ಶುಕ್ರವಾರ, ಸೆಪ್ಟೆಂಬರ್ 24, 2021
26 °C
ರೌಡಿಗಳ ಚಲನ–ವಲನದ ಮೇಲೆ ನಿಗಾ; ವಾರದಲ್ಲಿ 50 ಮಂದಿಯಿಂದ ಷರತ್ತುಬದ್ಧ ಬಾಂಡ್‌

ಹು–ಧಾ ಪೊಲೀಸ್‌ ಕಮಿಷನರೇಟ್‌: ಅಪರಾಧ ತಡೆಗೆ ‘ವಿಶೇಷ ಗಸ್ತು ಪಡೆ’

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಪ್ರಕರಣ ನಿಯಂತ್ರಿಸಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಹು–ಧಾ ಪೊಲೀಸ್‌ ಕಮಿಷನರೇಟ್‌ ‘ವಿಶೇಷ ಗಸ್ತು ಪಡೆ’ ರಚಿಸಿ ಆಯ್ದ ಪ್ರದೇಶಗಳಲ್ಲಿ ನಿಯೋಜಿಸಿದೆ. ರೌಡಿಗಳ ಕಾರ್ಯ ಚಟುವಟಿಕೆ ಅಧಿಕವಾಗಿರುವ ಹಾಗೂ ಅವರ ನಿವಾಸದ ಸುತ್ತ–ಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಈ ಪಡೆ ಕಾರ್ಯ ಪ್ರವೃತ್ತವಾಗಿದೆ.

ರೌಡಿಗಳು ಹಾಗೂ ಅವರ ಸಹಚರರು ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳಲ್ಲಿ ಇತ್ತೀಚೆಗೆ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ನಗರದ ಹೊರವಲಯದಲ್ಲಿ ಸಾರ್ವಜನಿಕರ ತಡೆದು ಬೆದರಿಸಿ ಹಣ ವಸೂಲಿ ಸಹ ಮಾಡುತ್ತಿದ್ದಾರೆ. ಕೆಲವು ಪ್ರದೇಶಗಳು ಇವರ ಅಡ್ಡಗಳಾಗಿ ಬದಲಾಗಿವೆ. ಇದನ್ನು ತಡೆಯಲು ಕಮಿಷನರ್‌ ಮುಂದಾಗಿದ್ದಾರೆ.

ಪೂರ್ವ ಡಿಸಿಪಿ ಮತ್ತು ಎಸಿಪಿ ಅವರು ಸ್ಥಳೀಯ ಠಾಣೆ ಪೊಲೀಸರು, ಆಯಾ ಪ್ರದೇಶದ ಮುಖಂಡರ, ನಿವಾಸಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಬಯಸಿದ್ದಾರೆ. ಅನುಮಾನಾಸ್ಪದವಾಗಿ ಬೈಕ್‌ಗಳಲ್ಲಿ ಸಂಚರಿಸುವವರನ್ನು ತಡೆದು ಪ್ರಶ್ನಿಸಲಾಗುತ್ತಿದೆ. ಸಂಶಯಾಸ್ಪದ ವ್ಯಕ್ತಿಯ ಚಲನ–ವಲನದ ಮೇಲೆ ನಿಗಾ ಇಟ್ಟು, ಅವರ ಮನೆಗಳಿಗೆ ತೆರಳಿ ಮಾಹಿತಿ ಸಹ ಸಂಗ್ರಹಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ. ರಾಮರಾಜನ್‌, ‘ಅವಳಿ ನಗರದ ಒಂಬತ್ತು ಠಾಣೆಗಳಲ್ಲಿ ವಿಶೇಷ ಗಸ್ತು ಪಡೆ ರಚಿಸಲಾಗಿದ್ದು, ರೌಡಿಗಳ ದಿನಚರಿ ಮೇಲೆ ವಿಶೇಷ ಗಮನ ಇಡಲಾಗುತ್ತಿದೆ. ವಾರದಿಂದೀಚೆಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ 40 ರೌಡಿಗಳು ಸೇರಿ 50 ಮಂದಿಯಿಂದ ₹ 1 ಲಕ್ಷ ಮೌಲ್ಯದ ಷರತ್ತುಬದ್ಧ ಬಾಂಡ್‌ ಬರೆಸಿಕೊಳ್ಳಲಾಗಿದೆ. ಬಾಂಡ್‌ ನೀಡಿರುವುದರಿಂದ ಅವರು ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ, ಕೋರ್ಟ್‌ನಲ್ಲಿ ಜಾಮೀನು ಸಹ ಸಿಗದು’ ಎಂದು ತಿಳಿಸಿದರು.

‘ವಿಶೇಷ ಪಡೆ ಕಾರ್ಯಾಚರಣೆ ಆರಂಭಿಸಿರುವುದರಿಂದ, ಕಳವಾಗಿದ್ದ 10ಕ್ಕೂ ಹೆಚ್ಚು ಬೈಕ್‌ಗಳು ಪತ್ತೆಯಾಗಿವೆ. ವಾರಕ್ಕೆ ಎರಡ್ಮೂರು ಬಾರಿ ರೌಡಿಗಳಿರುವ ಪ್ರದೇಶಕ್ಕೆ ಎಸಿಪಿ ತಂಡ ಭೇಟಿ ನೀಡುತ್ತಿದೆ. ಹೊರವಲಯದ ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದರಿಂದ ಜನರಲ್ಲೂ ಜಾಗೃತಿ ಮೂಡಿದೆ’ ಎಂದು ತಿಳಿಸಿದರು.

ಏನಿದು ವಿಶೇಷ ಗಸ್ತು ಪಡೆ?

ಎಎಸ್ಐ, ಮೂವರು ಅಥವಾ ನಾಲ್ವರು ಕಾನ್‌ಸ್ಟೆಬಲ್‌ ವಿಶೇಷ ಗಸ್ತು ಪಡೆಯಲಿದ್ದಾರೆ. ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸಹ ಇವರಿಗೆ ಸಾಥ್‌ ನೀಡುತ್ತಾರೆ. ಈ ತಂಡ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ರೌಡಿಗಳ ಹಾಗೂ ಅವರ ಸಹಚರರ ಚಲನವಲನ ಗಮನಿಸಿ, ಠಾಣಾಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. ಪ್ರಾಯೋಗಿಕವಾಗಿ ಕೇಶ್ವಾಪುರ, ಅಶೋಕನಗರ, ಉಪನಗರ, ಶಹರ ಠಾಣೆ, ಹಳೇ ಹುಬ್ಬಳ್ಳಿ, ಬೆಂಡಿಗೇರಿ, ವಿದ್ಯಾನಗರ ಮತ್ತು ವಿದ್ಯಾಗಿರಿ ಠಾಣೆಯಲ್ಲಿ ಈ ಪಡೆ ರಚಿಸಲಾಗಿದೆ.

‘ಅವಳಿ ನಗರದಲ್ಲಿ ಅಪರಾಧ ಚಟುಟವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೌಡಿಗಳ ಹಾಗೂ ಸಹಚರರ ಮೇಲೆ ವಿಶೇಷ ಗಮನ ವಹಿಸಲಾಗಿದೆ’
–ಲಾಬೂರಾಮ್, ಕಮಿಷನರ್, ಹುಬ್ಬಳ್ಳಿ–ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು