ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಮಕ್ಕಳಿಗೆ ತಾತ್ಕಾಲಿಕ ರಜೆ!

ಬ್ಯಾನರ್‌ ತೆರವುಗೊಳಿಸಿ ತರಬೇತಿ; ವರದಿ ಸಲ್ಲಿಸದ ಬಿಇಒಗಳು
Last Updated 28 ಸೆಪ್ಟೆಂಬರ್ 2022, 11:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವೋದಯ, ಮೊರಾರ್ಜಿ ಹಾಗೂ ಇತರ ಶಾಲೆಗಳಿಗೆ ಪ್ರವೇಶ ಪಡೆಯಲು 5ನೇ ತರಗತಿ ಮಕ್ಕಳಿಗೆ ಅನಧಿಕೃತವಾಗಿ ತರಬೇತಿ ನೀಡುತ್ತಿರುವ ಜಿಲ್ಲೆಯ ಕೆಲವು ವಸತಿ ರಹಿತ ಮತ್ತು ಸಹಿತ ತರಬೇತಿ ಕೇಂದ್ರಗಳು, ಸಂಸ್ಥೆಗಳ ಹೊರಗೆ ಹಾಕಿರುವ ಬ್ಯಾನರ್‌ಗಳನ್ನು ತೆರವುಗೊಳಿಸಿವೆ. ಆದರೆ, ವಸತಿ ಸಹಿತ ತರಬೇತಿ ಕೇಂದ್ರಗಳಲ್ಲಿ ತರಬೇತಿ ತರಗತಿ ಯಥಾ ಪ್ರಕಾರ ಮುಂದುವರಿದಿದ್ದರೆ, ಕೆಲವು ವಸತಿ ರಹಿತ ತರಬೇತಿ ಕೇಂದ್ರಗಳ ಮಕ್ಕಳಿಗೆ ತಾತ್ಕಾಲಿಕವಾಗಿ ಮನೆಗೆ ಕಳುಹಿಸಲಾಗಿದೆ.

‘ಶಾಲೆಗೆ ಗೈರು; ತರಬೇತಿಗೆ ಹಾಜರು!’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಸೆ. 23ರಂದು ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತುಕೊಂಡ ತರಬೇತಿ ಕೇಂದ್ರದ ಮಾಲೀಕರು ಹಾಗೂ ಸಿಬ್ಬಂದಿ ಕೇಂದ್ರದ ಹೊರಗೆ ಹಾಕಿರುವ ಸಂಸ್ಥೆಯ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಧಾರವಾಡ, ಹುಬ್ಬಳ್ಳಿ, ಕುಂದಗೊಳ, ಕಲಘಟಗಿ ಸೇರಿದಂತೆ 20ಕ್ಕೂ ಹೆಚ್ಚು ಕೇಂದ್ರಗಳ ಹೊರಗೆ ಹಾಕಿರುವ ಬ್ಯಾನರ್‌ಗಳು ಈಗ ಕಾಣುತ್ತಿಲ್ಲ. ಅಧಿಕಾರಿಗಳು ತಪಾಸಣೆಗೆ ಬರಬಹುದೆನ್ನುವ ಆತಂಕದ ಹಿನ್ನೆಲೆಯಲ್ಲಿ ಕೆಲವು ಕೇಂದ್ರಗಳ ಸಿಬ್ಬಂದಿ ಮಕ್ಕಳಿಗೆ, ನವರಾತ್ರಿ ನೆಪ ಹೇಳಿ ಮನೆಗೆ ಕಳುಹಿಸಿದ್ದಾರೆ. ಕೆಲವರು ಬ್ಯಾನರ್‌ ತೆರವುಗೊಳಿಸಿ ತರಬೇತಿ ತರಗತಿ ಮುಂದುವರಿಸಿದ್ದಾರೆ. ₹80 ಸಾವಿರದಷ್ಟು ನೀಡಿ ವಸತಿ ಸಹಿತ ತರಬೇತಿ ಕೇಂದ್ರಕ್ಕೆ ತೆರಳಿರುವ ಮಕ್ಕಳಿಗೂ ಯಥಾ ಪ್ರಕಾರ ತರಬೇತಿ ತರಗತಿ ನಡೆಯುತ್ತಿವೆ. ಪ್ರವೇಶ ಪಡೆದ ಶಾಲೆಗಳಲ್ಲಿ ಹಾಜರಿ ಸಹ ದೊರೆಯುತ್ತಿದೆ.

ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ್‌ ಅವರು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರಿಗೆ ಪತ್ರ ಬರೆದು, ‘ತರಬೇತಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೆ ಭೇಟಿ ನೀಡಬೇಕು. ಶಾಲಾ ಅವಧಿಯಲ್ಲಿ ಮಕ್ಕಳು ತರಬೇತಿ ಕೇಂದ್ರಗಳಲ್ಲಿ ಹಾಜರಾಗಿದ್ದಾರೆಯೇ ಎಂದು ತಪಾಸಣೆ ನಡೆಸಿ, ಅವರಿಗೆ ಶಾಲೆಗಳಲ್ಲಿ ಹಾಜರಾತಿ ನೀಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಈ ಕುರಿತು ಸಿದ್ಧಪಡಿಸಿದ ವರದಿಯನ್ನು ಸೆ. 24ರ ಸಂಜೆ 4.30ರ ಒಳಗೆ ನೀಡಬೇಕು’ ಎಂದು ಸೂಚಿಸಿದ್ದರು. ಗಡುವು ಮುಗಿದು ಮೂರು ದಿನ ಕಳೆದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಡಿಡಿಪಿಐಗಾಗಲಿ, ಸಿಇಒಗಾಗಲಿ ವರದಿ ರವಾನೆಯಾಗಿಲ್ಲ.

‘ಯಾವ್ಯಾವ ಶಾಲೆಯ ಮಕ್ಕಳು ಗೈರಾಗಿ ತರಬೇತಿ ಕೇಂದ್ರಗಳಿಗೆ ತೆರಳುತ್ತಿದ್ದಾರೆ, ಯಾವ್ಯಾವ ಶಾಲೆಗಳಲ್ಲಿ ಮಕ್ಕಳಿಗೆ ಗೈರಾದರೂ ಹಾಜರಿ ನೀಡಲಾಗುತ್ತಿದೆ ಹಾಗೂ ಎಲ್ಲೆಲ್ಲಿ ಅನಧಿಕೃತ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಇದ್ದರೂ, ಜಾಣ ಕುರುಡರ ಹಾಗೆ ವರ್ತಿಸುತ್ತಿದ್ದಾರೆ. ಮೇಲಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೆ, ವರದಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಕೆಲವು ತರಬೇತಿ ಕೇಂದ್ರಗಳಿಗೆ ಅವರೇ ದೂರವಾಣಿ ಕರೆ ಮಾಡಿ, ಬ್ಯಾನರ್‌ ತೆಗೆಯುವಂತೆಯೂ ಸೂಚಿಸಿದ್ದಾರೆ’ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.

ಇಲ್ಲಿ ಶಾಲೆಯೇ ಅನಧಿಕೃತ!: ಅನಧಿಕೃತ ತರಬೇತಿ ಕೇಂದ್ರಗಳ ತಪಾಸಣೆಗೆಂದು ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ತರಬೇತಿ ಕೇಂದ್ರವೊಂದಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ಅಲ್ಲಿರುವ ಶಾಲೆಯೊಂದು ಅನಧಿಕೃತವಾಗಿ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಅನುಮತಿ ಪಡೆದ ಸ್ಥಳದಲ್ಲಿ ಶಾಲೆ ನಡೆಯುತ್ತಿಲ್ಲ. ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು, ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸಲಾಗುತ್ತಿದೆ. ಅಲ್ಲದೆ, ಆ ಶಾಲೆ ಹಾಗೂ ತರಬೇತಿ ಕೇಂದ್ರವನ್ನು ಪೊಲೀಸ್‌ ಇಲಾಖೆಯ ಅಧಿಕಾರಿಯೊಬ್ಬರು ನಡೆಸುತ್ತಿರುವುದೂ ಗಮನಕ್ಕೆ ಬಂದಿದೆ. ಶಾಲೆ ನೋಂದಣಿಯಾದ ಕುರಿತು ದಾಖಲೆ ಪತ್ರ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಖ್ಯಶಿಕ್ಷಕರಿಗೆ ನೋಟಿಸ್‌ ನೀಡಿ ಬಂದಿರುವುದಾಗಿ ತಿಳಿದು ಬಂದಿದೆ.

ಶಾಲೆಯಲ್ಲಿ ಮಕ್ಕಳ ಹಾಜರಾತಿ ಪರಿಶೀಲಿಸಿ, ತಮ್ಮ ವ್ಯಾಪ್ತಿಯಲ್ಲಿ ತರಬೇತಿ ಕೇಂದ್ರಗಳಿಲ್ಲ ಎನ್ನುವ ಕುರಿತು ದೃಢೀಕರಣ ಪತ್ರ ನೀಡಲು ಬಿಇಒ ಗಳಿಗೆ ಸೂಚಿಸಿದ್ದೆ. ಯಾರಿಂದಲೂ ವರದಿ ಬಂದಿಲ್ಲ

ಎಸ್‌.ಎಸ್‌. ಕೆಳದಿಮಠ, ಡಿಡಿಪಿಐ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT