ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ವಾರಾಂತ್ಯದ ಸಂಭ್ರಮ ಹೆಚ್ಚಿಸಿದ ‘ಹ‌ಬ್ಬ’

ಪೈಲ್ವಾನರ ಗಟ್ಟಿ ಪಟ್ಟಿಗೆ ಬೆರಗಾದ ಕುಸ್ತಿ ಅಭಿಮಾನಿಗಳು
Last Updated 24 ಫೆಬ್ರುವರಿ 2020, 8:53 IST
ಅಕ್ಷರ ಗಾತ್ರ

ಧಾರವಾಡ: ಶತಮಾನ ಪೂರೈಸಿರುವ ಪ್ರತಿಷ್ಠಿತ ಕರ್ನಾಟಕ ಕಾಲೇಜು ಮೈದಾನದಲ್ಲಿ ಎರಡು ದಿನಗಳಿಂದ ಸಂಭ್ರಮ ಮನೆ ಮಾಡಿದೆ. ವಾರಾಂತ್ಯದ ರಜೆಯ ದಿನವಾದ ಭಾನುವಾರವಂತೂ ಈ ಸಡಗರ ಇಮ್ಮಡಿಗೊಂಡಿತ್ತು.

ಸಾಂಸ್ಕೃತಿಕ ನಗರಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪೈಲ್ವಾನರ ಕರಾಮತ್ತು ನೋಡಲು ದಿನದಿಂದ ದಿನಕ್ಕೆ ಕುಸ್ತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಸಂಜೆ ಹೊತ್ತು ಏರುತ್ತಿದ್ದರೂ ದೇಸಿ ಕ್ರೀಡೆಯ ಸೊಬಗು ನೋಡಲು ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಒಟ್ಟು 1,270 ಪೈಲ್ವಾನರು, ನೂರಾರು ಅಧಿಕಾರಿಗಳು ಪಾಲ್ಗೊಂಡಿರುವ ಕುಸ್ತಿ ಹಬ್ಬ ಇಲ್ಲಿನ ಜನರ ಸಂಭ್ರಮ ಹೆಚ್ಚಿಸಿದೆ.

ಅದರಲ್ಲೂ ವಿಶೇಷವಾಗಿ ಬಾಲಕಿಯರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಗಳನ್ನು ನೋಡಲು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಚಿತ್ರಣ ಭಾನುವಾರ ಕಂಡುಬಂತು. ಅನೇಕರು ಕುಟುಂಬ ಸಮೇತರಾಗಿ, ಇನ್ನೂ ಹಲವರು ಸ್ನೇಹಿತರ ಜೊತೆಗೂಡಿ ಕಾಲೇಜು ಮೈದಾನಕ್ಕೆ ಬರುತ್ತಿದ್ದರು.

ಪೇಟಾ ಖುಷಿ: ಕುಸ್ತಿ ಆಡುವವರು ಮತ್ತು ನಿರ್ಣಾಯಕರ ಸಡಗರ ಒಂದಡೆಯಾದರೆ ‘ಹಬ್ಬ’ದ ನೆಪದಲ್ಲಿ ಖುಷಿಯ ಮೂಟೆಗಳ ನೆನಪು ಸ್ಮರಣೀಯವಾಗಿಸಲು ಅನೇಕರು ಪೇಟಾಗಳ ಮೊರೆ ಹೋದರು.ಕುಸ್ತಿಯ ಸಾಂಪ್ರದಾಯಿಕ ಪರಂಪರೆಯ ಧ್ಯೋತಕವಾಗಿರುವ ಪೇಟವನ್ನು ಮಾರಾಟ ಮಾಡಲು ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕುಸ್ತಿ ನೋಡಲು ಬರುವವರು ಕೂಡ ಅಷ್ಟೇ ಪೈಪೋಟಿಯಿಂದ ಪೇಟಾಗಳನ್ನು ಖರೀದಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ಕುಸ್ತಿ ಹಬ್ಬದ ಅಂಗವಾಗಿ ಸಂಘಟಕರು ಧಾರವಾಡ, ಬೆಳಗಾವಿ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಾಜಿ ಪೈಲ್ವಾನರನ್ನು ಸನ್ಮಾನಿಸಿದರು. ಅವರಿಗೆ ಪೇಟಾ, ಸ್ಮರಣಿಕೆ ನೀಡಿ ಗೌರವಿಸಿದರು. ಆದ್ದರಿಂದ ಎಲ್ಲಿ ನೋಡಿದರಲ್ಲೂ ಪೇಟಗಳೇ ರಾರಾಜಿಸುತ್ತಿದ್ದವು.

ಪೇಟಾ ತೊಟ್ಟಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಹೊಸ ಯಲ್ಲಾಪುರದ ಕಾವ್ಯಾ ನಿಡಗುಂದಿ ‘ಕುಸ್ತಿ ಸ್ಪರ್ಧೆಗಳನ್ನು ಟಿವಿಯಲ್ಲಿ ಮಾತ್ರ ನೋಡುತ್ತಿದ್ದೆ. ಈಗ ನಮ್ಮೂರಿನಲ್ಲಿಯೇ‌ ಪಂದ್ಯಗಳನ್ನು ನೋಡಲು ಅವಕಾಶ ಸಿಕ್ಕಿದೆ. ಇದು ಹಬ್ಬವಷ್ಟೇ ಅಲ್ಲ, ನಮ್ಮ ಪಾಲಿಗೆ ದೊಡ್ಡ ಜಾತ್ರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪಂದ್ಯಗಳನ್ನು ನೋಡಲು ಹಳಿಯಾಳದಿಂದ ಬಂದಿದ್ದ ವಿನಾಯಕ ಲಿಮಯೆ ‘ಇತ್ತೀಚಿಗೆ ಹಳಿಯಾಳದಲ್ಲಿ ನಡೆದಿದ್ದ ಕುಸ್ತಿ ಟೂರ್ನಿಯಲ್ಲಿ ನೋಡಿದ್ದಕ್ಕಿಂತಲೂ ಇಲ್ಲಿ ಹೆಚ್ಚಿನ ಜನ ಸೇರಿದ್ದಾರೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪೈಲ್ವಾನರ ಸಾಹಸವನ್ನು ನೋಡಲು ಒಂದು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಲಭಿಸಿದ್ದಕ್ಕೆ ಖುಷಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT