ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬ ಮಾಡಿದರೆ ಗುತ್ತಿಗೆದಾರರಿಗೆ ನೋಟಿಸ್‌: ಗೋವಿಂದ ಕಾರಜೋಳ

Last Updated 8 ಮೇ 2022, 15:55 IST
ಅಕ್ಷರ ಗಾತ್ರ

ಕಲಘಟಗಿ: ಜೂನ್ ಅಂತ್ಯದೊಳಗೆ ನೀರಾವರಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿ ಮಾಡಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ತಾಲ್ಲೂಕಿನ ಬೆಲವಂತರ ಗ್ರಾಮದ ಹತ್ತಿರ ಬೇಡ್ತಿ (ಶಾಲ್ಮಲಾ) ನದಿಗೆ ಚೆಕ್‌ಡ್ಯಾಮ್‌ ನಿರ್ಮಿಸಿ ಅಲ್ಲಿಂದ 153 ಕಿ.ಮೀ. ಉದ್ದದ ಪೈಪ್ ಲೈನ್ ಮೂಲಕ ತಾಲ್ಲೂಕಿನ 35 ನೀರಾವರಿ ಕೆರೆ ತುಂಬಿಸುವ ₹ 122 ಕೋಟಿ ಮೊತ್ತದ ಕಾಮಗಾರಿ ಭಾನುವಾರ ವೀಕ್ಷಣೆ ಹಾಗೂ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡಿರುವ ಬೆಂಗಳೂರಿನ ಅಮೃತ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕೊರೊನಾ ಹಿನ್ನೆಲೆ ಒಂದೂವರೆ ವರ್ಷ ಹೆಚ್ಚುವರಿ ಅವಧಿ ನೀಡಲಾಗಿದೆ. ನಿಗದಿತ ಅವಧಿಗಿಂತ ಒಂದು ವರ್ಷ ವಿಳಂಬವಾಗಿದ್ದರೂ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸರ್ಕಾರದ ಹಣ ಅಪವ್ಯಯ ಆಗುತ್ತಿದೆ. ಹಾಗಾಗಿ ಗುತ್ತಿಗೆ ಸಂಸ್ಥೆಯ ವಿರುದ್ಧ `ರಿಸ್ಕ್ ಆ್ಯಂಡ್ ಕಾಸ್ಟ್ ಪ್ರಪೋಸಲ್' ಸಲ್ಲಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ್ ಮತ್ತು ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಕೆ ಕುಲಕರ್ಣಿ ಗುತ್ತಿಗೆ ಸಂಸ್ಥೆಗೆ ತಕ್ಷಣ ನೋಟಿಸ್ ನೀಡಿ, ಶೀಘ್ರದಲ್ಲಿ ರಿಸ್ಕ್ ಆ್ಯಂಡ್ ಕಾಸ್ಟ್ ಪ್ರಪೋಸಲ್ ಸಲ್ಲಿಸುವುದಾಗಿ ಹೇಳಿದರು.

ಏತ ನೀರಾವರಿ ಯೋಜನೆಗೆ ಬೆಲವಂತರ ಗ್ರಾಮದ 13 ರೈತರ ಭೂಮಿ ಬಳಕೆಯಾಗಿದೆ. ಭೂಸ್ವಾಧೀನ ಮಾಡಿಕೊಂಡು ನಾಲ್ಕು ವರ್ಷ ಕಳೆಯುತ್ತ ಬಂದರೂ ಇನ್ನೂ ತಮಗೆ ಪರಿಹಾರ ನೀಡಿಲ್ಲ, ಎಷ್ಟೇ ಗೋಗರೆದರೂ ಅಧಿಕಾರಿಗಳು ಕಣ್ತೆರೆದು ನೋಡುತ್ತಿಲ್ಲ ಎಂದು ಆ ರೈತರು ಸಚಿವರ ಎದುರು ತಮ್ಮ ಗೋಳು ತೋಡಿಕೊಂಡರು. ಶಾಸಕ ಸಿ.ಎಂ.ನಿಂಬಣ್ಣವರ ಕೂಡ ಅವರ ಪರವಾಗಿ ಸಚಿವರಲ್ಲಿ ಮನವಿ ಮಾಡಿದರು.

ಈ ಮನವಿಗೆ ಸ್ಪಂದಿಸಿದ ಸಚಿವರು, ಒಪ್ಪಿಗೆ ನಿಯಮಾವಳಿ (ಕನ್ಸೆಂಟ್) ಅಡಿಯಲ್ಲಿ ಎರಡೇ ದಿನಗಳಲ್ಲಿ ಪರಿಹಾರ ನೀಡುವಂತೆ ಭೂಸ್ವಾಧೀನ ಅಧಿಕಾರಿಗೆ ತಾಕೀತು ಮಾಡಿದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ ಗುತ್ತಿಗೆದಾರ ನಿರ್ಲಕ್ಷದಿಂದ 4 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಈಗ ತಡಮಾಡದೆ ರೈತರು ಮುಂಗಾರು ಬಿತ್ತನೆ ಮಾಡುವುದರೊಳಗಾಗಿ ರೈತರ ಜಮೀನಿನಲ್ಲಿ ಕೆರೆಗೆ ಪೈಪ್ ಲೈನ್ ಅಳವಡಿಕೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಗಂಗಾಧರ ಗೌಳಿ, ಕೃಷ್ಣಾ ತಹಶೀಲ್ದಾರ್, ಜಿಲ್ಲಾ ಬಿಜೆಪಿ ಘಟಕದ ನಿಂಗಪ್ಪ ಸುತಗಟ್ಟಿ, ಸದಾನಂದ ಚಿಂತಾಮನಿ, ಅಶೋಕ ಆಡಿನವರ, ಶಿವಯ್ಯ ಸಿಂಧೋಗಿಮಠ, ಯಲ್ಲಪ್ಪ ಆಸಮಟ್ಟಿ, ಬೀರಪ್ಪ ಡೊಳ್ಳಿನ, ಪರಶುರಾಮ ಹುಲಿಹೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT