ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ತೂಕದಲ್ಲಿ ಕೊನೆಗಾಣದ ವಂಚನೆ

Published 3 ಆಗಸ್ಟ್ 2023, 5:06 IST
Last Updated 3 ಆಗಸ್ಟ್ 2023, 5:06 IST
ಅಕ್ಷರ ಗಾತ್ರ

ಸುಷ್ಮಾ ಸವಸುದ್ದಿ

ಹುಬ್ಬಳ್ಳಿ: ವ್ಯಾಪಾರ, ವಹಿವಾಟು ವೇಳೆ ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ವಂಚನೆಯಾಗುತ್ತಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿದ್ದು, ಇದರ ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ಕೆಲ ವ್ಯಾಪಾರಸ್ಥರು ಯಾವುದೆಲ್ಲ ಸ್ವರೂಪದಲ್ಲಿ ಗ್ರಾಹಕರಿಗೆ ವಂಚಿಸುವ ಸಾಧ್ಯತೆಯಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವುದರ ಜೊತೆಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯೂ ನಡೆಸಿದ್ದಾರೆ.

ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಮೋಸ ಮಾಡಬಾರದು ಮತ್ತು ಒಂದು ವೇಳೆ ವಂಚಿಸುವುದು ಪತ್ತೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆಯೂ ನೀಡುತ್ತಾರೆ.

‘ಸಂತೆಗಳಲ್ಲಿ ಅಲ್ಲದೇ ಮಾರುಕಟ್ಟೆಗಳಲ್ಲಿ ಬೀದಿ ವ್ಯಾಪಾರಸ್ಥರು ಯಾರಿಗೂ ತಿಳಿಯದಂತೆ ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಾರೆ. ಸವೆದು ಹೋದ ತೂಕದ ಕಲ್ಲುಗಳನ್ನು ಬಳಸುತ್ತಾರೆ, ತಕ್ಕಡಿಯಲ್ಲಿನ ಕೊಂಡಿ ತೆಗೆದು ಕಲ್ಲು ಇಡುತ್ತಾರೆ, ತೂಕದ ಕಲ್ಲು ಬದಲು ತಾವೇ ತಯಾರಿಸಿದ ಅಂದಾಜು ತೂಕದ ಕಲ್ಲುಗಳನ್ನು ಉಪಯೋಗಿಸುತ್ತಾರೆ’ ಎಂದು ಮಾಪನಶಾಸ್ತ್ರ ಇಲಾಖೆಯ ಸಿಬ್ಬಂದಿ ತಿಳಿಸಿದರು.

‘ತೂಕದಲ್ಲಿ ಏರುಪೇರು ಮಾಡುವುದರಿಂದ ಗ್ರಾಹಕರಿಗೆ ನೀಡುವ ವಸ್ತುವಿನಲ್ಲಿ ಸುಮಾರು 100 ರಿಂದ 200 ಗ್ರಾಂ ವ್ಯತ್ಯಾಸವಾಗುತ್ತದೆ. ತೂಕ ಮಾಡುವ ತಕ್ಕಡಿಯನ್ನು ವ್ಯಾಪಾರಸ್ಥರು ಆಗಾಗ್ಗೆ ಇಲಾಖೆಗೆ ಬಂದು ತಪಾಸಣೆ ಮಾಡಿಸಬೇಕು. ಅವರು ಬರುತ್ತಿಲ್ಲ. ನಿರಾಸಕ್ತಿ ತೋರುತ್ತಾರೆ’ ಎಂದರು.

‘ತೂಕ ಮತ್ತು ಅಳತೆಯಲ್ಲಿ ಅಲ್ಲದೇ ಹಣ್ಣು ಮತ್ತು ತರಕಾರಿ ಖರೀದಿಸುವ ವಿಷಯದಲ್ಲೂ ಗ್ರಾಹಕರಿಗೆ ವಂಚನೆಯಾಗುತ್ತದೆ. ಮಾರುಕಟ್ಟೆಯಲ್ಲಿ ನಾವು ಒಳ್ಳೆಯ ಸೇಬು, ಕಿತ್ತಳೆ ಹಣ್ಣುಗಳನ್ನು ಆಯ್ಕೆ ಮಾಡಿರುತ್ತೇವೆ. ಆದರೆ, ಮನೆಗೆ ತಂದು ಅವುಗಳನ್ನು ಪರಿಶೀಲಿಸಿದಾಗ ಕೆಟ್ಟಿರುವುದು ಗೊತ್ತಾ ಗುತ್ತದೆ. ಇದರಲ್ಲಿ ವ್ಯಾಪಾರಸ್ಥರ ಕೈಚಳಕ ಅಡಗಿರುತ್ತದೆ. ಇದರ ಬಗ್ಗೆಯೂ ಅಧಿಕಾರಿಗಳು, ಸಿಬ್ಬಂದಿ ಗಮನ ಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಸರೋಜಾ ದೇಶಪಾಂಡೆ ತಿಳಿಸಿದರು.

‘ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೆ ಒಟ್ಟು ₹54,88,001 ಸತ್ಯಾಪನೆ ಶುಲ್ಕ ಸಂಗ್ರಹಿಸಲಾಗಿದೆ. 189 ಅಂಗಡಿಗಳ ತಪಾಸಣೆ ಮಾಡಿ, 69 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು ₹5,82,000 ಅಭಿಸಂದಾನ ಶುಲ್ಕ ಸಂಗ್ರಹಿಸಲಾಗಿದೆ’ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ  ನಿಯಂತ್ರಕ ಎಂ.ಎಂ.ನರಸನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇ ಶದಿಂದ ಹಲವು ಅಭಿಯಾನ ಕೈಗೊಳ್ಳಲಾಗಿದೆ. ಶಾಲಾ–ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಆಗಾಗ್ಗೆ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದೇವೆ. ಈ ಎಲ್ಲದಕ್ಕೆ ಪೂರಕವಾಗಿ ಗ್ರಾಹಕರು ಕೂಡ ಜಾಗೃತರಾಗಬೇಕು. ವಂಚನೆಯ ಸುಳಿವು ಸಿಕ್ಕರೆ, ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕು’ ಎಂದರು.

ಸಿಬ್ಬಂದಿ ಕೊರತೆ

ಜಿಲ್ಲೆಯ ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಕೆಲವೇ ಸಿಬ್ಬಂದಿ ಇರುವ ಕಾರಣ ತಪಾಸಣೆ ಕಷ್ಟಕರವಾಗಿದೆ. 3 ಕಚೇರಿಗಳಿಗೆ ಒಬ್ಬರೇ ಅಧೀನ ನಿರೀಕ್ಷಕರಿದ್ದಾರೆ. 2020ರಿಂದ 2ಅಧೀನ ನಿರೀಕ್ಷಕರ ಹುದ್ದೆ, 2022 ಜುಲೈಯಿಂದ ಒಂದು ನಿರೀಕ್ಷಕರ ಹುದ್ದೆ ಖಾಲಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT