ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ, ಕಾರಾಗೃಹ ಮೂಲಸೌಕರ್ಯ ಸುಧಾರಣೆ: ಸರ್ಕಾರಕ್ಕೆ ವರದಿ

ಕಿಮ್ಸ್‌ ಆಸ್ಪತ್ರೆಗೆ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಬಿ. ವೀರಪ್ಪ ಭೇಟಿ
Last Updated 20 ಮೇ 2022, 5:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಸ್ಪತ್ರೆಗಳು ಮತ್ತು ಕಾರಾಗೃಹಗಳ ಮೂಲಸೌಕರ್ಯಗಳ ಸುಧಾರಣೆ ಕುರಿತು ಸರ್ಕಾರಕ್ಕೆ ವಿವರವಾದ ವರದಿ ನೀಡಲಾಗುವುದು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಳ್ಳಲಾಗುವುದು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಬಿ. ವೀರಪ್ಪ ಹೇಳಿದರು.

ಕಿಮ್ಸ್ ಆಸ್ಪತ್ರೆಗೆ ಗುರುವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನದ ಮೇರೆಗೆ, ಇದುವರೆಗೆ ಒಂಬತ್ತು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆಗಳನ್ನು ಇಟ್ಟಿದ್ದು ಕಂಡುಬಂತು. ಕೆಲವೆಡೆ ಚಿಕಿತ್ಸೆ, ಮೂಲಸೌಕರ್ಯ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳು ಗಮನಕ್ಕೆ ಬಂದಿವೆ. ಇವೆಲ್ಲವುಗಳ ಕುರಿತು ವರದಿ ನೀಡಲಾಗುವುದು’ ಎಂದು ತಿಳಿಸಿದರು.

ಪತ್ರ ಬರೆಯಿರಿ: ‘ಆಸ್ಪತ್ರೆಗೆ ಅಗತ್ಯವಿರುವ ಅನುದಾನ ಮತ್ತು ಮಾನವ ಸಂಪನ್ಮೂಲಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಿರಿ. ಹಸಿವಿದ್ದರಷ್ಟೇ ತಾಯಿ ಮಗುವಿಗೆ ಹಾಲು ಕೊಡುತ್ತಾಳೆ. ನೀವು ಕೇಳದಿದ್ದರೆ, ಅವರಿಗೆ ಹೇಗೆ ಗೊತ್ತಾಗುತ್ತದೆ’ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಸೂಚಿಸಿದರು. ಆಸ್ಪತ್ರೆಯ ಮೂಲಸೌಕರ್ಯ ಕುರಿತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ಅವರಿಗೆ ತಿಳಿಸಿದರು.

ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ನ್ಯಾಯಮೂರ್ತಿ, ರೋಗಿಗಳ ಯೋಗಕ್ಷೇಮ, ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳು ಹಾಗೂ ಔಷಧೋಪಚಾರ ಕುರಿತು ವಿಚಾರಿಸಿದರು. ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದರು. ವಾರ್ಡ್‌ವೊಂದರಲ್ಲಿ ರೋಗಿಗಳ ದಾಖಲೆಯನ್ನು ಬೇಕಾಬಿಟ್ಟಿ ಇಟ್ಟಿರುವುದನ್ನು ಕಂಡು ಗರಂ ಆದ ನ್ಯಾಯಮೂರ್ತಿ, ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶಕುಮಾರ, ಸ್ಥಾನಿಕ ವೈದ್ಯಾಧಿಕಾರಿ ಡಾ. ಸಿದ್ಧೇಶ್ವರ ಕಟಕೋಳ,ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಸಮುದಾಯ ಆರೋಗ್ಯ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ ಇದ್ದರು.

ಹುಬ್ಬಳ್ಳಿ: ‘ಆಸ್ಪತ್ರೆಗಳು ಮತ್ತು ಕಾರಾಗೃಹಗಳ ಮೂಲಸೌಕರ್ಯಗಳ ಸುಧಾರಣೆ ಕುರಿತು ಸರ್ಕಾರಕ್ಕೆ ವಿವರವಾದ ವರದಿ ನೀಡಲಾಗುವುದು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಳ್ಳಲಾಗುವುದು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಬಿ. ವೀರಪ್ಪ ಹೇಳಿದರು.

ಹೆಲ್ಮೆಟ್ ಕಡ್ಡಾಯಗೊಳಿಸಲು ಸೂಚನೆ
‘ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿಲ್ಲ. ಸಂಚಾರ ನಿಯಮಗಳ ಪಾಲನೆ ಸರಿಯಾಗಿ ಆಗುತ್ತಿಲ್ಲ. ಹೆಚ್ಚುತ್ತಿರುವ ಅಪಘಾತಗಳನ್ನು ತಪ್ಪಿಸುವುದಕ್ಕಾಗಿ, ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶನ ನೀಡುವೆ’ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ವಿದ್ಯಾರ್ಥಿ ಕಣ್ಣೀರು: ಚಕ್ಕಡಿ ಸ್ಪರ್ಧೆ ನೋಡಲು ಹೋಗಿ ಬಿದ್ದು ಬಲಗೈ ಕಳೆದುಕೊಂಡಿರುವ ಶಿಗ್ಗಾವಿಯ ಐಟಿಐ ವಿದ್ಯಾರ್ಥಿ ಬಸನಗೌಡ ಪೊಲೀಸಗೌಡ್ರ ಬಳಿ ನ್ಯಾಯಮೂರ್ತಿ ಹೋಗುತ್ತಿದ್ದಂತೆ, ಆತ ಕಣ್ಣೀರು ಹಾಕತೊಡಗಿದ. ಅದಕ್ಕೆ ಮರುಗಿದ ನ್ಯಾಯಮೂರ್ತಿ, ‘ಯಾವುದೇ ಕಾರಣಕ್ಕೂ ಎದೆಗುಂದಬೇಡ. ಅಂಗವಿಕಲರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ನೀನೂ ಸಾಧನೆ ಮಾಡು’ ಎಂದು ಧೈರ್ಯ ತುಂಬಿದರು.

ವೃದ್ಧ ರೋಗಿಗಳೊಂದಿಗೆ ಮಾತನಾಡಿದ ಅವರು, ವೃದ್ಧಾಪ್ಯ ವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT