ಗುರುವಾರ , ಮೇ 19, 2022
22 °C

ಬಿಜೆಪಿಯವರ ನಡೆ ಅವರಿಗೇ ತಿರುಗುಬಾಣ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಏನೂ ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಜನರ ಮುಂದೆ ಹೋಗಿ ಮತ ಕೇಳಲು ಅವರ ಬಳಿ ಏನೂ ಇಲ್ಲ. ಹೀಗಾಗಿ ಸಾಮರಸ್ಯ ಕದಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮೀರಿಮೀರಿದೆ. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಮತ ಕೇಳುವ ತಂತ್ರ ಮಾಡುತ್ತಿದ್ದಾರೆ. ಮೊದಲು ಹಿಜಾಬ್‌, ಈಗ ಅಜಾನ್‌ ಮತ್ತು ಮಾವಿನ ಹಣ್ಣಿನ ವ್ಯಾಪಾರದ ವಿಚಾರ ತೆಗೆದಿದ್ದಾರೆ’ ಎಂದರು.

‘ಜನರನ್ನು ಸೆಳೆಯಲು ಬಿಜೆಪಿ ಮಾಡುತ್ತಿರುವ ಹುನ್ನಾರ ಎಲ್ಲರಿಗೂ ಗೊತ್ತಿದೆ. ಅದೇ ಅವರಿಗೆ ತಿರುಗುಬಾಣವಾಗುತ್ತದೆ. ಮೊದಲಿನಿಂದಲೂ ಹಿಂದೂ ಹಾಗೂ ಮುಸ್ಲಿಂ ಇಬ್ಬರೂ ಮಾವಿನ ಹಣ್ಣಿನ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈಗ ಅನಗತ್ಯವಾಗಿ ಇದನ್ನೇ ವಿವಾದ ಮಾಡಲಾಗುತ್ತಿದೆ. 15 ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಹೆಚ್ಚಳವಾಗುತ್ತಲೇ ಇದೆ; ಇದರ ಬಗ್ಗೆ ಮಾತನಾಡಲಿ ನೋಡೋಣ’ ಎಂದರು.

‘ಮುಸ್ಲಿಮರ ನಂಬಿಕೆ ಪ್ರಕಾರ ಹಲಾಲ್‌ ಕಟ್‌ ಮಾಡುತ್ತಾರೆ. ಉಳಿದವರು ಅವರವರ ನಂಬಿಕೆ ಪ್ರಕಾರ ಕಟ್‌ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳು ಗಗನಕ್ಕೇರುತ್ತಿವೆ. ಆದರೂ, ಜನರ ಬದುಕಿಗೆ ಸಂಬಂಧವೇ ಇಲ್ಲದ ವಿಚಾರಗಳನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ’ ಎಂದರು.

ಗೃಹಸಚಿವರಾಗಲು ಆರಗ ಅಸಮರ್ಥ: ಗೃಹ ಸಚಿವರಾಗಲು ಆರಗ ಜ್ಞಾನೇಂದ್ರ ಅಸಮರ್ಥ. ಅವರಿಗೆ ಇಲಾಖೆ ನಿರ್ವಹಣೆ ಮಾಡುವುದೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಯಾರೇ ಸತ್ತರೂ ಎಲ್ಲರೂ ಮನುಷ್ಯರೇ. ಶಿವಮೊಗ್ಗದಲ್ಲಿ ಹರ್ಷ ಹತ್ಯೆಯನ್ನು ನಾನು ಹಿಂದೆಯೂ ಖಂಡಿಸಿದ್ದೇನೆ. ಈಗಲೂ ಖಂಡಿಸುತ್ತೇನೆ. ಯಾರ ಸಾವನ್ನೂ ರಾಜಕಾರಣ ಮಾಡಬಾರದು. ಹರ್ಷನಿಗೆ ನೀಡಿದ ಪರಿಹಾರದಂತೆಯೇ ನರಗುಂದದಲ್ಲಿ ಹತ್ಯೆಯಾದ ಶಮೀರ್ ಶಹಾಪುರ ಕುಟುಂಬಕ್ಕೂ ಯಾಕೆ ನೀಡಲಿಲ್ಲ? ಎಂದು ಪ್ರಶ್ನಿಸಿದರು.

‘ಹರ್ಷನ ಮೇಲೆ ಕ್ರಿಮಿನಲ್‌ ಪ್ರಕರಣ ಇದೆ ಎಂದು ಮೊದಲು ಆರಗ ಜ್ಞಾನೇಂದ್ರ ಹೇಳಿದ್ದರು. ಆ ಮೇಲೆ ಇಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಸರಿ ಇಲ್ಲವೆಂದರೆ ಬಂಡವಾಳ ಹೂಡಿಕೆ ಮಾಡಲು ರಾಜ್ಯಕ್ಕೆ ಯಾರೂ ಬರುವುದಿಲ್ಲ. ರಾಜ್ಯದಲ್ಲಿರುವ ಕೈಗಾರಿಕೆಗಳೇ ಮುಚ್ಚಿ ಹೋಗುತ್ತಿವೆ. ಈಗಿನ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತದೆಯೋ; ಅಷ್ಟು ಬೇಗ ಜನ ಅರಾಮವಾಗಿ ಇರುತ್ತಾರೆ. ಜನರ ಮುಂದೆ ಸತ್ಯವನ್ನು ನಾವು ಬಿಚ್ಚಿಡುತ್ತೇವೆ. ಹಿಂದುತ್ವದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿಯವರ ಮಾತಿಗೆ ಜನರ ಮರುಳಾಗಬಾರದು ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದರು.

‘ನಾವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ಧರ್ಮದವರ ಬೆನ್ನಿಗೆ ನಿಲ್ಲುತ್ತೇವೆ. ಬಿಜೆಪಿ ಮನುವಾದದ ಮೇಲೆ ನಂಬಿಕೆ ಇಟ್ಟಿದೆ. ನಾವು ಮನುಷ್ಯತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು