ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯನಗರಿಯಲ್ಲಿ ‘ಕೃಷ್ಣ’ನ ಪ್ರತಿಷ್ಠಾಪಿಸಿದ್ದ ಯತಿವರ್ಯ

Last Updated 29 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯೊಂದಿಗೆ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರದು ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದ ಅವಿನಾಭವ ನಂಟು. ‘ಹುಬ್ಬಳ್ಳಿಯಲ್ಲಿ ಕೃಷ್ಣನ ಮೂರ್ತಿ ಹಾಗೂ ರಾಯರ ವೃಂದಾವನ ಪ್ರತಿಷ್ಠಾಪಿಸಿದ ಯತಿವರ್ಯ’ ಎಂಬ ಹೆಮ್ಮೆ ಅವರದಾಗಿತ್ತು.

ಈ ಭಾಗಕ್ಕೆ ಬಂದಾಗೆಲ್ಲ, ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಶ್ರೀ ಕೃಷ್ಣ ಕಲ್ಯಾಣ ಮಂಟಪ ಹಾಗೂ ಕೃಷ್ಣನ ಮಂದಿರಕ್ಕೆ ಅವರ ಭೇಟಿ ಖಾಯಂ ಆಗಿತ್ತು.

‘1957ರಲ್ಲಿ ದೇಶಪಾಂಡೆ ನಗರದಲ್ಲಿ ನಡೆದಿದ್ದ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ಸಮಾಜದ ಸಂಘಟನೆಗೆ ಮಾರ್ಗದರ್ಶನ ನೀಡಿದ್ದರು. ಅವರ ತೋರಿದ ಮಾರ್ಗದಲ್ಲೇ 1959ರಲ್ಲಿ ನಿರ್ಮಾಣವಾದ ಕಲ್ಯಾಣ ಮಂಟಪವನ್ನು ಸ್ವತಃ ಸ್ವಾಮೀಜಿಯೇ ಬಂದು ಉದ್ಘಾಟಿಸಿದ್ದರು’ ಎಂದು ಸಮಾಜದ ಗಣ್ಯರು ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಕೆನರಾ ಹೋಟೆಲ್‌ ಮಾಲೀಕರೂ ಆದ ಅನಂತ ಪದ್ಮನಾಭ ಐತಾಳ ಅವರು, ‘ಪ್ರಜಾವಾಣಿ’ಯೊಂದಿಗೆ ನೆನಪುಗಳನ್ನು ಹಂಚಿಕೊಂಡರು.

‘ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಂತೆ, ನಿರ್ಮಾಣವಾದ ಎರಡು ದೇಗುಲಗಳಲ್ಲಿ 1974ರ ಏಪ್ರಿಲ್ 1ರಂದು ರಾಮನವಮಿ ದಿನದಂದು ಕೃಷ್ಣನ ಮೂರ್ತಿಯನ್ನು ಹಾಗೂ 1979ರ ಫೆ. 1ರಂದು ರಾಘವೇಂದ್ರ ಸ್ವಾಮೀಜಿಯ ವೃಂದಾವನವನ್ನು ಪ್ರತಿಷ್ಠಾಪಿಸಿದ್ದರು. ಆ ಮೂಲಕ, ಕೃಷ್ಣ ಹಾಗೂ ರಾಯರ ದರ್ಶನವನ್ನು ಒಂದೇ ಕಡೆ ಸಿಗುವಂತೆ ಮಾಡಿದ್ದರು. ತಮ್ಮ ಚಾತುರ್ಮಾಸ್ಯ ವ್ರತವನ್ನು ಎರಡ್ಮೂರು ಸಲ ಇಲ್ಲೇ ಕೈಗೊಂಡಿದ್ದು, ಸ್ವಾಮೀಜಿಗೆ ಸಮಾಜದ ಮೇಲಿದ್ದ ಕಾಳಜಿಗೆ ಸಾಕ್ಷಿಯಾಗಿತ್ತು’ ಎಂದು ದೇಗುಲದ ಅರ್ಚಕ ಲಕ್ಷ್ಮಿ ನಾರಾಯಣ ಭಟ್ ನೆನಪಿಸಿಕೊಂಡರು.

‘2009ರಲ್ಲಿ ನಡೆದಿದ್ದ ಸಮಾಜ ಸುವರ್ಣ ಮಹೋತ್ಸವದ ಸಾನ್ನಿಧ್ಯವನ್ನು ಸ್ವಾಮೀಜಿಯೇ ವಹಿಸಿದ್ದರು. ಇತ್ತೀಚೆಗೆ ಸಮಾಜದ ವತಿಯಿಂದ ನಡೆದ ‘ರಂಗಮಿತ್ರರು’ ದಶಮಾನೋತ್ಸವ ಸಮಾರಂಭಕ್ಕೂ ಅವರೇ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ಜತೆಗೆ, ಯಕ್ಷಗಾನವನ್ನೂ ವೀಕ್ಷಿಸಿ ಹೋಗಿದ್ದರು. ಹೀಗೆ ಸಮಾಜದ ಪ್ರತಿ ಚಟುವಟಿಕೆಗಳ ಹಿಂದೆಯೂ ಸ್ವಾಮೀಜಿ ಬೆನ್ನೆಲುಬಾಗಿ ನಿಂತು ಹರಸುತ್ತಿದ್ದರು’ ಎಂದು ಅನಂತ ಪದ್ಮನಾಭ ಐತಾಳ ಕಣ್ಣೀರಾದರು.

‘ಮತ್ತೆ ಬರಲಾರೆ ಎಂದು ಗೊತ್ತಿತ್ತೇನೊ’

‘ಕೆನರಾ ಹೋಟೆಲ್ ನವೀಕರಿಸಿದ ಬಳಿಕ, ಸ್ವಾಮೀಜಿ ಅವರನ್ನು ಒಮ್ಮೆ ಕರೆಸಿ ಆಶೀರ್ವಾದ ಪಡೆಯಬೇಕು ಅಂದುಕೊಂಡಿದ್ದೆ. ಆದರೆ, ಅಕ್ಟೋಬರ್ 20ರಂದು ಬೆಳಿಗ್ಗೆ ಕರೆ ಮಾಡಿದ ಅವರ ಆಪ್ತ ಕಾರ್ಯದರ್ಶಿ, ‘ಸ್ವಾಮೀಜಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿದ್ದು, ನಿಮ್ಮನ್ನು ಭೇಟಿ ಮಾಡಬೇಕಂತೆ’ ಎಂದರು. ತಕ್ಷಣ ನಾನು ನಿಲ್ದಾಣಕ್ಕೆ ಹೊರಡಲು ಮುಂದಾದೆ. ಮತ್ತೆ ಕರೆ ಮಾಡಿದ ಅವರು, ‘ನೀವು ಬರುವುದು ಬೇಡ. ಅವರೇ ಬರುತ್ತಿದ್ದಾರೆ’ ಎಂದರು. ಇದಾಗಿ, ಕೆಲ ಕ್ಷಣಗಳಲ್ಲೇ ಸ್ವಾಮೀಜಿ ಅವರಿದ್ದ ವಾಹನ ಹೋಟೆಲ್ ಎದುರಿಗೆ ಪ್ರತ್ಯಕ್ಷವಾಯಿತು. ಹೋಟೆಲ್‌ನಲ್ಲಿ ಗಮನಿಸಿದ ಸ್ವಾಮೀಜಿ, ‘ಚನ್ನಾಗಿ ನವೀಕರಿಸಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ಹೋದರು. ನಾನು ಕರೆಯುವುದಕ್ಕೇ ಮುಂಚೆಯೇ ಬಂದು ನನ್ನನ್ನು ಹರಸಿದ ಸ್ವಾಮೀಜಿಗೆ, ಮತ್ತೆ ನಾನಿಲ್ಲಿಗೆ ಬರಲಾರೆ ಎಂದು ಗೊತ್ತಿತ್ತೇನೊ. ಅದಕ್ಕಾಗಿ, ಮುನ್ಸೂಚನೆ ಇಲ್ಲದೆ ದರ್ಶನ ನೀಡಿ ಹೋದರೇನೊ ಅನಿಸುತ್ತಿದೆ’ ಎಂದು ಅನಂತ ಪದ್ಮನಾಭ ಐತಾಳ ಸೋಜಿಗ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT