ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಬದುಕು ಕಾಯ್ದ ಕಬ್ಬಿಣದ ಪಯಣ!

Last Updated 20 ಡಿಸೆಂಬರ್ 2013, 5:38 IST
ಅಕ್ಷರ ಗಾತ್ರ

ಅಳ್ನಾವರ: ತುತ್ತು ಅನ್ನಕ್ಕಾಗಿ ಕುಲ ಕಸುಬು ಹುಡುಕಿಕೊಂಡು ಅಲೆದಾಡು­ತ್ತಿ­ರುವ ಮಧ್ಯಪ್ರದೇಶ ರಾಜ್ಯದ ಕುಟುಂಬ ಕಳೆದೆರಡು ದಿನಗಳಿಂದ ಅಳ್ನಾವರದ ಬಸ್ ನಿಲ್ದಾಣದ ಪಕ್ಕದ ಬಯಲು ಪ್ರದೇಶದಲ್ಲಿ ಬೀಡು ಬಿಟ್ಟಿದೆ.

ಕೃಷಿ ಹಾಗೂ ಮನೆಗೆ ಉಪಯೋ­ಗಿಸುವ ಉಪಕರಣಗಳನ್ನು ಕಬ್ಬಿಣ ಕಾಯಿಸಿ ಶುದ್ಧ ರೂಪ ನೀಡುವ ಕಲಾ ನಿಪುಣರು. ಈ ಉತ್ಪನ್ನ­ಗಳನ್ನು ಮಾರಾಟ ಮಾಡುತ್ತಿರುವುದು ಪಟ್ಟಣ­ದಲ್ಲಿ ಕಂಡು­ಬಂತು. ಹಿರಿಯರು ಉಪ­ಕರಣ ತಯಾ­ರಿಸಿ­ದರೆ, ಯುವಕರು ಮಾರಾಟ ಮಾಡುತ್ತಾರೆ.

ಮಧ್ಯಪ್ರದೇಶ ಮತ್ತು ರಾಜಸ್ತಾನ ಗಡಿ ಭಾಗದ ಮುಕಸುಂದನಾಗಾರ್ಡ್‌ ಗ್ರಾಮದ ನಿವಾಸಿಗಳಾದ ಈ ಕುಟುಂಬ, ಮಳೆಗಾಲ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೇರೆ ಪ್ರದೇಶಕ್ಕೆ ಹೋಗಿ ಕಬ್ಬಿಣದ ಕೊಡಲಿ, ಕೋಯ್ತಾ, ಕುಡ­ಗೋಲು, ಪುಟ್ಟ ಚಾಕು, ಚಿನ್ನಿ , ಇಳಗಿ ಮುಂತಾದ ಉಪ­ಕ­ರ­ಣ­ ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ.

‘ನಮ್ಮ ರಾಜ್ಯದ ಸರ್ಕಾರಗಳಿಗೆ ಚುನಾ­ವಣೆ ಬಂದಾಗ ಮಾತ್ರ ನಮ್ಮ ನೆನಪು ಬರುತ್ತದೆ.  ನಮ್ಮ ಬವಣೆ ಕೇಳು­ವವರಿಲ್ಲ. ಯಾವ ಸರ್ಕಾರ ಬಂದ­ರೇನು, ಹೋದರೇನು ನಮ್ಮ ಗೋಳು ಕೇಳು­ವವರಿಲ್ಲ’ ಎನ್ನುತ್ತಾ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಮತ ಚಲಾ­ಯಿಸಿದ ಬೆರಳು ತೋರಿಸುತ್ತಾ ಹೇಳುತ್ತಾರೆ  ಕುಟುಂಬದ ಮುಖ್ಯಸ್ಥ ಶಂಕರ ರಾಠೋಡ.

‘ಇದೇ ನಮ್ಮ ಕುಲ ಕಸುಬು.  ಪರಂಪರೆ ಮುಂದುವರೆಸುತ್ತಾ ಸಾಗಿ­ರುವ ನಾವು ದುಡಿಮೆ ನಂಬಿ ಬದುಕಿದವರು.  ಕೃಷಿ ಪ್ರದೇಶದ ಹೆಚ್ಚಾಗಿರುವ ಗ್ರಾಮಾಂತರ ಭಾಗದಲ್ಲಿ ಕಬ್ಬು ಕಟಾವು ಕಾರ್ಯ ನಡೆದಿದ್ದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇದೆ. ಬಂದ ಆದಾಯದಿಂದ ನಮ್ಮ ಕಟುಂಬ ಜೀವನ ಸಾಗುತ್ತದೆ. ಉಪಪರಣಗಳನ್ನು ಸಮೀಪದ ಸಂತೆ, ಮಾರುಕಟ್ಟೆಗಳಲ್ಲಿ ಸಂಚರಿಸಿ ಮಾರುತ್ತೇವೆ’ ಎಂದು ಅವರು ವಿವರಿಸಿದರು.

ಕೊರೆಯುವ ಚಳಿಯಲ್ಲಿ ತಮ್ಮ ಪುಟ್ಟ ಕಂದಮ್ಮಗಳನ್ನು ಬಗಲಲ್ಲಿ ಇಟ್ಟು­ಕೊಂಡು ಹಗಲು– ರಾತ್ರಿ ಎನ್ನದೇ  ತಮ್ಮ ಕಸುಬು ನಂಬಿ ಸಾಗುತ್ತಿರುವ ಇವರ ಬದುಕಿನ ಪಯಣ ಎತ್ತ ಸಾಗು­ತ್ತಿದೆ ಎಂಬ ನಿರ್ದಿಷ್ಟ ಗುರಿ ಇವರಿಗಿಲ್ಲ. ‘ಮಕ್ಕಳು ಶಾಲೆ ಬಿಟ್ಟು ಕುಟುಂಬದ ಮೋಹ­ದಿಂದ ತಮ್ಮ ಜೊತೆಯಲ್ಲಿ ಸಾಗು­­ತ್ತಿದ್ದಾರೆ.  ಮಕ್ಕಳಿಗೆ ವಿದ್ಯೆ ಕಲಿಯಲು ಸಾಧ್ಯವಾಗುತ್ತಿಲ್ಲ’ ಎಂದು ನೋವಿನಿಂದ ನುಡಿಯುತ್ತಾರೆ ಶಂಕರ.

ಇವರ ಜೊತೆ ಸುಮಾರು 60 ಜನರ ತಂಡ ಇಲ್ಲಿಗೆ ಬಂದಿದೆ. ದಸರಾ, ದೀಪಾವಳಿಯ ನಂತರ ತಮ್ಮ ಊರನ್ನು ತೊರೆದಿರುವ ಇವರು ಮಳೆಗಾಲದ ನಾಲ್ಕು ತಿಂಗಳು ಮಾತ್ರ  ಮೂಲ ಗ್ರಾಮಗಳಿಗೆ ತೆರಳುತ್ತಾರೆ.  ಉಪಕರಣ ತಯಾರಿಸಲು ಸಮೀಪದ ದೊಡ್ಡ ಪಟ್ಟಣದಿಂದ ಕಚ್ಚಾ ಸಾಮಗ್ರಿ ತರುತ್ತಾರೆ. ಇವರಿಗೆ ಇಲ್ಲಿನ ಆಹಾರ ಹಿಡಿಸದು. ಅವರ ಜೊತೆ ಪಯಣದ ಹೆಜ್ಜೆ ಹಾಕಿರುವ ಮಹಿಳೆಯರು ತಮ್ಮ ಅಡುಗೆ ಮಾಡುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT