ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಬಿರುಬಿಸಿಲಿಗೂ ಕುಗ್ಗದ ಉತ್ಸಾಹ

ಹುಬ್ಬಳ್ಳಿ, ಕುಂದಗೋಳ ಗ್ರಾಮೀಣ ಭಾಗಗಳಲ್ಲಿ ಮತದಾರರ ಉತ್ಸಾಹ
Published 8 ಮೇ 2024, 5:29 IST
Last Updated 8 ಮೇ 2024, 5:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಒಂದು ಮತಗಟ್ಟೆಯಲ್ಲಿ ಮಾತ್ರ ಇವಿಎಂ ತಾಂತ್ರಿಕ ದೋಷ ಕಂಡುಬಂದಿತು. ಇನ್ನುಳಿದ ಕಡೆ ಯಾವುದೇ ಸಮಸ್ಯೆಯಿಲ್ಲದೇ ಮತದಾನ ನಡೆಯಿತು. ಮಹಿಳೆಯರು, ಪುರುಷರು, ಯುವಕರು, ವೃದ್ಧರು ಕೂಡ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ಗ್ರಾಮೀಣ ಭಾಗದ ಅಂಚಟಗೇರಿ, ನೂಲ್ವಿ, ಕುಂದಗೋಳ, ಬೆನಕನಹಳ್ಳಿ, ಚಿಕ್ಕನೇರ್ತಿ, ರೊಟ್ಟಿಗವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ‘ಪ್ರಜಾವಾಣಿ’ ಪ್ರತಿನಿಧಿ ಸಂಚರಿಸಿದಾಗ ಕಂಡುಬಂದ ದೃಶ್ಯಗಳಿವು.

ಹಾಲಿ ಸಂಸದರಾಗಿರುವ ಪ್ರಲ್ಹಾದ ಜೋಶಿ ಐದನೇ ಬಾರಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ವಿನೋದ ಅಸೂಟಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಇವರ ಜೊತೆ ಪಕ್ಷೇತರರು ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರನ್ನು ಆಯ್ಕೆ ಮಾಡಲು ಜಿಲ್ಲೆಯ ಮತದಾರರು ಮತ ಚಲಾಯಿಸಿದರು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು. ಆರಂಭದಲ್ಲಿ ನಿಧಾನವಾಗಿ ಮತದಾನ ನಡೆಯಿತು. ನಂತರ ಬಿರುಸು ಪಡೆಯಿತು. ಮಧ್ಯಾಹ್ನ 1ರಿಂದ 3 ಗಂಟೆ ಅವಧಿಯಲ್ಲಿ ಬಿರುಬಿಸಿಲಿನ ಕಾರಣ ಮತದಾನ ನಿಧಾನ ಗತಿಯಲ್ಲಿ ನಡೆಯಿತು. 3ರ ನಂತರ ಮತ್ತೆ ಮತದಾನ ಬಿರುಸು ಪಡೆಯಿತು.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಅಕ್ಕಪಕ್ಕದ ಮತದಾರರನ್ನು ವಾಹನಗಳಲ್ಲಿ ಕರೆತಂದು, ಮತದಾನ ಮಾಡಿಸಲಾಯಿತು. ಮತದಾರರು ಗುಂಪು ಗುಂಪಾಗಿ ಬಂದು ಮತ ಚಲಾಯಿಸಿದರು. 80 ವರ್ಷದ ಯಲ್ಲವ್ವ ತೋಟದ,  84 ವರ್ಷದ ಬಸವ್ವ ನೀಲಪ್ಪಗೌಡರ ತಮ್ಮ ಸಂಬಂಧಿಕರ ನೆರವಿನಿಂದ ಬಂದು ಮತಚಲಾಯಿಸಿದರು. 80 ವಯಸ್ಸಿನ ಲಕ್ಷ್ಮವ್ವ ಸೊರಟೂರ ಅವರನ್ನು ಸಂಬಂಧಿಕರೊಬ್ಬರು ಎತ್ತಿಕೊಂಡು ಬಂದು ಮತದಾನ ಮಾಡಿಸಿದರು.

ಒಂದೇ ಕುಟಂಬದ 96 ಜನರಿಂದ ಮತದಾನ:

ನೂಲ್ವಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 54, 55ರಲ್ಲಿ ಮಧ್ಯಾಹ್ನದ ಬಿರುಬಿಸಿಲಿನ ನಡುವೆಯೂ ಬಿರುಸಿನ ಮತದಾನ ನಡೆಯಿತು. ಒಂದೇ ಕುಟುಂಬದ 96 ಜನರು ಮತದಾನ ಮಾಡುವ ಮೂಲಕ ಗಮನ ಸೆಳೆದರು. ಕೊಪ್ಪದ ಕುಟುಂಬದ ಸದಸ್ಯರು 3 ತಂಡಗಳಾಗಿ ಆಗಮಿಸಿದರು. ಮೊದಲ ತಂಡದಲ್ಲಿ 35ಕ್ಕೂ ಹೆಚ್ಚು ಸದಸ್ಯರು ಇದ್ದರು. ಮತದಾನ ಮಾಡಿದ ನಂತರ ಮತಗಟ್ಟೆಯಿಂದ ಹೊರಬಂದ ಕುಟುಂಬದ ಸದಸ್ಯರು ಗ್ರೂಪ್‌ ಫೋಟೊ ತೆಗೆಸಿಕೊಂಡರು.

ಈ ತಂಡದಲ್ಲಿ 71 ವರ್ಷದ ಲಕ್ಷಮ್ಮವ್ವ ಹನುಮಂತಪ್ಪ ಕೊಪ್ಪದ ಮತ ಚಲಾಯಿಸಿದ್ದರೆ, ಕಿರಿಯ ವಯಸ್ಸಿನ ಪೂಜಾ ಕೊಪ್ಪದ, ಮಂಗಳಾ ಕೊಪ್ಪದ, ಸರಸ್ವತಿ ಕೊಪ್ಪದ ಇದೇ ಮೊದಲ ಬಾರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ‘ತಮ್ಮದು ಕೂಡು ಕುಟುಂಬವಿದ್ದು, ಕಳೆದ 5– 6 ಚುನಾವಣೆಗಳಿಂದ ನಾವೆಲ್ಲ ಒಟ್ಟಾಗಿ ಬಂದು ಮತದಾನ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ. ಈ ಸಲವೂ ಅದೇ ರೀತಿ ಒಟ್ಟಿಗೆ ಬಂದು ಮತದಾನ ಮಾಡಿದ್ದೇವೆ’ ಎಂದು ಕುಟುಂಬದ ಹಿರಿಯ ಕಂಠೆಪ್ಪ ಕೊಪ್ಪದ ಸುದ್ದಿಗಾರರಿಗೆ ತಿಳಿಸಿದರು.

ರೊಟ್ಟಿಗವಾಡ ಗ್ರಾಮದ ಅಂಗವಿಕಲ ಅಶೋಕ ಕಬನೂರು ಮಾತನಾಡಿ, ‘ನನ್ನ ಮತ ನನ್ನ ಹಕ್ಕಾಗಿದೆ.
ಯಾವುದೇ ಆಮಿಷಗಳಿಗೆ ಒಳಗಾಗದೇ ನನ್ನ ಮತ ಚಲಾಯಿಸಿದ್ದೇನೆ. ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಆದರೂ ಸಹ ಮತಗಟ್ಟೆಗೆ ಎಲ್ಲರೊಂದಿಗೆ ಬಂದು ಮತ ಚಲಾಯಿಸಿದ್ದು ಖುಷಿ ನೀಡಿದೆ’ ಎಂದರು.

ಮೊದಲ ಮತದ ಸಂಭ್ರಮ:

ನೂಲ್ವಿ ಗ್ರಾಮದ ವೇದಾ ಗಾಟಗೆ, ‘ನಾನು ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ಬಹಳ ಖುಷಿಯಾಗಿದೆ’ ಎಂದರು. ಬೆನಕನಹಳ್ಳಿಯ ಸೌಭಾಗ್ಯ ಹಳೇಮನಿ, ಚಿಕ್ಕನೇರ್ತಿ ಗ್ರಾಮದ ಸ್ಪೂರ್ತಿ ಗೋಣಿ ಹಾಗೂ ಸಹನಾ ಗೋಣಿ, ರೊಟ್ಟಿಗವಾಡ ಗ್ರಾಮದ ಕಾವ್ಯಾ ರಂಗಪ್ಪನವರ, ಚೇತನಾ ಬಡಿಗೇರ, ಕಿರಣಗೌಡ
ಹಿರೇಗೌಡರ ಹಾಗೂ ಉದಯಕುಮಾರ್ ಭೂತರೆಡ್ಡಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಂತ್ರಿಕ ದೋಷ:

ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳ ಸರ್ಕಾರಿ ಮಾದರಿ ಶಾಲೆಯ ಮತಗಟ್ಟೆ ಸಂಖ್ಯೆ 113ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ತಾಂತ್ರಿಕ ದೋಷ ಕಾಣಿಸಿಕೊಂಡಿತು. ಕೆಲಹೊತ್ತು ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಸಾಧ್ಯವಾಗದಿದ್ದಾಗ ಅಧಿಕಾರಿಗಳು ಬದಲಿ ಮತಯಂತ್ರವನ್ನು ತಂದು, ಮತದಾನ ಪ್ರಕ್ರಿಯೆಯನ್ನು ಮುಂದುವರಿಸಿದರು. ಸುಮಾರು ಅರ್ಧಗಂಟೆಯವರೆಗೆ ಮತದಾನ ವಿಳಂಬವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. 

ವೈದ್ಯಕೀಯ ತಂಡ:

ಮತದಾನ ಮಾಡಲು ಬಂದಾಗ ಆರೋಗ್ಯ ಸಮಸ್ಯೆಯಾದರೆ ಚಿಕಿತ್ಸೆ ನೀಡಲು ಎಲ್ಲ ಮತಗಟ್ಟೆಗಳಲ್ಲಿ ವೈದ್ಯಕೀಯ ತಂಡ ಸಜ್ಜಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ  ಕಾರ್ಯಕರ್ತೆಯರು ಇದರಲ್ಲಿದ್ದರು. ಬಿಸಿಲಿನ ಝಳದಿಂದ ತತ್ತರಿಸಿದ್ದರೆ ಅಂತಹವರಿಗೆ ಚಿಕಿತ್ಸೆ ನೀಡಲು ಮಂಜುಗಡ್ಡೆ, ತಲೆನೋವು, ಜ್ವರಕ್ಕಾಗಿ ಪ್ಯಾರಾಸಿಟಮೊಲ್‌, ಸಿಪಿಎಂ ಮಾತ್ರೆಗಳಿದ್ದವು. ನಿರ್ಜಲೀಕರಣ ಸಮಸ್ಯೆ ಉಂಟಾದರೆ ತಕ್ಷಣ ಪರಿಹಾರ ನೀಡಲು ಓಆರ್‌ಎಸ್‌ ಪೌಡರ್‌ ಇಟ್ಟುಕೊಂಡಿದ್ದರು.

ಸಖಿ ಮತಗಟ್ಟೆ:
ಕುಂದಗೋಳ ಪಟ್ಟಣದ ಹರಬಟ್ಟ್ ಐಟಿಐ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 49, 50ರಲ್ಲಿ ಅಂಗವಿಕಲ ಮತದಾರರಿಗೆ ತೆರಳಲು ರ‍್ಯಾಂಪ್‌ ನಿರ್ಮಿಸಲಾಗಿತ್ತು. ಕುಂದಗೋಳ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಖಿ (ಪಿಂಕ್‌) ಮತಗಟ್ಟೆ ನಿರ್ಮಿಸಲಾಗಿತ್ತು. ಮತಗಟ್ಟೆಗೆ ಗುಲಾಬಿ ಬಣ್ಣ ಬಳೆಯಲಾಗಿತ್ತು. ನೆರಳಿಗಾಗಿ ಗುಲಾಬಿ ಬಣ್ಣದ ಶಾಮಿಯಾನ ಹಾಕಲಾಗಿತ್ತು, ಬಲೂನ್‌ ಕಟ್ಟಿ ಶೃಂಗಾರ ಮಾಡಲಾಗಿತ್ತು. ಕೇಂದ್ರದೊಳಗೆ ಮಹಿಳಾ ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಸರ್ಕಾರಿ ಶಾಲೆಯ ಮತಗಟ್ಟೆಗೆ ವೃದ್ಧೆಯೊಬ್ಬರನ್ನು ಸಂಬಂಧಿಕರು ಎತ್ತಿಕೊಂಡು ಬಂದರು
ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಸರ್ಕಾರಿ ಶಾಲೆಯ ಮತಗಟ್ಟೆಗೆ ವೃದ್ಧೆಯೊಬ್ಬರನ್ನು ಸಂಬಂಧಿಕರು ಎತ್ತಿಕೊಂಡು ಬಂದರು
ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದ ಮತಗಟ್ಟೆ ಸಂಖ್ಯೆ 113ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಮತಯಂತ್ರ ಬದಲಾಯಿಸಲಾಯಿತು
ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದ ಮತಗಟ್ಟೆ ಸಂಖ್ಯೆ 113ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಮತಯಂತ್ರ ಬದಲಾಯಿಸಲಾಯಿತು
ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ವೈದ್ಯಕೀಯ ತಂಡದ ಸದಸ್ಯರು ಮತದಾರರೊಬ್ಬರಿಗೆ ಸ್ಯಾನಿಟೈಸ್‌ ಮಾಡಿದರು
ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ವೈದ್ಯಕೀಯ ತಂಡದ ಸದಸ್ಯರು ಮತದಾರರೊಬ್ಬರಿಗೆ ಸ್ಯಾನಿಟೈಸ್‌ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT