ಹುಬ್ಬಳ್ಳಿ: ಬೆಂಗಳೂರು ವೈದ್ಯಕೀಯ ಕಾಲೇಜಿನ ಪುರುಷರ ತಂಡ ಮತ್ತು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನ ಮಹಿಳೆಯರ ತಂಡಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಥ್ರೋಬಾಲ್ ಟೂರ್ನಿಯಲ್ಲಿ ಟ್ರೋಫಿ ಜಯಿಸಿದವು.
ಇಲ್ಲಿನ ಗೋಕುಲ ರಸ್ತೆಯ ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಪುರುಷರ ತಂಡವು 25-17, 23-25, 15-13ರಿಂದ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ತಂಡವನ್ನು ಮಣಿಸಿತು.
ಮಹಿಳೆಯರ ವಿಭಾಗದಲ್ಲಿ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ತಂಡವು 22-25, 25-19, 15-12ರಿಂದ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಕಾಲೇಜು ತಂಡದ ಎದುರು ಜಯಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಕೊಡಗು ವೈದ್ಯಕೀಯ ಕಾಲೇಜಿನ ತಂಡ ತೃತೀಯ ಸ್ಥಾನ, ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆಯ ಆಯುರ್ವೇದ ಕಾಲೇಜು ನಾಲ್ಕನೇ ಸ್ಥಾನ ಪಡೆದವು. ಪುರುಷರ ವಿಭಾಗದಲ್ಲಿ ಮೈಸೂರಿನ ವೈದ್ಯಕೀಯ ಕಾಲೇಜಿನ ತಂಡ ತೃತೀಯ, ಬೆಂಗಳೂರಿನ ಆಕಾಶ ವೈದ್ಯಕೀಯ ಕಾಲೇಜಿನ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟವು.
ವಿಜೇತ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ನೀಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ವೈದ್ಯಕೀಯ, ಆಯುರ್ವೇದ, ದಂತ, ನರ್ಸಿಂಗ್, ಫಾರ್ಮಸಿ ಕಾಲೇಜುಗಳಿಂದ ಪುರುಷರ 36 ಮತ್ತು ಮಹಿಳೆಯರ 37 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಥ್ರೋಬಾಲ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಜಯಗಳಿಸಿದ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನ ತಂಡಕ್ಕೆ ಟ್ರೋಫಿ ಪ್ರದಾನ ಮಾಡಲಾಯಿತು