ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಣೆಗಷ್ಟೇ ‘ಕಿತ್ತೂರು ಕರ್ನಾಟಕ’: NWKRTC ಹೆಸರು ಏಕೆ ಬದಲಾಗಿಲ್ಲ?

ವರ್ಷವಾದರೂ ದಾಖಲೆ, ಫಲಕಗಳಲ್ಲಿ ಬದಲಾಗದ ಹೆಸರು
Last Updated 24 ಡಿಸೆಂಬರ್ 2022, 4:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿ, ‌ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ‘ಕಿತ್ತೂರು ಕರ್ನಾಟಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿ ಒಂದು ವರ್ಷವಾಗಿದೆ. ಆದರೆ, ವಾಯವ್ಯ ಕರ್ನಾಟಕ‌ ಸಾರಿಗೆ ಸಂಸ್ಥೆಯ ಹೆಸರು ಮಾತ್ರ ಬದಲಾಗಿಲ್ಲ.

1956ರಲ್ಲಿ ಕರ್ನಾಟಕ ಏಕೀಕರಣಗೊಂಡು, ಮುಂಬೈ ಪ್ರಾಂತ್ಯದ ಜಿಲ್ಲೆಗಳು ಸೇರಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಆದರೂ, 65 ವರ್ಷಗಳಿಂದ ಈ ಜಿಲ್ಲೆಗಳನ್ನು ‘ಮುಂಬೈ ಕರ್ನಾಟಕ’ ಎಂದೇ ಕರೆಯಲಾಗುತ್ತಿತ್ತು. ಇನ್ನು ಮುಂದೆ ‘ಕಿತ್ತೂರು ಕರ್ನಾಟಕ’ ಎಂದು ಕರೆಯಲು 2021ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಘೋಷಣೆಯಾದ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ಜನರು ಸಂಭ್ರಮಾಚರಿಸಿದ್ದರು. ದಶಕಗಳ ತಮ್ಮ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿ
ದ್ದರು. ಆದರೆ, ವರ್ಷವಾದರೂ ಮರುನಾಮಕರಣದ ಕುರುಹು ನಾಮಫಲಕಗಳಲ್ಲಿಯೂ ಕಾಣುತ್ತಿಲ್ಲ ಎನ್ನುವುದು ಜನರಲ್ಲಿ ಬೇಸರ ಮೂಡಿಸಿದೆ.

ಸಾರಿಗೆ ಸಂಸ್ಥೆಯ ‘ವಾಯವ್ಯ ಕರ್ನಾಟಕ’ ಹೆಸರನ್ನು ‘ಕಿತ್ತೂರು ಕರ್ನಾಟಕ ಸಾರಿಗೆ’ ಎಂದು ಮರುನಾಮಕರಣ ಮಾಡುವಂತೆ ಕನ್ನಡಪರ ಸಂಘಟನೆಗಳು ಹಲವು ಬಾರಿ ಒತ್ತಾಯಿಸಿದ್ದವು.

ಬದಲಾವಣೆಗೆ ಆದೇಶವಾಗಲಿ: ‘ಕಿತ್ತೂರು ಕರ್ನಾಟಕ ಹೆಸರು ಘೋಷಣೆ ಮಾಡಿದ ಸಂದರ್ಭದಲ್ಲೇ ಹೆಸರು ಬದಲಾವಣೆಯ ಆದೇಶವನ್ನೂ ನೀಡಬೇಕಿತ್ತು. ಕೇವಲ ಘೋಷಣೆ ಮಾಡಿ ಸರ್ಕಾರ ಸುಮ್ಮನಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ, ಅದಕ್ಕೆ ಬೇಕಾದ ಹಣಕಾಸಿನ ಸಹಕಾರ ನೀಡಬೇಕು. ಹೆಸರು ಬದಲಾವಣೆಗೆ ಕೂಡಲೇ ಆದೇಶ ನೀಡಬೇಕು. ಈ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಕರ್ನಾಟಕ ಸಂಗ್ರಾಮ ಸೇನೆಯ ಅಧ್ಯಕ್ಷ ಸಂಜೀವ ದುಮಕ್ಕನವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಹಿಂದೆ ಹೈದರಾಬಾದ್‌ ಕರ್ನಾಟಕ ಎಂದು ಕರೆಯುತ್ತಿದ್ದ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದರು. ಆ ಭಾಗದ ಸಾರಿಗೆ ಸಂಸ್ಥೆಗೂ ಕಲ್ಯಾಣ ಕರ್ನಾಟಕ ಸಾರಿಗೆ ಎಂದು ಮರುನಾಮಕರಣ ಮಾಡಲಾಯಿತು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಬದಲಾಯಿಸಲಾಗಿದೆ.

*

‘ವಾಯವ್ಯ ಕರ್ನಾಟಕ ಸಾರಿಗೆ ಹೆಸರನ್ನು ಕಿತ್ತೂರು ಕರ್ನಾಟಕ ಎಂದು ಬದಲಿಸಲು ಸರ್ಕಾರದಿಂದ ಇದುವರೆಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ನಂತರ ಹೆಸರು ಬದಲಾವಣೆ ಆಗಬಹುದು’

ಗಂಗಾಧರ ಕಮಲದಿನ್ನಿ, ಅಧ್ಯಕ್ಷ, ಕನ್ನಡ ಕ್ರಿಯಾ ಸಮಿತಿ, ವಾ.ಕ.ರ.ಸಾ.ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT