ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅನಧಿಕೃತ‌ ಬಡಾವಣೆ; ನಿವೇಶನ ಖರೀದಿಸಿದ್ರೆ ಬವಣೆ

ನಿಯಮ ಉಲ್ಲಂಘಿಸಿ‌ ಬಡಾವಣೆಗಳ ನಿರ್ಮಾಣ: ಸರ್ಕಾರದ ಬೊಕ್ಕಸಕ್ಕೆ ನಷ್ಟ
Last Updated 29 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಅವಳಿ‌ನಗರದಲ್ಲಿ‌ಸೈಟು ಕೊಳ್ಳಬೇಕು, ಮನೆ ಕಟ್ಟಿಸಬೇಕು ಎಂಬುದು ಬಹಳಷ್ಟು ಜನರ ಕನಸು. ಆದರೆ, ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಪೇಚಿಗೆ ಸಿಲುಕುವವರ ಸಂಖ್ಯೆಯೂ ಕಡಿಮೆ ಏನಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸಾಕಷ್ಟು ಬಡಾವಣೆಗಳು ತಲೆ ಎತ್ತಿವೆ. ಅಂಥ ಕಡೆ ಪೂರ್ವಾಪರ ವಿಚಾರಿಸದೆ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸದೇ ನಿವೇಶನ ಖರೀದಿಸಿದ‌ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ವೇ ಮಾಹಿತಿ ನೀಡಿರುವ ಅಂಕಿ-ಸಂಖ್ಯೆಯ ಪ್ರಕಾರ ಅವಳಿನಗರದಲ್ಲಿ ಒಟ್ಟು 177 ಅನಧಿಕೃತ ಬಡಾವಣೆಗಳಿವೆ. ಇವುಗಳ ಪೈಕಿ ಮೊದಲ ಹಂತದಲ್ಲಿ 120 ಬಡಾವಣೆಗಳ ತೆರವು ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.. ಉಳಿದ 57 ಲೇಔಟ್‌ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ತೆರವಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಕಡಿಮೆ‌ ದರ, ಸುಲಭ ಕಂತುಗಳು, ಮುಂಗಡ ಹಣ ಕಟ್ಟಿದರೆ ನಿವೇಶನ ನಮ್ಮ‌ ಹೆಸರಿಗೆ ಮಾಡಿ ಕೊಡಲಾಗುತ್ತದೆ ಎಂಬ ಬಡಾವಣೆಗಳ ಮಾಲೀಕರ ಮಾತಿಗೆ ಮರುಳಾದ ಅನೇಕರು ವಂಚನೆಗೆ ಒಳಗಾಗಿದ್ದಾರೆ. ಬರೀ ಬಾಂಡ್ ಮೇಲೆಯೇ ನಿವೇಶನ ಖರೀದಿ ಪ್ರಕ್ರಿಯೆ ಹಾಗೂ ಹಣದ ಪಾವತಿ‌ ನಡೆದಿದೆ.

ನಿಯಮ ಉಲ್ಲಂಘನೆ: ಪರವಾನಗಿ ಪಡೆಯದೇ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಅಳವಡಿಸಿದ್ದ ಗುರುತು ಕಲ್ಲು, ರಸ್ತೆ, ಚರಂಡಿ, ವಿದ್ಯುತ್ ಕಂಬಗಳನ್ನು ಪ್ರಾಧಿಕಾರವು ನಾಶಪಡಿಸಿದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಿಸಲು ಆಗುತ್ತಿಲ್ಲ.‌ ಪ್ರತಿ‌ ಬಾರಿ ಸಮೀಕ್ಷೆ ನಡೆಸಿದಾಗಲೂ ಮತ್ತಷ್ಟು ಅಕ್ರಮಗಳು ಹೊರಬರುತ್ತಲಿವೆ.

‘ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ 350ರಿಂದ 400 ಎಕರೆಯಲ್ಲಿ ಅಕ್ರಮವಾಗಿ ಲೇಔಟ್‌ಗಳನ್ನು ಅಭಿವೃದ್ದಿಪಡಿಸಿದ್ದು ಪತ್ತೆಯಾಗಿತ್ತು. ಈಗ ಮತ್ತಷ್ಟು ಬಡಾವಣೆಗಳು ನಿರ್ಮಾಣ ಆಗಿರುವ ಸಾಧ್ಯತೆಗಳಿವೆ’ ಎನ್ನುತ್ತವೆ ಮೂಲಗಳು.

ಉದ್ಯಾನಗಳಿಗೆ ಜಾಗ ಬಿಡದೇ ಇರುವುದು, ಸಿ.ಎ ಸೈಟ್ ಮೀಸಲಿಡದಿರುವುದು, ನಿಗದಿತ ಅಳತೆಯಲ್ಲಿ ರಸ್ತೆ ನಿರ್ಮಾಣ ಮಾಡದಿರುವುದು ಕಂಡುಬಂದಿದೆ. ಹಲವೆಡೆ ಚರಂಡಿಗಳಿಗೆ ಜಾಗವೇ ಇಲ್ಲ, ಕೆಲವು ಕಡೆ 9 ಮೀಟರ್ ಬದಲು 6 ಮೀಟರ್ ಜಾಗ ಬಿಟ್ಟಿರುವ ನಿದರ್ಶನಗಳಿವೆ. ಎನ್.ಎ, ಕೆಜೆಪಿ ಇಲ್ಲದೇ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿದೆ.

ವಿವರ ಬಹಿರಂಗಕ್ಕೆ ಹಿಂದೇಟು
177 ಅನಧಿಕೃತ ಬಡಾವಣೆಗಳನ್ನು ಗುರುತಿಸಲಾಗಿದೆ ಎನ್ನುವ ಹುಡಾ, ಅವುಗಳ ಸರ್ವೆ ಸಂಖ್ಯೆ, ಪ್ರದೇಶ ಹಾಗೂ ಮಾಲೀಕರ ಹೆಸರು ಬಹಿರಂಗಕ್ಕೆ ಮಾತ್ರ ಹಿಂದೇಟು ಹಾಕುತ್ತಿದೆ.

ಹುಡಾ ಕಚೇರಿಯ ಸೂಚನಾ ಫಲಕ ಅಥವಾ ವೆಟ್‌ಸೈಟ್‌ನಲ್ಲಿ ಅನಧಿಕೃತ ಬಡಾವಣೆಗಳು ಎಲ್ಲೆಲ್ಲಿವೆ ಎಂಬುದರ ಮಾಹಿತಿಯೂ ಸಿಗುವುದಿಲ್ಲ. ಜನರಿಗೆ ತಾವು ಖರೀದಿಸುತ್ತಿರುವ ನಿವೇಶನವು ಅಧಿಕೃತವೇ ಅಥವಾ ಅನಧಿಕೃತವೇ ಎಂಬುದು ಗೊಂದಲಕಾರಿಯಾಗಿದೆ.‌ ಅನಧಿಕೃತ ಎಂದು ಗುರುತಿಸಿದ ಬಡಾವಣೆಗಳಲ್ಲಿ ಎಚ್ಚರಿಕೆಯ ಫಲಕ ಹಾಕುವ ಹಾಗೂ ಆ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕೆಲಸವನ್ನೂ ಮಾಡುತ್ತಿಲ್ಲ ಎಂಬುದು ಹಲವರ ದೂರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಡಾ ಅಧ್ಯಕ್ಷ‌ ನಾಗೇಶ ಕಲಬುರ್ಗಿ, ‘ವಿವರ ಬಹಿರಂಗ ವಿಷಯದಲ್ಲಿ‌ ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಆಗದು. ಈ‌ ಬಗ್ಗೆ ಪಾಲಿಕೆ ಆಯುಕ್ತರ ಜತೆ ಮಾತನಾಡುವೆ. ಅನಧಿಕೃತ ಬಡಾವಣೆಗಳ ಮಾಲೀಕರ ವಿರುದ್ಧ ದೂರು ದಾಖಲಿಸುವುದು ಸೇರಿದಂತೆ ಇತರ ಕಾನೂನು ಕ್ರಮಗಳ ಬಗ್ಗೆ ನಮಗೂ ಕೆಲವು ಗೊಂದಲಗಳಿವೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗೆ ಪತ್ರ ಬರೆಯುವೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT