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೈದಿಗಳನ್ನು ನ್ಯಾಯಾಲಯಕ್ಕೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು‌ ಹು–ಧಾ ಪೊಲೀಸ್ ಕಮಿಷನರೇಟ್ ಘಟಕ ಸರಳೀಕರಿಸಿದೆ. ಪ್ರತಿಬಾರಿಯೂ ಕಮಿಷನರ್ ಜೊತೆ ನಡೆಯುತ್ತಿದ್ದ ಪತ್ರ ವ್ಯವಹಾರಕ್ಕೆ ಕಡಿವಾಣ ಹಾಕಿ, ಪೊಲೀಸ್‌ ಬೆಂಗಾವಲಿನೊಂದಿಗೆ ಅವರನ್ನು ಕರೆದೊಯ್ಯುವ ಹೊಣೆಯನ್ನು ನಗರ ಸಶಸ್ತ್ರ ಮೀಸಲು ಪಡೆಗೆ (ಸಿಎಆರ್) ವಹಿಸಿದೆ.

ಸಿಎಆರ್‌ನಲ್ಲಿ ಸಿಬ್ಬಂದಿ ಕೊರತೆಯೆಂದು, ಅಪರಾಧ ಪ್ರಕರಣ ದಾಖಲಾದ ಆಯಾ ಠಾಣೆಯ ಸಿಬ್ಬಂದಿಯೇ ಕಾರಾಗೃಹದಲ್ಲಿದ್ದ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು. ಶಸ್ತ್ರಾಸ್ತ್ರಗಳಿಲ್ಲದೆ ಕೇವಲ ಹ್ಯಾಂಡ್‌ಕಫ್ ಹಾಕಿ, ಆಟೊ, ಬಸ್ ಅಥವಾ ಬೈಕ್‌ನಲ್ಲಿ ಕರೆದೊಯ್ದು ಹಾಜರು ಪಡಿಸುತ್ತಿದ್ದರು. ಕೈದಿ ತಪ್ಪಿಸಿಕೊಳ್ಳುವ ಹಾಗೂ ಅವರಿಗೆ ಅಪಾಯ ಎದುರಾಗುವ ಸಾಧ್ಯತೆಯೂ ಇತ್ತು. ಶಸ್ತ್ರಾಸ್ತಗಳಿಲ್ಲದೆ ಕರೆದೊಯ್ಯುವುದು ನಿಯಮಾವಳಿ ಉಲ್ಲಂಘನೆ ಆಗಿದೆ. ಈ ಕುರಿತು ‘ಪ್ರಜಾವಾಣಿ’ ಪತ್ರಿಕೆ ‘ಇಲ್ಲ ಶಸ್ತ್ರಾಸ್ತ್ರ, ಹ್ಯಾಂಡ್‌ಕಫ್‌ ಒಂದೇ ಅಸ್ತ್ರ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಜ.‌ 30ರಂದು ಕಮಿಷನರ್‌ ಅವರು ಸಿಎಆರ್‌ ಡಿಸಿಪಿ ಹಾಗೂ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹ ಮತ್ತು ಹುಬ್ಬಳ್ಳಿ ಉಪಕಾರಾಗೃಹದ ಅಧೀಕ್ಷಕರಿಗೆ ಪತ್ರ ಬರೆದಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆದೇಶ ಪ್ರತಿಯಲ್ಲಿ ಏನಿದೆ?: ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹ ಮತ್ತು ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು, ನ್ಯಾಯಾಲಯಕ್ಕೆ ಹಾಜರು ಪಡಿಸಲು ಹಾಗೂ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆ ಮತ್ತು ಡಿಮ್ಹಾನ್ಸ್‌ಗೆ ಕರೆದೊಯ್ಯಲು ಪೊಲೀಸ್‌ ಬೆಂಗಾವಲು ಪೂರೈಸಲು ಪ್ರತಿ ದಿನ ಕಮಿಷನರ್‌ ಕಚೇರಿಗೆ ವಿನಂತಿ ಪತ್ರಗಳು ಬರುತ್ತಿವೆ. ವ್ಯವಸ್ಥೆಯನ್ನು ಸರಳೀಕರಿಸುವ, ಅನವಶ್ಯಕ ಪತ್ರ ವ್ಯವಹಾರ ನಿಲ್ಲಿಸುವ ಹಾಗೂ ವಿಳಂಬ ತಪ್ಪಿಸುವ ಕುರಿತು, ತುರ್ತಾಗಿ ಚಾಲಕ ಸಮೇತ ಸುಸಜ್ಜಿತ ವಾಹನ, ಶಸ್ತ್ರಸಜ್ಜಿತ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಕೈದಿಗಳಿಗೆ ಬೆಂಗಾವಲು ಒದಗಿಸಬೇಕು. ಬೆಂಗಾವಲು ಒದಗಿಸಲು ಆದೇಶಿಸಿರುವ ಮಾಹಿತಿ ಕಮಿಷನರ್‌ ಕಚೇರಿಗೆ ನೀಡಬೇಕು. ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹ ಮತ್ತು ಹುಬ್ಬಳ್ಳಿ ಉಪ ಕಾರಾಗೃಹದ ಅಧೀಕ್ಷಕರಿಗೆ ಹಾಗೂ ರಾಜ್ಯದ ವಿವಿಧ ಪೊಲೀಸ್ ಘಟಕಾಧಿಕಾರಿಗಳಿಗೆ ನೇರವಾಗಿ ಮಾಹಿತಿ ನೀಡಬೇಕು ಎಂದು ಕಮಿಷನರ್‌ ಗುಪ್ತಾ ಅವರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಪ್ಪಿದ ಅನಗತ್ಯ ವಿಳಂಬ

ಕಾರಾಗೃಹದಿಂದ ಕೈದಿಯನ್ನು ಕರೆದೊಯ್ಯುವ ಸಂದರ್ಭದಲ್ಲಿ ಪ್ರತಿಬಾರಿಯೂ ಅಲ್ಲಿಯ ಅಧೀಕ್ಷಕರು, ಕಮಿಷನರ್ ಹಾಗೂ ಸಿಎಆರ್‌ ಡಿಸಿಪಿ ಜೊತೆ ಪತ್ರ ವ್ಯವಹಾರ ನಡೆಸಬೇಕಿತ್ತು. ತುರ್ತು ಸಂದರ್ಭದಲ್ಲಿ ಪತ್ರ ವ್ಯವಹಾರಕ್ಕೆ ತಕ್ಷಣ ಪ್ರತಿಕ್ರಿಯೆ ದೊರೆಯದೆ, ಅನಗತ್ಯ ವಿಳಂಬವಾಗುತ್ತಿತ್ತು. ಕಮಿಷನರ್, ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಗೆ ಪತ್ರ ಬರೆದು, ‘ಕಾರಾಗೃಹ ಅಧೀಕ್ಷಕರ ಜೊತೆಗೆ ಪತ್ರ ವ್ಯವಹಾರ ನಡೆಸಿ, ಶಸ್ತ್ರ ಸಜ್ಜಿತ ಸಿಬ್ಬಂದಿ ಹಾಗೂ ಸೂಕ್ತ ಬೆಂಗಾವಲಿನೊಂದಿಗೆ ಕೈದಿಯನ್ನು ಕರೆದೊಯ್ಯಬೇಕು’ ಎಂದು ಸೂಚಿಸಿದ್ದಾರೆ.

***

ಪತ್ರ ವ್ಯವಹಾರದಿಂದಾಗಿ ಪ್ರಕರಣಗಳ ವಿಚಾರಣೆ ವಿಳಂಬವಾಗಬಾರದು. ಸರಿಯಾದ ಸಮಯಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ, ಪ್ರಕರಣ ತುರ್ತು ವಿಲೇವಾರಿಯಾಗಲಿದೆ
–ರಮನ್‌ ಗುಪ್ತಾ, ಕಮಿಷನರ್‌, ಹು–ಧಾ ಮಹಾನಗರ ಪೊಲೀಸ್‌ ಘಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.