ಬುಧವಾರ, ಆಗಸ್ಟ್ 21, 2019
22 °C
ಅಶೋಕನಗರ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ

‘ಸ್ಮಾರ್ಟ್‌ ರೋಡ್‌’ ಕಾಮಗಾರಿ ಶೀಘ್ರ: ಜಗದೀಶ ಶೆಟ್ಟರ್

Published:
Updated:
Prajavani

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ‘ಸ್ಮಾರ್ಟ್‌ ರೋಡ್‌’ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಅಶೋಕನಗರ ರೈಲ್ವೆ ಬ್ರಿಡ್ಜ್‌ನಿಂದ ಉಪ ಕಾರಾಗೃಹದ ವರೆಗಿನ 1.57 ಕಿ.ಮೀ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿಯೂ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ಇದರ ವಿನ್ಯಾಸ ರೂಪಿಸುವ ಕೆಲಸವನ್ನು ಖಾಸಗಿ ಸಂಸ್ಥೆಯೊಂದು ಮಾಡುತ್ತಿದ್ದು, ಅದು ಪೂರ್ಣಗೊಂಡ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರ ₹460 ಕೋಟಿ ಕೇಂದ್ರ ರಸ್ತೆ ನಿಧಿ ನೀಡಿದೆ. ಈಗ ಶೇ30ರಷ್ಟು ಮಾತ್ರ ಕಾಮಗಾರಿಗಳು ಪೂರ್ಣಗೊಂಡಿದ್ದು, ಹುಬ್ಬಳ್ಳಿ– ಧಾರವಾಡದ ಪ್ರಗತಿಯತ್ತ ಸಾಗಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಂಡರೆ ಅವಳಿ ನಗರ ರಾಜ್ಯದ ಬೇರೆಲ್ಲ ಊರುಗಳಿಗೆ ಮಾದರಿಯಾಗಲಿದೆ. ನಗರದ ಒಳ ರಸ್ತೆಗಳ ಅಭಿವೃದ್ಧಿಗೆ ಸಿಆರ್‌ಎಫ್‌ ನೀಡಿದ ಉದಾಹರಣೆ ಇಲ್ಲ. ಆದರೆ ಹುಬ್ಬಳ್ಳಿ– ಧಾರವಾಡವನ್ನು ವಿಶೇಷ ಅನುದಾನ ನೀಡಿದ್ದಾರೆ ಎಂದರು.

ನೀಲಿಜಿನ್ ರಸ್ತೆ ಅಭಿವೃದ್ಧಿ: ನೀಲಿಜಿನ್ ರಸ್ತೆ ಹದಗೆಟ್ಟಿದೆ ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ. ನೀಲಿಜಿನ್ ರಸ್ತೆ, ಕಾಟನ್‌ ಮಾರ್ಕೆಟ್ ರಸ್ತೆಯನ್ನು ಸಹ ಕಾಂಕ್ರೀಟ್ ರಸ್ತೆ ಮಾಡಲಾಗುವುದು ಎಂದು ಶೆಟ್ಟರ್ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳಾದ ಎನ್‌.ಎಂ. ಕುಲಕರ್ಣಿ, ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡರಾದ ರವಿ ನಾಯಕ್ ಇದ್ದರು.

Post Comments (+)