ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರಕ್ಕೆ ವಾರಾಂತ್ಯ ಪ್ರವಾಸ

ಘಂಟೆ ಗಣಪ, ಮಾಗೋಡ ಫಾಲ್ಸ್‌, ಜೇನಕಲ್‌ ಗುಡ್ಡ, ಕವಡೆಕೆರೆ...
Last Updated 27 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾರಾಂತ್ಯ ಪ್ರವಾಸ ಈಗೆಲ್ಲ ಟ್ರೆಂಡ್‌ ಆಗುತ್ತಿದೆ. ಅದರಲ್ಲೂ ಬೆಳಿಗ್ಗೆ ಹೊರಟು ರಾತ್ರಿ ವಾಪಸ್‌ ಸೂರು ಸೇರಿಕೊಳ್ಳುವವರೇ ಹೆಚ್ಚು. ಅಂಥವರಿಗಾಗಿ ಇಲ್ಲೊಂದು ಪ್ರವಾಸಿ ತಾಣವಿದೆ. ಬೆಳಿಗ್ಗೆ ಹುಬ್ಬಳ್ಳಿಯಿಂದ ಹೊರಟರೆ ನಾಲ್ಕು ಸುಂದರ ತಾಣಗಳನ್ನು ಕಣ್ತುಂಬಿಕೊಂಡು ರಾತ್ರಿಯಾಗುವುದರೊಳಗೆ ಮನೆ ಸೇರಿಕೊಳ್ಳಬಹುದು. ಅದುವೇ ವಾಣಿಜ್ಯ ನಗರಿಗೆ ಹತ್ತಿರದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ.

ಹುಬ್ಬಳ್ಳಿಯಿಂದ ತುಸು ನಸುಕಿನಲ್ಲೇ ಖಾಸಗಿ ವಾಹನದಲ್ಲಿ ಹೊರಟರೆ ಇಬ್ಬನಿ ತಬ್ಬಿದ ಹೆದ್ದಾರಿ ಪ್ರಯಾಣ ಮನಸ್ಸಿಗೆ ಮುದ ನೀಡುತ್ತದೆ. ಯಲ್ಲಾಪುರ ಪಟ್ಟಣ ದಾಟಿ ಅಂಕೋಲಾ ಹೆದ್ದಾರಿಯ ಎಡಪಕ್ಕದಲ್ಲಿನ ಮಾಗೋಡು ಕ್ರಾಸ್‌ ತಿರುವಿನಲ್ಲಿ ಮುಂದೆ ಸಾಗಿದರೆ ಪ್ರಥಮ ಪೂಜಿತ ಚಂದಗುಳಿ ಘಂಟೆ ಗಣಪನ ಸನ್ನಿಧಿಗೆ ಪ್ರಥಮ ಭೇಟಿ ನೀಡಿ, ಮಾಗೋಡ ಫಾಲ್ಸ್‌, ಜೇನುಕಲ್ಲು ಗುಡ್ಡ, ಕವಡೆಕೆರೆಯನ್ನು ಕಣ್ತುಂಬಿಕೊಳ್ಳಬಹುದು. ಈ ನಾಲ್ಕು ತಾಣಗಳು 25 ಕಿ.ಮೀ. ಅಂತರದಲ್ಲಿರುವುದರಿಂದ ಒಂದೊಂದಾಗಿ ನಾಲ್ಕೂ ತಾಣಗಳನ್ನೂ ನೋಡಬಹುದು.

ಚಂದಗುಳಿಯ ಘಂಟೆ ಗಣಪನ ದೇಗುಲದ ಸುತ್ತಲೂ ಭಕ್ತರು ಇಟ್ಟ ಹರಕೆಯ ಘಂಟೆಗಳನ್ನು ನೋಡುವುದೇ ಸೌಭಾಗ್ಯ. ಸೋದೆಯ ರಾಜ ಅರಸಪ್ಪನಾಯಕ 1350ರಲ್ಲಿ ಕಟ್ಟಿಸಿದ ದೇಗುಲವಿದು. ರಾಜನ ಮಗನಿಗೆ ಮಾತಿನ ಸಮಸ್ಯೆ ಇದ್ದ ಕಾರಣ, ಮಗನಿಗೆ ಮಾತಿನ ಸಮಸ್ಯೆ ನೀಗಲಿ ಎಂದು ಹರಕೆ ಹೊತ್ತು, ಅದು ಈಡೇರಿದಾಗ, ಒಪ್ಪಿಸಿದ ಘಂಟೆ ಕೂಡ ಇಲ್ಲಿದೆ. ಇದರೊಂದಿಗೆ ಗರ್ಭಗುಡಿಯ ಸುತ್ತಲ ಕಾಷ್ಠಕೆತ್ತನೆ ಕೂಡ ಮನಸೆಳೆಯಲಿದೆ. ಘಂಟೆ ಬಾರಿಸಿದಾಗ ಮೊಳಗುವ ಶಬ್ದ ಆನಂದಿಸುವುದೇ ಭಾಗ್ಯ. ದೇಗುಲದ ಹೊರಗಿನ ಕೊಠಡಿಗಳಲ್ಲೂ ಘಂಟೆಗಳನ್ನು ತುಂಬಿಡಲಾಗಿದೆ. ಸಿದ್ಧಿವಿನಾಯಕ ಶಕ್ತಿ ಎಷ್ಟಿದೆ ಎನ್ನಲು ಈ ಘಂಟೆಗಳೇ ಸಾಕ್ಷಿ.

ಘಂಟೆ ಗಣಪನ ಸನ್ನಿಧಿಯಿಂದ ಹೊರಟು ಮಾಗೋಡು ಜಲಪಾತಕ್ಕೆ ದಾರಿ ಎಂಬ ಫಲಕ ತೋರುವ ಹಾದಿಯಲ್ಲಿ ಸಾಗಿದರೇ ಮಾಗೋಡು ಜಲಪಾತದ ಭೋರ್ಗರೆಯುವ ಸದ್ದು ಕೇಳುತ್ತದೆ. ಪ್ರತಿಯೊಬ್ಬರಿಗೆ ₹20 ರ ಪ್ರವೇಶ ಶುಲ್ಕ ಪಡೆದು ಜಲಪಾತದ ವೀಕ್ಷಣೆಗೆ ಸಾಗಬಹುದು. ವೀಕ್ಷಣಾ ಜಾಗದಿಂದ ಮಾಗೋಡು ಜಲಪಾತದ ಭೋರ್ಗರೆತ, ಧುಮ್ಮಿಕ್ಕುವ ರುದ್ರರಮಣೀಯ ದೃಶ್ಯ ನೋಡುವುದೇ ಅವಿಸ್ಮರಣೀಯ. ಮನೆಯಿಂದ ಇಲ್ಲವೇ ಹೋಟೆಲ್‌ನಿಂದ ಊಟ ಕಟ್ಟಿಕೊಂಡು ಬಂದಿದ್ದರೆ ಮಾಗೋಡ್‌ ಫಾಲ್ಸ್‌ನ ಮಂಜು ಮುಸುಕಿದ ಪರಿಸರದಲ್ಲಿ ಉಂಡು ಪಯಣವನ್ನು ಜೇನಕಲ್‌ ಗುಡ್ಡದ ಕಡೆಗೆ ಮುಂದುವರಿಸಬಹುದು.

ಜೇನುಕಲ್ಲು ಗುಡ್ಡದ ಹಾದಿಯಲ್ಲಿ ಸಾಗಿದರೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಎದುರುಗೊಳ್ಳಲಿವೆ. ಇಂಥ ಹದಗೆಟ್ಟ ರಸ್ತೆಯಿಂದ ಬೇಸತ್ತ ಮನಕ್ಕೆ ಜೇನಕಲ್ಲು ಗುಡ್ಡದ ವಿಹಂಗಮ ನೋಟ ಕಚಕುಳಿ ಇಡುತ್ತವೆ. ಹಸಿರು ಹೊದ್ದ ಭೂರಮೆಗೆ ಮೋಡಗಳು ಮುತ್ತಿಕ್ಕುವ ದೃಶ್ಯವನ್ನು ನೋಡುತ್ತ ಕಳೆದುಹೋಗುವುದು ದಿಟ. ಅಲ್ಲಿಂದ ಹೊರಟು ಯಲ್ಲಾಪುರ ಪಟ್ಟಣಕ್ಕೆ ಹತ್ತಿರದಲ್ಲೇ ಇರುವ ಕವಡೆಕೆರೆಗೂ ಒಂದು ಭೇಟಿ ನೀಡಿ, ಅಲ್ಲಿನ ಸುಂದರ ಪರಿಸರವನ್ನು ಕಣ್ತುಂಬಿಕೊಂಡು, ಸಂಜೆ ಸಮಯವನ್ನು ಕಳೆದು ವಾಪಸ್‌ ಮನೆಯತ್ತ ಪಯಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT