ಸಂಗೀತಗಾರರಾಗಿದ್ದ ವಿವೇಕಾನಂದ: ಎಸ್.ಪಿ. ಬಳಿಗಾರ

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರು ತಮ್ಮ ಮಾತುಗಳ ಮೂಲಕ ಸಮಾಜದಲ್ಲಿ ಅತ್ಯುತ್ತಮ ಸಂದೇಶ ನೀಡುವ ಕೆಲಸ ಮಾಡಿದರು. ಸ್ಫೂರ್ತಿಯ ಮಾತುಗಳು, ಆದರ್ಶಗಳನ್ನು ಯುವಜನರಲ್ಲಿ ಬಿತ್ತುವ ಜೊತೆಗೆ ಅವರು ಉತ್ತಮ ಸಂಗೀತಗಾರರೂ ಆಗಿದ್ದರು ಎಂದು ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಹೇಳಿದರು.
ಕಲ್ಯಾಣ ನಗರದ ವಿವೇಕಾನಂದ ಆಶ್ರಮದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ’ವಿವೇಕ ಸಂಗೀತೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಬದುಕಿನಲ್ಲಿ ಆರೋಗ್ಯವೇ ದೊಡ್ಡ ಭಾಗ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ, ನಿದ್ರೆಯಷ್ಟೇ ಸಂಗೀತವೂ ಮುಖ್ಯ. ಮನುಷ್ಯ ಬದುಕಿನ ಇಳಿವಯಸ್ಸಿನಲ್ಲಿ ಆಧ್ಯಾತ್ಮದ ಕಡೆ ವಾಲುತ್ತಾನೆ. ಆಗ ಸಂಗೀತ ಬೇಕೆನಿಸುತ್ತದೆ’ ಎಂದರು.
‘ಜೀವನದಲ್ಲಿ ಸಾಕಷ್ಟು ಒತ್ತಡಗಳಿದ್ದರೂ ಸಂಗೀತದ ಆರಾಧನೆಯಿಂದ ಎಲ್ಲವೂ ದೂರವಾಗುತ್ತವೆ. ಸಂಗೀತವನ್ನು ಕೇಳುವುದಷ್ಟೇ ಅಲ್ಲ; ಅದನ್ನು ಆರಾಧಿಸಬೇಕು’ ಎಂದರು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಾಯಿ ಬಳಗದ ವತಿಯಿಂದ ವೇದ ಮಂತ್ರ, ಹೋಮ ಮತ್ತು ರುದ್ರಪಠಣ ನಡೆಯಿತು. ಆರ್ಎಸ್ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಅವರು ‘ವಿವೇಕಾನಂದರ ಕನಸಿನ ಭಾರತ’ ಕುರಿತು ಮಾತನಾಡಿದರು. ಬಳಿಕ ಮಹಾಮಂಗಳಾರತಿ, ಭಜನೆ, ಪ್ರಸಾದ ಕಾರ್ಯಕ್ರಮ ಜರುಗಿತು.
ಸಂಜೆ ನಡೆದ ವಿವೇಕ ಸಂಗೀತೋತ್ಸವದಲ್ಲಿ ಸ್ವಾಮಿ ರಘುವೀರಾನಂದ, ಡಾ. ಶಾಂತರಾಂ ಹೆಗಡೆ, ಉದ್ಯಮಿ ಸಂತೋಷ ಶೆಟ್ಟಿ, ಕಲಾವಿದ ಶ್ರೀನಿವಾಸ ಜೋಶಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.