ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಪ್ಪಜ್ಜನ ಜಾತ್ರೆಗೆ ಬೆಳ್ಳಿ, ಬಂಗಾರ ಶೇಂಗಾ ಮಾಲೆ

Last Updated 15 ಜನವರಿ 2012, 8:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉಣಕಲ್ಲದ ಸಾಯಿನಗರದ ಸಿದ್ಧಪ್ಪಜ್ಜನ ಜಾತ್ರೆಗೆ ಬೆಳ್ಳಿ ಹಾಗೂ ಬಂಗಾರದ ಶೇಂಗಾ ಮಾಲೆಯನ್ನು ಅಲಂಕರಿಸುವುದು ಈ ಬಾರಿಯ ವಿಶೇಷ. ಇನ್ನೂ ವಿಶೇಷ ಎಂದರೆ ಎಪಿಎಂಸಿ ಹಮಾಲರು, ಕಾರಕೂನರು ಹಾಗೂ ವ್ಯಾಪಾರಸ್ಥರು ಸೇರಿಕೊಂಡು ಸಿದ್ಧಗೊಳಿಸಿದ ಮಾಲೆಯದು.

ಮಾಲೆಗಾಗಿ ಒಟ್ಟು 1.50 ಕ್ವಿಂಟಲ್ ಶೇಂಗಾವನ್ನು ಮೀಸಲಿಡಲಾಗಿತ್ತು. ಆದರೆ ಮಾಲೆ ಸಿದ್ಧಗೊಳಿಸುವಾಗ 30 ಕಿಲೋ ತೂಕದ ಶೇಂಗಾ ಹಾಳಾಯಿತು. ಅಂದರೆ ಪೋಣಿಸುವಾಗಲೇ ಶೇಂಗಾ ಒಡೆದೋ, ಹಾಳಾದ ಶೇಂಗಾದಿಂದಾಗಿ ಒಟ್ಟು 1.20 ಕ್ವಿಂಟಲ್ ಶೇಂಗಾದಿಂದ ಮಾಲೆಯನ್ನು ಸಿದ್ಧಗೊಳಿಸಲಾಗಿದೆ.
 
18 ಅಡಿ ಉದ್ದದ ಶೇಂಗಾ ಮಾಲೆಗೆ ಬೆಳ್ಳಿ ಹಾಗೂ ಬಂಗಾರ ಬಣ್ಣವನ್ನು ಬಳಿಯಲಾಗಿದೆ. ಇದನ್ನು ಸಿದ್ಧಗೊಳಿಸಲು ಕಳೆದ 25 ದಿನಗಳಿಂದ ಹಮಾಲರು, ಕಾರಕೂನರು ಹಾಗೂ ವ್ಯಾಪಾರಸ್ಥರು ಶ್ರಮಿಸಿದ್ದಾರೆ. ಮುಖ್ಯವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ. `ಮೊದಲು ಛಲೋ ದಾರದಿಂದ ಶೇಂಗಾವನ್ನು ಪೋಣಿಸಲಾಯಿತು. ಶೇಂಗಾ ಬೀಜ ಸಮೇತ ಪೋಣಿಸಬೇಕು. ಇಲ್ಲದಿದ್ದರೆ ಮಾಲೆ ಭಾರ ತಡೆಯದು. ಹೀಗಾಗಿ ಶೇಂಗಾ ಬೀಜ ಸಮೇತ ಜೋಡಿಸುವಾಗ ಹಾಳಾಗಿದ್ದು ಹೆಚ್ಚು.
 
ಆದರೂ ಬಿಡದೆ ಒಳ್ಳೆಯ ಶೇಂಗಾ ಆಯ್ದುಕೊಂಡು ಜೋಡಿಸಿದೆವು. ಆಮೇಲೆ ಅಲಂಕಾರಕ್ಕೆಂದು ಕಬ್ಬಿಣದ ರಿಂಗ್ ಮಾಡಿಸಿದೆವು. ಅವುಗಳಿಗೆ ಬಣ್ಣ ಬಳಿಯುವುದರ ಜೊತೆಗೆ ಮುತ್ತು, ರತ್ನಗಳ ಸರಗಳ ಮೂಲಕ ಅಲಂಕಾರಗೊಳಿಸಿದೆವು~ ಎಂದು ಎಪಿಎಂಸಿ ವ್ಯಾಪಾರಸ್ಥರಾದ ಶಂಕರ ನೇಗಿನಹಾಳ ಖುಷಿಯಿಂದ ಹೇಳಿದರು.

`ಕಳೆದ ವರ್ಷ ಕೂಡಾ 16 ಅಡಿ ಉದ್ದದ ಬಂಗಾರ ಬಣ್ಣದ ಶೇಂಗಾ ಮಾಲೆಯನ್ನು ತೇರಿಗೆ ಹಾಕಿದ್ದೆವು. ಈ ಬಾರಿ 18 ಅಡಿ ಉದ್ದದ ಶೇಂಗಾ ಮಾಲೆಯನ್ನು ಸಜ್ಜುಗೊಳಿಸಿದ್ದೇವೆ. ಶೇಂಗಾಕ್ಕೆ ರೂ. 5,000, ಬಂಗಾರ ಹಾಗೂ ಬೆಳ್ಳಿ ಬಣ್ಣದ ಪೇಂಟ್‌ಗಾಗಿ ರೂ. 6,000, ಕಬ್ಬಿಣದ ರಿಂಗ್‌ಗಾಗಿ ರೂ. 3,000 ಹಾಗೂ ಅಲಂಕಾರಕ್ಕಾಗಿ ಮುತ್ತು, ಸರ ಮೊದಲಾದ ಖರ್ಚುಗಳು ಸೇರಿ ಒಟ್ಟು ರೂ. 20,000 ಖರ್ಚಾಗಿದೆ. ಈ ಖರ್ಚನ್ನು ಸಮಸ್ತ ಹಮಾಲರು, ಕಾರಕೂನರು ಹಾಗೂ ವ್ಯಾಪಾರಸ್ಥರು ಭರಿಸಿದ್ದೇವೆ~ ಎಂದು ನೇಗಿನಹಾಳ ಹೆಮ್ಮೆಯಿಂದ ತಿಳಿಸಿದರು.

ಮುಖ್ಯವಾಗಿ ಹಮಾಲರು ನಿತ್ಯ ಮೂರು ತಾಸು ಶೇಂಗಾ ಜೋಡಿಸಿದ್ದಾರೆ. ಶಂಕ್ರಪ್ಪ ಹೊಸಮನಿ, ಎಲ್ಲಪ್ಪ ಕೂಸೆಮ್ಮನವರ, ಸಿದ್ಧಪ್ಪ ನರಗುಂದ, ರುದ್ರಪ್ಪ ಕರಿ, ಮಡಿವಾಳಪ್ಪ ಮೊರಬದ, ಹನುಮಂತ ಬಾಗನ್ನವರ, ದಾವಲಸಾಬ್ ಹಜರತ್‌ನವರ, ಬಸಪ್ಪ ಮಟೆಗಲ್ಲ, ಶಂಕ್ರಪ್ಪ ಹಾಲಕೇರಿ ಹಾಗೂ ಮುತ್ತು ಸಕ್ರಣ್ಣವರ ಮೊದಲಾದ ಹಮಾಲರು ದುಡಿದಿದ್ದಾರೆ. ಇವರೊಂದಿಗೆ ಶ್ರೀಕಾಂತ ವಾಳಿ ಹಾಗೂ ಸಿದ್ಧೇಶ್ವರ ನೇಗಿನಹಾಳ ಕೂಡಾ ದುಡಿದಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಶೇಂಗಾ ಮಾಲೆಯನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ಮೆರವಣಿಗೆ ಮೂಲಕ ಉಣಕಲ್ಲದ ಸಿದ್ಧಪ್ಪಜ್ಜನ ಗುಡಿಯವರೆಗೆ ಕೊಂಡೊಯ್ಯಲಾಗುತ್ತದೆ. ನಂತರ ತೇರಿಗೆ ಮಾಲೆಯನ್ನು ಸಿಂಗರಿಸಲಾಗುತ್ತದೆ.

ಶಂಖ ಮಂಟಪ: ಅತ್ತ ಎಪಿಎಂಸಿಯಲ್ಲಿ ಶೇಂಗಾ ಮಾಲೆ ಸಿದ್ಧಗೊಳುತ್ತಿದ್ದರೆ, ಉಣಕಲ್ಲದ ಸಿದ್ಧಪ್ಪಜ್ಜನ ಗುಡಿ ಬಳಿ ಶಂಖ ಹಾಗೂ ಚಿಪ್ಪುಗಳ ಮೂಲಕ 14 ಅಡಿ ಎತ್ತರ ಮತ್ತು 12 ಅಡಿ ಅಗಲದ ಮಂಟಪವನ್ನು ಅಲಂಕಾರಗೊಳಿಸಲಾಗುತ್ತಿದೆ.

ಇದಕ್ಕಾಗಿ ತಿಂಗಳಿಂದ ಸಿದ್ಧತೆ ನಡೆಯುತ್ತಿದೆ. ಕಾರವಾರ, ಕನ್ಯಾಕುಮಾರಿ, ಮಧುರೈ, ರಾಮೇಶ್ವರಂ ಸಮುದ್ರ ದಂಡೆಯಲ್ಲಿಯ ಶಂಖ ಹಾಗೂ ಚಿಪ್ಪುಗಳನ್ನು ಶ್ರೀ ಸದ್ಗುರು ಸಿದ್ಧೇಶ್ವರ ಸೇವಾ ಸಮಿತಿ ಹುಡುಗರು ಆಯ್ದುಕೊಂಡು ಬಂದಿದ್ದಾರೆ. ಈಗ ಸೇವಾ ಸಮಿತಿಯ 40 ಹುಡುಗರು ಮಂಟಪವನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ.

ಇದರ ಒಟ್ಟು ಮೌಲ್ಯ ರೂ. 25,000. ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಿದ್ಧಪ್ಪಜ್ಜನ ಗುಡಿಯನ್ನು ಶಂಖದ ಮಂಟಪಗಳು ಅಲಂಕಾರಗೊಳ್ಳಲಿವೆ. 9 ವರ್ಷಗಳ ಹಿಂದೆ ಕೇವಲ ಮೂವರು ಹುಡುಗರಿಂದ ಆರಂಭಗೊಂಡ ಸೇವಾ ಸಮಿತಿಯು ಈಗ 40 ಹುಡುಗರನ್ನು ಒಳಗೊಂಡಿದೆ. ಪ್ರತಿ ವರ್ಷ ಜಾತ್ರೆಗಾಗಿ ಸೇವಾ ಮನೋಭಾವದಿಂದ ಅವರೆಲ್ಲ ದುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT