ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪಾಲನೆಯಾಗದ ಸಾಮಾಜಿಕ ಅಂತರ; ಆತಂಕ

ಆಹಾರ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ, ಎಚ್ಚೆತ್ತುಕೊಳ್ಳದ ದಾನಿಗಳು
Last Updated 1 ಏಪ್ರಿಲ್ 2020, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ ಪದೇ ಪದೇ ಹೇಳುತ್ತಿದ್ದರೂ, ನಿತ್ಯ ಇದರ ಉಲ್ಲಂಘನೆಯಾಗುತ್ತಿದೆ.

ಅವಳಿ ನಗರದಲ್ಲಿ ಕೆಲಸ ಮಾಡುತ್ತಿರುವ ಮಹಾನಗರಪಾಲಿಕೆಯ ಪೌರ ಕಾರ್ಮಿಕರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಸಮಾಜ ಸೇವಕರು, ವಿವಿಧ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷದವರು ಊಟ ಹಾಗೂ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಲವರು ಅಗತ್ಯ ಸಾಮಗ್ರಿಗಳನ್ನು ಕೊಡುತ್ತಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣ, ಕೇಶ್ವಾಪುರ ವೃತ್ತ, ಬಸವ ವನ, ಹಳೇ ಹುಬ್ಬಳ್ಳಿ, ಗಬ್ಬೂರು ಕ್ರಾಸ್‌ ಸೇರಿದಂತೆ ಹಲವಡೆ ಕರ್ತವ್ಯ ನಿರತರಾಗಿರುವ ಪೊಲೀಸರಿಗೂ ಅನೇಕ ಜನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇರುವುದರಿಂದ ಕಲ್ಲಂಗಡಿ ಹಣ್ಣುಗಳನ್ನು ಕೊಡುತ್ತಿದ್ದಾರೆ. ಆದರೆ, ಆಹಾರ ವಿತರಣೆ ವೇಳೆ ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯೇ ಅಗುತ್ತಿಲ್ಲ.

ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡುವಂತೆ ಜಿಲ್ಲಾಡಳಿತ ಹೇಳುತ್ತಲೇ ಬಂದಿದೆ. ಇದಕ್ಕಾಗಿ ದಿನಸಿ, ಔಷಧ, ತರಕಾರಿ ಮಾರಾಟ ಮಾಡುವ ಅಂಗಡಿಗಳ ಮುಂದೆ ಖುದ್ದು ಜಿಲ್ಲಾಡಳಿತವೇ ಮಾರ್ಕ್‌ ಮಾಡಿ, ಗ್ರಾಹಕರು ನಿಯಮದ ಪ್ರಕಾರವೇ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ಸೂಚಿಸಿದೆ. ಇದ್ಯಾವುದೂ ನಿಯಮಿತವಾಗಿ ಪಾಲನೆಯಾಗುತ್ತಿಲ್ಲ. ಕೊರೊನಾ ಸಾಂಕ್ರಾಮಿಕವಾಗಿ ಹರಡುವ ಅಪಾಯವಿರುವ ಕಾರಣ ಸೋಂಕು ತಗುಲುವ ಆತಂಕ ಹೆಚ್ಚಾಗಿದೆ.

ಅನೇಕ ಸಂಘಟನೆಗಳ ಮುಖಂಡರು, ಧರ್ಮ ಗುರುಗಳು ವಿವಿಧ ಬಡಾವಣೆಗಳಿಗೆ ಹೋಗಿ ಅಗತ್ಯ ದಿನಸಿ ವಿತರಿಸುತ್ತಿದ್ದಾರೆ. ಇನ್ನೂ ಅನೇಕರು ವಿವಿಧ ಸ್ಲಂಗಳಿಗೆ ಹೋಗಿ ದಿನಸಿ ಹಂಚುತ್ತಿದ್ದಾರೆ.

ಹೋರಾಟಗಾರ ವಿಕಾಸ ಸೊಪ್ಪಿನ ಈ ಕುರಿತು ಪ್ರತಿಕ್ರಿಯಿಸಿ ‘ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ಅಧಿಕಾರಿಗಳು ಎಷ್ಟೇ ಹೇಳಿದರೂ ಕರಾರುವಾಕ್ಕಾಗಿ ಪಾಲನೆಯಾಗುತ್ತಿಲ್ಲ. ಈ ರೀತಿ ಮಾಡುವವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿಲ್ಲ. ವೈದ್ಯರು, ಪೊಲೀಸರು, ಸಮಾಜ ಸೇವಕರು ಮತ್ತು ಮಾಧ್ಯಮದವರು ಇದರ ಬಗ್ಗೆ ಎಚ್ಚರ ವಹಿಸಬೇಕು. ದಾನಿಗಳು ಕೂಡ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು’ ಎಂದರು.

ಆಹಾರ, ಸಾಮಗ್ರಿ ವಿತರಣೆಗೆ ಪ್ರತ್ಯೇಕ ಕೇಂದ್ರ: ಡಿ.ಸಿ

ದಾನಿಗಳು ನೀಡುವ ತಿನಿಸು ಹಾಗೂ ಇನ್ನಿತರ ಸಾಮಗ್ರಿಗಳನ್ನು ಅಗತ್ಯವಿರುವವರಿಗೆ ನೀಡಲು ಜಿಲ್ಲಾಡಳಿತವೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕ ಕೇಂದ್ರ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸೋಂಕು ಸಾಂಕ್ರಾಮಿಕವಾದ ಕಾರಣ ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವಿರುತ್ತದೆ. ಅದ್ದರಿಂದ ಮನೆ ಬಿಟ್ಟು ಬರಬೇಡಿ ಎಂದು ಹೇಳಿದರೂ ಕೆಲವರು ಕೇಳುತ್ತಿಲ್ಲ. ಈಗಿನ ಸಂದರ್ಭವನ್ನು ದಾನಿಗಳು ಬರಗಾಲ ಎಂದು ಭಾವಿಸಿದಂತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾನವೀಯ ನೆಲೆಗಟ್ಟಿನಲ್ಲಿ ದಾನಿಗಳು ನೆರವಾಗುತ್ತಿರುವುದಕ್ಕೆ ಅಪಾರ ಗೌರವವಿದೆ. ದಾನ ನೀಡಲು ಬಯಸುವವರು ಜಿಲ್ಲಾಡಳಿತ ನಿಗದಿ ಪಡಿಸುವ ಕೇಂದ್ರದಲ್ಲೇ ಆಹಾರ ಹಾಗೂ ಸಾಮಗ್ರಿ ನೀಡಬೇಕು. ದಾನಿಗಳು ಬಯಸುವವರಿಗೇ ಅದನ್ನು ತಲುಪಿಸಲು ವ್ಯವಸ್ಥೆ ಮಾಡುತ್ತೇವೆ. ಶೀಘ್ರದಲ್ಲೇ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ದಾನ ಮಾಡುವುದನ್ನೇ ಯಾರೂ ಪ್ರಚಾರಕ್ಕೆ ಬಳಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT