ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ರೇಷ್ಮೆ ಕೃಷಿಯಲ್ಲಿ ಯಶ ಕಂಡ ರೈತ

ಸಮಗ್ರ ಬೇಸಾಯಕ್ಕೂ ಒತ್ತು ನೀಡಿದ ರೈತ ಬಸವರಾಜ ಹುಚ್ಚಯ್ಯನವರ
Published : 20 ಸೆಪ್ಟೆಂಬರ್ 2024, 5:51 IST
Last Updated : 20 ಸೆಪ್ಟೆಂಬರ್ 2024, 5:51 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಸರ್ಕಾರಿ ನೌಕರಸ್ಥರ ಕುಟುಂಬದಲ್ಲಿ ಬೆಳೆದ ಪದವೀಧರ ರೈತರಿಬ್ಬರು ಕೃಷಿಯತ್ತ ಒಲವು ತೋರಿ, ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ.

ಧಾರವಾಡ ತಾಲ್ಲೂಕಿನ ಚಿಕ್ಕಮಲ್ಲಿಗವಾಡದ ಕೃಷಿಕ ಸಹೋದರರಾದ ಬಸವರಾಜ ವಿರೂಪಾಕ್ಷಪ್ಪ ಹುಚ್ಚಯ್ಯನವರ ಹಾಗೂ ಚನ್ನಪ್ಪ ವಿರೂಪಾಕ್ಷಪ್ಪ ಹುಚ್ಚಯ್ಯನವರ ಅವರು 18 ವರ್ಷಗಳಿಂದ ರೇಷ್ಮೆ ಕೃಷಿ ಮಾಡಿದ್ದಾರೆ. ಒಟ್ಟು 7 ಎಕರೆಯಲ್ಲಿ ರೇಷ್ಮೆ ಕೃಷಿ, 3 ಎಕರೆ ಭತ್ತ, ಹೆಸರು, ಕಡಲೆ, ಕಬ್ಬು ಬೆಳೆಯುತ್ತಿದ್ದು, ಸಮಗ್ರ ಕೃಷಿಗೂ ಒತ್ತು ನೀಡಿದ್ದಾರೆ.

ಸದ್ಯ ರೇಷ್ಮೆ ಹುಳುಗಳ ಮೊಟ್ಟೆಗಳನ್ನು ತಂದು, ಮರಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.ಒಟ್ಟು ಏಳು ಜಿಲ್ಲೆಗಳಿಗೆ ಮರಿಗಳನ್ನು ಪೂರೈಕೆ ಮಾಡುತ್ತಿದ್ದಾರೆ.

‘ಒಂದು ತಿಂಗಳ ಬೆಳೆ ಇದಾಗಿದ್ದು, 1 ಹುಳು 500 ಮೊಟ್ಟೆಗಳನ್ನು ಇಡುತ್ತದೆ. 100 ಹುಳುಗಳಿಂದ ಅಂದಾಜು 1 ಕ್ವಿಂಟಲ್‌ ರೇಷ್ಮೆ ಬೆಳೆಯಬಹುದು. ಆರಂಭದಲ್ಲಿ ₹5,000 ಲಾಭ ಸಿಕ್ಕರೆ ಸಾಕು ಎಂದು ಆರಂಭಿಸಿದ್ದ ಕೃಷಿಯಿಂದ ಈಗ ತಿಂಗಳಿಗೆ ಅಂದಾಜು ₹2 ಲಕ್ಷದವರೆಗೆ ಆದಾಯ ಬರುತ್ತಿದೆ. ನಮ್ಮೊಂದಿಗೆ 10 ಜನ ಕೆಲಸಗಾರರೂ ಇದ್ದಾರೆ’ ಎಂದು ಕೃಷಿಕ ಬಸವರಾಜ ವಿರೂಪಾಕ್ಷಪ್ಪ ಹುಚ್ಚಯ್ಯನವರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆರಂಭದಲ್ಲಿ ಹಳದಿ ರೇಷ್ಮೆ ಬೆಳೆಯುತ್ತಿದ್ದೆವು. ಮಾರುಕಟ್ಟೆಯಲ್ಲಿ ಇದಕ್ಕೆ ದರ ಕಡಿಮೆ. ಬಿಳಿಗೂಡಿಗೂ ಇದಕ್ಕೂ ₹50 ದರ ವ್ಯತ್ಯಾಸವಿರುತ್ತದೆ. ಸಾಗಾಟದಲ್ಲೂ ತೊಂದರೆಗಳು ಹೆಚ್ಚು. ಹಾಗಾಗಿ ಇದೀಗ ಬಿಳಿ ರೇಷ್ಮೆಯನ್ನೇ ಬೆಳೆಯುತ್ತಿದ್ದೇವೆ. ಸರ್ಕಾರವೂ ಬಿಳಿ ರೇಷ್ಮೆ ಬೆಳೆಗಾರರಿಗೆ ಹೆಚ್ಚು ಸಬ್ಸಿಡಿ ನೀಡುತ್ತಿದೆ. ಒಂದು ಕೆ.ಜಿ (500 ಗೂಡು) ಬಿಳಿ ರೇಷ್ಮೆಗೂಡಿಗೆ ₹450 ರಿಂದ ₹600ರ ವರೆಗೆ ದರವಿದೆ. ಸ್ಥಳೀಯ, ಶಿರಹಟ್ಟಿ, ಹಾವೇರಿ ಹಾಗೂ ರಾಮನಗರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.

‘ರೇಷ್ಮೆಯ 1 ಕ್ರಾಪ್‌ನಿಂದ (ತಿಂಗಳ ಅವಧಿ) ಶೇ 70ರಷ್ಟು ಆದಾಯವಿದ್ದು, ಹುಳುಗಳನ್ನು ಬೆಳೆಸಿ, ಮಾರಾಟ ಮಾಡಿದರೆ (ಹತ್ತು ದಿನಗಳಿಗೆ ಒಂದು ಕ್ರಾಪ್‌ನಂತೆ ತಿಂಗಳಿಗೆ ಮೂರು ಕ್ರಾಪ್‌) ಶೇ 30ರಷ್ಟು ಲಾಭ ಪಡೆಯಬಹುದು. 100 ಹುಳುಗಳಿಗೆ ₹4,300 ದರವಿದೆ. ಒಂದು ಕ್ರಾಪ್‌ಗೆ ಕನಿಷ್ಠ 7 ಸಾವಿರದಿಂದ ಗರಿಷ್ಠ 18 ಸಾವಿರ ವರೆಗೂ ಮರಿಗಳನ್ನು ಬೆಳೆದಿದ್ದೇವೆ. ಸಕಾಲಕ್ಕೆ ಹಿಪ್ಪುನೇರಳೆ ಸೊಪ್ಪು ಲಭ್ಯವಿದ್ದರೆ ಮತ್ತಷ್ಟು ಅನುಕೂಲ’ ಎಂದರು.

‘ಸದ್ಯ ಗೂಡುಗಳನ್ನು ಬೆಳೆಯುವ ಪ್ರಮಾಣವನ್ನು ಕಡಿಮೆ ಮಾಡಿದ್ದು, ವರ್ಷಕ್ಕೆ ಐದಾರು ಕ್ರಾಪ್‌ನಲ್ಲಿ ಮಾತ್ರ ಬೆಳೆಸುತ್ತಿದ್ದೇವೆ. 2 ಎಕರೆ ಹಿಪ್ಪುನೇರಳೆ ಬೆಳೆದು, ಒಂದು ಬ್ಯಾಚ್‌ಗೆ 250 ಹುಳು ಬೆಳೆಸಬಹುದು. ರೇಷ್ಮೆಯಿಂದಲೇ ವರ್ಷಕ್ಕೆ ₹15 ಲಕ್ಷದಿಂದ ₹20 ಲಕ್ಷ ಆದಾಯ ಪಡೆದಿದ್ದೇವೆ’ ಎಂದೂ ವಿವರಿಸಿದರು.

ಬಸವರಾಜ ವಿರೂಪಾಕ್ಷಪ್ಪ ಹುಚ್ಚಯ್ಯನವರ ಅವರು ತಮ್ಮ ಕೃಷಿಗೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡಿದ್ದು, ಹನಿ ನೀರಾವರಿ, ಬೋರ್‌ವೆಲ್‌ಗಳ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ಧಾರವಾಡ ತಾಲ್ಲೂಕಿನ ಚಿಕ್ಕಮಲ್ಲಿಗವಾಡದ ಕೃಷಿಕ ಬಸವರಾಜ ಹುಚ್ಚಯ್ಯನವರ ಅವರ ಎರೆಹುಖು ಗೊಬ್ಬರ ತಯಾರಿ ಘಟಕ
ಧಾರವಾಡ ತಾಲ್ಲೂಕಿನ ಚಿಕ್ಕಮಲ್ಲಿಗವಾಡದ ಕೃಷಿಕ ಬಸವರಾಜ ಹುಚ್ಚಯ್ಯನವರ ಅವರ ಎರೆಹುಖು ಗೊಬ್ಬರ ತಯಾರಿ ಘಟಕ

ನಿರಂತರ ಆದಾಯ ತರುವ ಎರೆಹುಳು ಗೊಬ್ಬರ

‘ಹಳೇ ಪದ್ಧತಿಯಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ ಮಾಡುತ್ತಿದ್ದೇವೆ. ಆರಂಭದಲ್ಲಿ 10/10 ಅಳತೆಯಲ್ಲಿ ಕೆಲಸ ಆರಂಭಿಸಲಾಗಿತ್ತು. ಈಗ ನೆಲದಲ್ಲಿಯೇ 25 ಅಡಿ ಅಗಲ 125 ಅಡಿ ಉದ್ದದ ಜಾಗದಲ್ಲಿ ತಿಪ್ಪೆಗೊಬ್ಬರ ಬಳಸಿ ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ಇದಕ್ಕೆ ನಬಾರ್ಡ್‌ನಿಂದ ಆರ್ಥಿಕ ನೆರವು ಸಹ ಪಡೆದಿದ್ದೇವೆ’ ಎಂದು ಕೃಷಿಕ ರೈತ ಬಸವರಾಜ ಹುಚ್ಚಯ್ಯನವರ ತಿಳಿಸಿದರು. ‘ಸುತ್ತಮುತ್ತಲಿನ ರೈತರಿಂದ ಒಂದು ಟ್ರ್ಯಾಕ್ಟರ್‌ ತಿಪ್ಪೆಗೊಬ್ಬರವನ್ನು ₹3000ರಂತೆ ಖರೀದಿಸಿ ₹10 ರಂತೆ ಕೆ.ಜಿ ಎರೆಹುಳು ಗೊಬ್ಬರ ಮಾರಾಟ ಮಾಡುತ್ತೇವೆ. ವರ್ಷಕ್ಕೆ 110 ಟನ್‌ ವರೆಗೂ ತಯಾರಿಸಿದ್ದು ಪ್ರತಿ ವರ್ಷ ₹4 ಲಕ್ಷದಿಂದ ₹5 ಲಕ್ಷದ ವರೆಗೂ ಆದಾಯ ಪಡೆದಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT