ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯ ವಿರುದ್ಧ ಜಲ ಅಸ್ತ್ರ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 20 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯದ ಮಾತು ಜಗತ್ತಿನಾದ್ಯಂತ ಇದೆ. ಇದರಿಂದಲೇ ಉಂಟಾಗಿರುವ ಜಾಗತಿಕ ತಾಪಮಾನದಿಂದ ಇಡೀ ಪ್ರಪಂಚ ಬಳಲುತ್ತಿದೆ. ಇಂತಹ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಿ, ಅದರ ಮೇಲೆ ಪ್ರಭುತ್ವ ಸಾಧಿಸುವ ಅಸ್ತ್ರ ನಮ್ಮ ಬಳಿಯೇ ಇದೆ. ಅದೆಂದರೆ, ಜಲ ಅಸ್ತ್ರ. ಈ ಅಸ್ತ್ರವನ್ನು ಪ್ರಯೋಗಿಸಲು ಅದಕ್ಕೆ ಸಾಮರ್ಥ್ಯವೆಂಬ ಮಂತ್ರವನ್ನು ಬೋಧಿಸಬೇಕಿದೆ. ಆ ಮಂತ್ರ ಮೊದಲು ಮಾನವನಲ್ಲಿಐಕ್ಯವಾಗಿ, ಕಾರ್ಯಗತವಾದರೆ, ಜಲ ಅಸ್ತ್ರಕ್ಕೆ ತಾನಾಗಿಯೇ ಅಮೋಘ ಸಾಮರ್ಥ್ಯ ಬರುತ್ತದೆ. ಆ ಮಂತ್ರವೆಂದರೆ, ನೀರಿನ ಸದ್ಬಳಕೆ ಹಾಗೂ ನೀರಿನ ಸಂರಕ್ಷಣೆ.

ನೀರು ಅತ್ಯಂತ ಅವಶ್ಯ ಎಂಬುದು ಎಲ್ಲರ ಅರಿವಲ್ಲಿಯೂ ಇದೆ. ನೀರಿಲ್ಲದಿದ್ದರೆ ಜೀವನ ಅಸಾಧ್ಯ. ಅದಕ್ಕೇ ಜೀವಜಲ ಎನ್ನುವುದು. ಆದರೆ, ಅದನ್ನು ಉಳಿಸಿಕೊಳ್ಳುವ ಕಾಳಜಿಯನ್ನು ಮನುಷ್ಯ ಇನ್ನೂ ಬೆಳೆಸಿಕೊಂಡಿಲ್ಲ. ಅದಕ್ಕೆ ಇಂದಿನ ದಿನಮಾನಗಳಲ್ಲಿ ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳು ಎದುರಾಗಿರುವುದು. ನೈಸರ್ಗಿಕ ಸಂಪನ್ಮೂಲಗಳನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದಲೇ ಅನೇಕ ಸಮಸ್ಯೆಗಳು ಉದ್ಭವಿಸಿರುವುದು.

ಜನಸಂಖ್ಯೆ ಹೆಚ್ಚಾದಂತೆಲ್ಲ ನೀರಿನ ಬೇಡಿಕೆಯೂ ಅತಿಯಾಗುತ್ತಲೇ ಇದೆ. ಇದರಿಂದ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಧಿಕವಾಗುತ್ತಿದೆ. ಇದಕ್ಕಾಗಿ ಹಲವು ಪ್ರದೇಶಗಳಲ್ಲಿ ಪರಿಸರಕ್ಕೂ ಹಾನಿ ಉಂಟು ಮಾಡಲಾಗುತ್ತಿದೆ. ಇದಕ್ಕೆಲ್ಲ ಹಾನಿ ಮಾಡದೆ, ನೀರನ್ನು ಮಿತವ್ಯಯಿಯಾಗಿ ಬಳಸಿ ಪರಿಸರವನ್ನೂ ಉಳಿಸಿ, ಬೆಳೆಸಿಕೊಂಡು ಹೋಗಲು ಪರಿಹಾರಗಳಿವೆ. ಇದರಲ್ಲಿ ಪ್ರಮುಖವಾದದ್ದೆಂದರೆ, ಕೃಷಿಯಲ್ಲಿ ಹಮಾಮಾನ ಸ್ನೇಹಿ ತಂತ್ರಜ್ಞಾನಗಳ ಬಳಕೆ ಹಾಗೂ ತ್ಯಾಜ್ಯ ನೀರಿನ ಸುರಕ್ಷಿತ ಮರುಬಳಕೆ.

ನೀರು ಅತ್ಯಮೂಲ್ಯ ಸಂಪನ್ಮೂಲ. ನಾವು ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಸಬೇಕಿದೆ. ನೀರು ಕಟ್ಟಕಡೆಯ ಎಲ್ಲ ವ್ಯಕ್ತಿಗೂ ಲಭ್ಯವಾಗುವಂತೆ ಸಮಾಜದಲ್ಲಿ ಎಲ್ಲರ ಅಗತ್ಯವನ್ನೂ ಪೂರೈಸುವಂತೆ ಸಮತೋಲನ ಕಾಪಾಡಿಕೊಳ್ಳಬೇಕಿರುವುದು ಅವಶ್ಯ. ಇದಕ್ಕಾಗಿ ಸಾಕಷ್ಟು ಕಾಯಲು ಸಮಯಾವಕಾಶ ಇಲ್ಲ. ಹವಾಮಾನ ನೀತಿ ರೂಪಕರು ತಮ್ಮ ಕ್ರಿಯಾಯೋಜನೆಯಲ್ಲಿ ನೀರನ್ನು ಅತ್ಯಂತ ಪ್ರಾಮುಖ್ಯ ಸ್ಥಾನದಲ್ಲಿರಿಸಬೇಕಿದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ನೀರು ನಮಗೆ ಅತ್ಯಂತ ನೆರವಿನ ಅಸ್ತ್ರ. ಸುಸ್ಥಿರ, ಮಿತವ್ಯಯಿ ಮತ್ತು ಅನುಷ್ಠಾನಗೊಳ್ಳಬಲ್ಲ ಜಲ ಮತ್ತು ನೈರ್ಮಲ್ಯ ಪರಿಹಾರಗಳಿವೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯಗತವಾಗಬೇಕಿದೆ. ನಮ್ಮ ನಿತ್ಯಜೀವನದಲ್ಲಿ ಕೆಲವು ಸುಲಭ ಕ್ರಮಗಳನ್ನು ಕೈಗೊಂಡರೆ, ಹವಾಮಾನ ಬದಲಾವಣೆಗೆ ತಕ್ಕ ಉತ್ತರ ನೀಡಬಹುದಾಗಿದೆ.

ಹವಾಮಾನ ವೈಪರೀತ್ಯದಿಂದ ಜಲಕ್ಷಾಮ ಹೆಚ್ಚಾಗುತ್ತಿದ್ದು, ಬರದಿಂದ ಕೃಷಿ ಮೇಲೆ ಅತ್ಯಂತ ಹೆಚ್ಚಿನ ಹೊಡೆತ ಬೀಳುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕ ಪ್ರಗತಿಗೆ ಕುಂಠಿತವಾಗುತ್ತಿದೆ. ಹೀಗಾಗಿ, ವಲಸೆ ಪ್ರಮಾಣ ಹೆಚ್ಚಾಗುತ್ತಿವೆ. ವಿಶ್ವ ಸಂಸ್ಥೆಯ ಅಧ್ಯಯನ ಪ್ರಕಾರ, ಅಭಿವೃದ್ಧಿಶೀಲ ದೇಶಗಳಲ್ಲಿ ಶೇ 85ರಷ್ಟು ಜನರು ವಲಸೆ ಹೋಗುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಭಾಗದವರು ಮೂರರಲ್ಲಿ ಒಬ್ಬರಾಗಿದ್ದಾರೆ. ಇದಕ್ಕೆ ಕಾರಣ, ಅವರ ಮೂಲ ಅಗತ್ಯ ಹಾಗೂ ಆಹಾರ ಉತ್ಪಾದನೆಗೆ ನೀರಿನ ಅಭಾವ. ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿಯೇ ಈ ಅನಿವಾರ್ಯ ಸ್ಥಿತಿಗೆ ತಲುಪುತ್ತಿದ್ದಾರೆ. ಇವರಿಗೆ ಸಣ್ಣ ಪ್ರಮಾಣದಲ್ಲಿ ನೀರಾವರಿಯನ್ನು ಒದಗಿಸಿಕೊಟ್ಟರೂ, ಅವರ ಜೀವನಯಾನ ಅಲ್ಲೇ ಮುಂದುವರಿಯುತ್ತದೆ. ಅದಕ್ಕಾಗಿ ನೀರನ್ನು ಸಂರಕ್ಷಿಸಿ, ಬಳಸಬೇಕಾಗಿದೆ.

ಬರಗಾಲವನ್ನು ನಿರ್ವಹಣೆ ಮಾಡಿ, ಅದರ ಪರಿಣಾಮವನ್ನು ಕಡಿಮೆ ಮಾಡಿ, ನಿಭಾಯಿಸುವ ಸಾಮರ್ಥ್ಯವನ್ನು ಗ್ರಾಮೀಣ ಸಮುದಾಯದಲ್ಲಿ ಹೆಚ್ಚಿಸಬೇಕು. ನೀರಿನ ಅಭಾವದಲ್ಲಿ ಜೀವಿಸುತ್ತಿರುವ ರೈತರು, ನೀರಿನ ಲಭ್ಯತೆಯ ಅನುಸಾರ ಅದನ್ನು ಸುಸ್ಥಿರ ನಿರ್ವಹಣೆ ಮಾಡಿ, ಮರುಸ್ಥಾಪಿಸಿಕೊಳ್ಳುವ ಕಾರ್ಯವಿಧಾನಗಳನ್ನು ತುರ್ತಾಗಿ ಕೈಗೊಳ್ಳಬೇಕು. ಜಾಗತಿಕ ತಾಪಮಾನದ ಹೆಚ್ಚಳದ ಸಂದರ್ಭದಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡಿ, ಆಹಾರ ಭದ್ರತೆ ಸಾಧಿಸಲು ಕೃಷಿ–ಹಮಾವಾನ ಅವಕಾಶಗಳಲ್ಲಿ ಹೊಸ ಸಾಧನೆಗಳಾಗಬೇಕು. ಕೃಷಿಯಲ್ಲಿ ಸುಸ್ಥಿರ ನೀರು ನಿರ್ವಹಣೆಯಿಂದ ಕೃಷಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ನೀರನ್ನೂ ಉಳಿಸಬೇಕು. ಆಹಾರ ಉತ್ಪಾದನೆ ವ್ಯವಸ್ಥೆಯಲ್ಲಿ ನವೀನ ಹಾಗೂ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಾಗುತ್ತಿರುವ ಲವಣಾಂಶ ಮತ್ತು ನೀರಿನ ಮಾಲಿನ್ಯವನ್ನು ತಡೆಗಟ್ಟಬಹುದು.

ಭೂಮಿಯ ಬಹುತೇಕ ಮುಕ್ಕಾಲು ಪಾಲು ನೀರು ಇದೆ. ಹಾಗಯೇ, ನಮ್ಮ ದೇಹದ ಶೇ 60ರಷ್ಟು ಭಾಗದಲ್ಲಿ ನೀರಿನ ಅಂಶವೇ ತುಂಬಿದೆ. ಆದರೆ, ಭೂಮಿಯಲ್ಲಿರುವ ಮುಕ್ಕಾಲು ಪಾಲು ನೀರನ್ನು ಮನುಷ್ಯ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಸಮುದ್ರದ ಮಧ್ಯೆ ಇದ್ದರೂ ನೀರು ಕುಡಿಯಲು ಸಾಧ್ಯವಿಲ್ಲ. ಆದರೆ, ಕುಡಿಯಬಹುದಾದ ನೀರು ನಮ್ಮ ಮುಂದೆ ಯಥೇಚ್ಛವಾಗಿರುವ ಸಂದರ್ಭದಲ್ಲಿ ಅದನ್ನು ಮಿತವಾಗಿ ಬಳಸುವ ಕನಿಷ್ಠ ಕಾಳಜಿಯನ್ನೂ ಮರೆಯುತ್ತೇವೆ. ನಿತ್ಯ ಬದುಕಿನಲ್ಲಿ ನೀರನ್ನು ಸಾಕಷ್ಟು ಬಳಸುತ್ತೇವೆ. ಒಂದು ಹನಿ ನೀರು ಉಳಿಸಿದರೂ ಅದು ಮತ್ತೆಲ್ಲೋ ಜೀವಹನಿಯಾಗುತ್ತದೆ ಎಂಬುದನ್ನು ಅರಿಯಲೇ ಬೇಕು. ಎಷ್ಟಾದರೂ ಹನಿ ಹನಿಗೂಡಿದರೆ ಹಳ್ಳ... ಅಲ್ಲವೇ? ಅದೇ ರೀತಿ ನಮ್ಮ ಸುತ್ತಮುತ್ತಲಿರುವ ಕೆರೆಗಳತ್ತ ನೀರು ಹರಿಸುವಂತೆ ಮಾಡುವುದು ಅದು ಬಹುಮೌಲ್ಯ ಜಲಸಂರಕ್ಷಣೆಯೇ.

ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆ ನೀಡುತ್ತದೆ ಎಂಬುದರ ನಡುವೆ ಮಾನವನ ಪಾತ್ರ ಅತಿದೊಡ್ಡದು. ಮೋಡ ಮಳೆ ಸುರಿಸುತ್ತದೆ ಸರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೇಕಾದಾಗ ಸುರಿಸುತ್ತಿಲ್ಲ. ಅದಕ್ಕೇ ಮಳೆ ಸುರಿದಾಗ ಅದನ್ನು ರಕ್ಷಿಸಿಕೊಳ್ಳುವ ಕೆಲಸ ತುರ್ತಾಗಿ ಆಗಲೇಬೇಕು. ಭೂಮಿಯಲ್ಲಿ ನೀರನ್ನು ಎಷ್ಟು ಇಂಗಿಸಲಾಗುತ್ತದೆಯೋ ಅದು ಅಂತರ್ಜಲದ ಮೂಲವಾಗುತ್ತದೆ. ಅದನ್ನು ಉಪಯೋಗಿಸಿಕೊಳ್ಳುವವರೂ ನಾವೇ ಎಂಬ ವಾಸ್ತವದ ಅರಿವಿರಬೇಕು. ಭೂಮಿ ಎಷ್ಟು ತಂಪಾಗಿರುತ್ತದೋ ಹವಾಮಾನ ಕೂಡ ಅಷ್ಟೇ ಆಹ್ಲಾದಕರ. ಒಂದು ತಂಬಿಗೆ ನೀರಿನಲ್ಲಿ ಮುಗಿಯಬಹುದಾದ ಕಾರ್ಯಕ್ಕೆ ಬಕೆಟ್‌ ನೀರು ವ್ಯಯ ಮಾಡುವುದು ಜಾಣರ ಲಕ್ಷಣವಲ್ಲ. ನೀರು ಉಳಿಸುವ ಜಲ ಯೋಧರಾದರೆ ಹವಾಮಾನ ವೈಪರೀತ್ಯ ಅಂತ್ಯಗೊಳಿಸುವ ಅಸ್ತ್ರಕ್ಕೆ ನಮ್ಮ ಬತ್ತಳಿಕೆಯಲ್ಲೇ ಇರುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT