ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಸಂಚಾರ ದಟ್ಟಣೆ ಕಿರಿಕಿರಿ

ಅಭಿವೃದ್ಧಿ ಕಾಮಗಾರಿ: ಮುಖ್ಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳು
Last Updated 28 ಜೂನ್ 2021, 13:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಪ್ರಮುಖ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತ, ಸ್ಟೇಷನ್ ರಸ್ತೆ, ದಾಜೀಬಾನಪೇಟೆ, ಕೊಪ್ಪಿಕರ‌ ರಸ್ತೆ, ಹಳೇ ಪಿ.ಬಿ. ರಸ್ತೆ, ಕಾರವಾರ ರಸ್ತೆ, ದುರ್ಗದಬೈಲ್ ಪ್ರದೇಶಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ವಿಪರೀತವಾಗುತ್ತಿದೆ.

ಒಂದೂವರೆ ತಿಂಗಳು ಲಾಕ್‌ಡೌನ್‌ ಇದ್ದ ಕಾರಣ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ವಾಹನಗಳ ಸಂಚಾರ ಯಥಾಸ್ಥಿತಿಗೆ ಬಂದಿದೆ. ಪ್ರಮುಖ ಪ್ರದೇಶಗಳಲ್ಲಿಯೇ ರಸ್ತೆ, ಒಳಚರಂಡಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗುತ್ತಿವೆ.

ಕೋರ್ಟ್ ವೃತ್ತದ ಸಾಯಿಬಾಬಾ ಗುಡಿ ಎದುರು ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಮಹಡಿ ಪಾರ್ಕಿಂಗ್ ಸಂಕಿರ್ಣ ಕಾಮಗಾರಿ ಕೈಗೊಂಡಿರುವುದರಿಂದ, ಗುಡಿ‌ ಎದುರಿನ ಮಾರ್ಗ ಬಂದ್ ಮಾಡಲಾಗಿದೆ. ಧಾರವಾಡ ಕಡೆಯಿಂದ ಬರುವ ವಾಹನಗಳು ಏಕಮುಖ‌ ಸಂಚಾರ ಮಾರ್ಗವಾದ ಚನ್ನಮ್ಮ ವೃತ್ತದ ಬಳಿಯ ಕಾಮತ್ ಹೋಟೆಲ್ ಎದುರಿನ ಮಾರ್ಗದಲ್ಲಿ ಸಂಚರಿಸಿ ಲ್ಯಾಮಿಂಗ್ಟನ್ ರಸ್ತೆ ಸಂಪರ್ಕಿಸಬೇಕಿದೆ.‌ ಹೋಟೆಲ್‌ ಎದುರಿನ ಮಾರ್ಗವನ್ನು ದ್ವಿಮುಖ ಸಂಚಾರ ಮಾಡಿದ್ದರಿಂದ, ಚನ್ನಮ್ಮ ವೃತ್ತದ ಅಕ್ಕಪಕ್ಕವಿರುವ ಏಳು ಕೂಡು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

ಸ್ಟೇಷನ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದ್ದು, ಗಟಾರ ಕಾಮಗಾರಿ ಇನ್ನೂ ಬಾಕಿಯಿದೆ. ಒಳಚರಂಡಿ ಕಾಮಗಾರಿ ತೆವಳುತ್ತ ಸಾಗಿದೆ. ಕೆಲಸಕ್ಕಾಗಿ ತಂದಿರುವ ಸಾಮಗ್ರಿಗಳನ್ನು ರಸ್ತೆ ಬದಿಯೇ ಅಲ್ಲಲ್ಲಿ ರಾಶಿ ಹಾಕಲಾಗಿದೆ. ಈ ರಸ್ತೆಯ ಬಹುತೇಕ ವಾಣಿಜ್ಯ ಸಂಕಿರ್ಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲದಿದ್ದರಿಂದ, ಕೆಲವರು ರಸ್ತೆ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಇದರಿಂದ ವಾಹನಗಳ ದಟ್ಟಣೆಯಾಗುತ್ತಿದೆ.

ಜನತಾ ಬಜಾರ್‌ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿ ನಡೆದಿರುವುದರಿಂದ ಅಂಚಟಗೇರಿ ಓಣಿ ಹಾಗೂ ಮಾರ್ಕೆಟ್ ಹಿಂಭಾಗದ ರಸ್ತೆ ಬಹುತೇಕ ಬಂದ್ ಆಗಿದೆ. ದಾಜೀಬಾನಪೇಟೆ, ಕೊಪ್ಪಿಕರ‌ ರಸ್ತೆ, ಜೆ.ಸಿ. ನಗರ, ಕೋಯಿನ್ ರಸ್ತೆ ಅಕ್ಕಪಕ್ಕದಲ್ಲಿಯೂ ಗಟಾರ, ಒಳಚರಂಡಿ ಕಾಮಗಾರಿ ನಡೆಯುತ್ತಿರುವುದು ವಾಹನಗಳ ಓಡಾಟಕ್ಕೆ ತೊಂದರೆಯುಂಟು ಮಾಡಿದೆ.

‘ಚನ್ನಮ್ಮ ವೃತ್ತದಿಂದ ಸ್ಟೇಷನ್ ರಸ್ತೆ ಹರ್ಷ ಕಾಂಪ್ಲೆಕ್ಸ್‌ಗೆ ಬೈಕ್‌ನಲ್ಲಿ ಹೋಗಲು ಕನಿಷ್ಠ ಇಪ್ಪತ್ತು ನಿಮಿಷ ಬೇಕು. ಅರೆಬರೆ ಕಾಮಗಾರಿ ಪರಿಣಾಮ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ. ಪಾದಚಾರಿ ಮಾರ್ಗದಲ್ಲೆಲ್ಲ ಕಬ್ಬಿಣ, ಜಲ್ಲಿ, ಮರಳು ಹಾಕಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಬಾರಿ ಸ್ಟೇಷನ್‌ ರಸ್ತೆಗೆ ಭೇಟಿ ನೀಡಿದರೆ ಇಲ್ಲಿನ ಸಮಸ್ಯೆ ಅರಿವಾಗುತ್ತದೆ’ ಎಂದು ನವನಗರದ ಜಗದೀಶ ದ್ಯಾಮನಗೌಡ ಬೇಸರ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಕಾಮಗಾರಿಗಳು ನಡೆಯುತ್ತಿರುವುದರಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಮುಂಜಾಗ್ರತೆಯಿಂದ ಕೆಲವು ಮಾರ್ಗಗಳನ್ನು ಬಂದ್‌ ಮಾಡಿ, ಕೆಲ ಮಾರ್ಗವನ್ನು ಏಕಮುಖ ಸಂಚಾರ ಮಾಡಲಾಗಿದೆ. ಇದರಿಂದ ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗುತ್ತಿದೆ’ ಎಂದು ಸಂಚಾರ ಡಿಸಿಪಿ ಆರ್. ಬಸರಗಿ ತಿಳಿಸಿದರು.

‘ಕಾಮಗಾರಿ ಪೂರ್ಣಗೊಳ್ಳದೆ ಏನು ಮಾಡಲಾಗುದು’

‘ಲಾಕ್‌ಡೌನ್‌ ಅವಧಿಯಲ್ಲಿ ಸ್ಮಾರ್ಟ್‌ಸಿಟಿ ಅಧಿಕಾರಿಗಳ ಜೊತೆ ಎರಡು ಬಾರಿ ಸಭೆ ನಡೆಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ವಿನಂತಿಸಲಾಗಿತ್ತು. ಎಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೂ ಸೂಚಿಸಲಾಗಿತ್ತು. ಎಲ್ಲರೂ ಬೇಗ ಮುಗಿಸುತ್ತೇವೆ ಎಂದು ಭರವಸೆ ನೀಡುತ್ತಾರೆಯೇ ಹೊರತು, ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಸುತ್ತಿಲ್ಲ. ಸೋಮವಾರವಂತೂ ಸ್ಟೇಷನ್‌ ರಸ್ತೆಯಲ್ಲಿ ವಿಪರೀತ ಎನ್ನುವಷ್ಟು ವಾಹನ ದಟ್ಟಣೆ ಉಂಟಾಗಿತ್ತು. ಸಾಧ್ಯವಾದಷ್ಟು ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಕಾಮಗಾರಿ ಪೂರ್ಣಗೊಳ್ಳದ ಹೊರತು ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದು ಸಂಚಾರ ವಿಭಾಗದ ಡಿಸಿಪಿ ಆರ್‌. ಬಸರಗಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT