ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಲೋಪ; ಚುನಾವಣಾ ಸ್ಪರ್ಧಾಳುಗಳಲ್ಲಿ ಆತಂಕ

ಚುನಾವಣಾ ಸ್ಪರ್ಧಾಳುಗಳಲ್ಲಿ ಆತಂಕ; ಪರಿಸ್ಕರಣೆಗೆ ಆಗ್ರಹ
ಅಕ್ಷರ ಗಾತ್ರ

ಧಾರವಾಡ: ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಿದ್ದರಿಂದಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಆದರೆ, ಮತದಾರರ ಪಟ್ಟಿಯಲ್ಲಿನ ಹಲವು ದೋಷಗಳು ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ ಈವರೆಗೂ ಪ್ರಕಟಗೊಂಡ ಪಟ್ಟಿಯಲ್ಲಿ 17,334 ಮತದಾರರು ಇದ್ದಾರೆ. ಇದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು 6136 ಮತದಾರರು ಇದ್ದಾರೆ. ಅದರಂತೆಯೇ 3259, ಹಾವೇರಿ 4671 ಹಾಗೂ ಕಾರವಾರದಲ್ಲಿ 3605 ಮತದಾರರು ಇದ್ದಾರೆ.

ಈ ಮತದಾರರ ಪಟ್ಟಿಯನ್ನು ಚುನಾವಣಾ ವಿಭಾಗ ಸಿದ್ಧಪಡಿಸಿದ್ದು, ವಿಳಾಸಗಳು ಸಮರ್ಪಕವಾಗಿಲ್ಲದ ಕಾರಣ ಈಗಾಗಲೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡದಲ್ಲಿ ಬಹುತೇಕ ಮತದಾರರ ವಿಳಾಸಗಳು ಚೆನ್ನಮ್ಮ ಉದ್ಯಾನ ಎಂದೇ ಇದೆ. ಮದಿಹಾಳ, ಮಾಳಾಪುರ, ಕುಮಾರೇಶ್ವರ ನಗರ, ಸಂಪಿಗೆ ನಗರ ಹೀಗೆ ಹಲವು ಬಡಾವಣೆಗಳಲ್ಲಿರುವ ಮನೆಗಳ ವಿಳಾಸ ಚೆನ್ನಮ್ಮ ಉದ್ಯಾನ ಅಥವಾ ಕೆ.ಸಿ. ಪಾರ್ಕ್ ಎಂದೇ ಇದೆ. ಮತ್ತೊಂದೆಡೆ ಕೆಲಸ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಹೆಸರನ್ನೂ ಒಗಟು ರೂಪದಲ್ಲಿ ನೀಡಿರುವುದು ಆಕಾಂಕ್ಷಿಗಳ ತಲೆನೋವಿಗೆ ಮತ್ತೊಂದು ಕಾರಣವಾಗಿದೆ. ಇದರಿಂದಾಗಿ ಮತದಾರರನ್ನು ನೇರವಾಗಿ ಸಂಪರ್ಕಿಸುವುದೇ ದೊಡ್ಡ ಸವಾಲು ಎನ್ನುವುದು ಹಲವರ ಅಭಿಪ್ರಾಯ.

ಶಿಕ್ಷಕರ ಮತಕ್ಷೇತ್ರದ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ಇಲ್ಲ. ಆದರೆ, ಮತದಾರರ ಪಟ್ಟಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರೂ ಕಂಡುಬಂದಿವೆ. ಇವು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿವೆ.

ಈ ಚುನಾವಣೆಗೆ ಮತದಾನದ ಹಕ್ಕು 63 ವರ್ಷದೊಳಗಿರುವವರಿಗೆ ಮಾತ್ರ ಇರಲಿದೆ. ಆದರೆ, ಮತದಾರರ ಪಟ್ಟಿಯಲ್ಲಿ ವಯೋಮಾನದ ಸಾಲಿನಲ್ಲಿ 70 ದಾಟಿದ ಹಲವರ ಹೆಸರುಗಳಿವೆ. ಇಂಥ ಬಹಳಷ್ಟು ಲೋಪಗಳು ಮತದಾರರ ಪಟ್ಟಿಯಲ್ಲಿದೆ ಎಂಬ ಆರೋಪವೂ ಇದೆ. 63 ದಾಟಿದವರನ್ನೂ ಮತದಾರರು ಎಂದು ಪರಿಗಣಿಸುವ ಅವಕಾಶ ಇದೆ ಎಂಬ ವಾದವೂ ಇದೆ.

ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೆಸರು ಸೇರಿಸುವ ನಮೂನೆ 19ರಲ್ಲಿ ಹೆಸರು, ಲಿಂಗ, ತಂದೆ, ತಾಯಿ, ಪತಿಯ ಹೆಸರು, ಮನೆ ವಿಳಾಸ, ಮನೆ ಸಂಖ್ಯೆ, ಬೀದಿ, ಪಟ್ಟಣ ಅಥವಾ ಗ್ರಾಮ, ಅಂಚೆ ಕಚೇರಿ, ಪೊಲೀಸ್ ಠಾಣೆ ವ್ಯಾಪ್ತಿ, ಜಿಲ್ಲೆಯ, ವಯಸ್ಸು, ವಿಧಾನಸಭಾ ಕ್ಷೇತ್ರ ಹೀಗೆ ಹಲವು ಮಾಹಿತಿಗಳನ್ನು ನೀಡಬೇಕಾದ್ದು ಕಡ್ಡಾಯ. ಆದರೆ, ಮತದಾರರ ಪಟ್ಟಿಯಲ್ಲಿ ಈ ಯಾವುದೇ ಅಂಶಗಳು ಕಂಡುಬಂದಿಲ್ಲ.

ಮತದಾರರ ಅಂತಿಮ ಪಟ್ಟಿಗೆ ಹೆಸರು ಸೇರಿಸಲು ಈಗಲೂ ಕಾಲಾವಕಾಶವಿದೆ. ಕೊನೆ ಕ್ಷಣದಲ್ಲಿ ಇನ್ನಷ್ಟು ಹೊಸ ಮತದಾರರು ನೋಂದಾಯಿಸಿಕೊಳ್ಳಲಿದ್ದಾರೆ. ಆದರೆ, ಈಗಿರುವ ಪಟ್ಟಿಯ ಪರಿಷ್ಕರಣೆಗೆ ಆಗ್ರಹ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT