ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಗರಿ’ಗೆ ಮನಸೋತ ವಿದ್ಯಾರ್ಥಿ ಸಮೂಹ

ಬಿಆರ್‌ಟಿಎಸ್ ಬಸ್‌ ಸಂಖ್ಯೆ ಹೆಚ್ಚಿಸಲು, ಅವಧಿ ವಿಸ್ತರಿಸಲು ಯುವಕರ ಒತ್ತಾಯ
Last Updated 11 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಾಯೋಗಿಕ ಸಂಚಾರದಲ್ಲಿಯೇ ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ‘ಚಿಗರಿ’ (ಬಿಆರ್‌ಟಿಎಸ್) ಯಶಸ್ವಿಯಾಗಿದೆ.

ಹವಾ ನಿಯಂತ್ರಿತ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಆರಾಮದಾಯಕ ಆಸನ, ಅದಲ್ಲಕ್ಕಿಂತ ಹೆಚ್ಚಾಗಿ ಪಾಸ್‌ ಬಳಸಲು ಸಹ ಅವಕಾಶ ನೀಡಿರುವುದು ಯುವ ಸಮೂಹದ ಆಕರ್ಷಣೆಗೆ ಕಾರಣವಾಗಿದೆ. ಬೆಳಿಗ್ಗೆ 8 ಗಂಟೆಯಿಂದ 10ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ 6 ಗಂಟೆಯ ವರೆಗೆ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ, ಈಗಿರುವ ಬಸ್‌ಗಳು ಸಾಕಾಗುತ್ತಿಲ್ಲ. ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿ, ಓಡಾಟದ ಅವಧಿಯನ್ನು ರಾತ್ರಿ 9 ಗಂಟೆಯ ವರೆಗೂ ವಿಸ್ತರಿಸಿ ಎಂಬುದು ಅವರ ಒಕ್ಕೊರಲ ಮನವಿಯಾಗಿದೆ.

ಅಂಬೇಡ್ಕರ್ ವೃತ್ತದಲ್ಲಿರುವ ಬಿಎಸ್ಎನ್‌ಎಲ್ ಕಚೇರಿಯಿಂದ ಶ್ರೀನಗರದ (ಉಣಕಲ್) ವರೆಗೆ ಬಸ್‌ಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಸೇರಿದಂತೆ 25ಕ್ಕೂ ಅಧಿಕ ಕಾಲೇಜುಗಳಿವೆ. ಈ ಕಾಲೇಜುಗಳ ವಿದ್ಯಾರ್ಥಿಗಳು ‘ಚಿಗರಿ’ ಏರುತ್ತಿದ್ದಾರೆ. ಕುತೂಹಲಕ್ಕಾಗಿ ಬಸ್ ಸಂಚಾರ ಮಾಡುವವರ ಸಂಖ್ಯೆ ತಗ್ಗಿದ್ದರೂ, ಸಂಪೂರ್ಣವಾಗಿ ನಿಂತಿಲ್ಲ. ಬಸ್‌ಗಳು ತುಂಬಿ ತುಳಕಲು ಇದು ಸಹ ಕಾರಣವಾಗಿದೆ.

‘ಕೇಶ್ವಾಪುರದ ಮನೆ ನಮ್ಮ ಮನೆ ಇದೆ. ಪ್ರತಿ ನಿತ್ಯ ಮಧ್ಯಾಹ್ನ ವಿದ್ಯಾನಗರಕ್ಕೆ ಟ್ಯೂಷನ್‌ಗೆ ಹೋಗುತ್ತೇವೆ. ಮೊದಲು ಖಾಸಗಿ ಬಸ್, ಆಟೊ ರಿಕ್ಷಾದಲ್ಲಿ ಸಂಚರಿಸುತ್ತಿದ್ದೆ. ಚಿಗರಿ ಆರಂಭವಾದ ನಂತರ ಅದರಲ್ಲೇ ಓಡಾಡುತ್ತಿದ್ದೇನೆ. ಹೊಸ ಬಸ್‌ಗಳು ಉತ್ತಮವಾಗಿವೆ. ಹವಾನಿಯಂತ್ರಣ ವ್ಯವಸ್ಥೆಯೂ ಇರುವುದರಿಂದ ಪ್ರಯಾಣ ಚೆನ್ನಾಗಿರುತ್ತದೆ. ವಾಹನ ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನೂ ಕಾಪಾಡಲಾಗಿದೆ’ ಎನ್ನುತ್ತಾರೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಲಕ್ಷ್.

‘ಚಿಗರಿ ಆರಂಭವಾದ ನಂತರ ಅದರಲ್ಲಿಯೇ ಓಡಾಡುತ್ತಿದ್ದೇನೆ. ಬೇರೆ ಬಸ್‌ಗಳಿಗೆ ಹೋಲಿಸಿದರೆ ಇವು ಬಹಳ ಚೆನ್ನಾಗಿವೆ. ತುಂಬ ಅಚ್ಚುಕಟ್ಟಾಗಿ ನಿರ್ವಹಣೆ ಸಹ ಮಾಡುತ್ತಿದ್ದಾರೆ. ದರವೂ ಕಡಿಮೆ ಇರುವುದರಿಂದ ಬೇರೆ ಬಸ್‌ಗಳಲ್ಲಿ ಸಂಚರಿಸುವ ಅಗತ್ಯವಿಲ್ಲ’ ಎಂಬುದು ಹತ್ತನೇ ತರಗತಿ ವಿದ್ಯಾರ್ಥಿ ಕಿರಣ್ ಅವರ ಅಭಿಪ್ರಾಯ.

‘ವಾಯವ್ಯ ಸಾರಿಗೆ ಸಂಸ್ಥೆ ವತಿಯಿಂದ ಬಸ್ ಪಾಸ್ ವಿತರಿಸಲಾಗಿದ್ದು, ಅವುಗಳನ್ನು ಚಿಗರಿಯಲ್ಲಿಯೂ ಬಳಸಲು ಅವಕಾಶ ನೀಡಲಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಟಿಕೆಟ್ ಪಡೆದು ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ’ ಎನ್ನುತ್ತಾರೆ ಬಿಆರ್‌ಟಿಎಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಸಂಚಾರ ನಿಯಂತ್ರಕ ಎಸ್‌.ವಿ. ಸಾತ್ಪುತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT