ಭಾನುವಾರ, ಸೆಪ್ಟೆಂಬರ್ 19, 2021
29 °C
‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಕಾರ್ಯಕ್ರಮ

‘ಸ್ವಾಭಿಮಾನಿ ರಾಷ್ಟ್ರದ ಕನಸು ಬಿತ್ತಿದ ವಿವೇಕಾನಂದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ‘ಪ್ರೀತಿ ಹಾಗೂ ಜ್ಞಾನದ ಮೂಲಕ ಭಾರತ ಈ ಹಿಂದೆಯೇ ಜಗತ್ತನ್ನು ಗೆದ್ದು ತೋರಿಸಿದ ಮಹಾನ್ ಕಾರ್ಯವನ್ನು ಸ್ವಾಮಿ ವಿವೇಕಾನಂದರು ಮಾಡಿದ್ದಾರೆ’ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗಾಗಿ ಯುವ ಬ್ರಿಗೇಡ್‌ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ರಾಮನಗರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿಕಾಗೋದಲ್ಲಿ ವಿವೇಕಾನಂದರು ಆಡಿದ ಮಾತುಗಳ ಮೂಲಕ ಜಗತ್ತು ಭಾರತವನ್ನು ಅತ್ಯಂತ ಗೌರವಪೂರ್ವಕವಾಗಿ ನೋಡುವಂತಾಗಿದೆ. ಅಮೆರಿಕದ ಜನರ ಮನಸ್ಸು ಗೆಲ್ಲುವ ಕಾರ್ಯ ನಡೆಸಿದ್ದು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ’ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರ ಕಲ್ಪನೆಯ ಸ್ವಾಭಿಮಾನಿ ರಾಷ್ಟ್ರದ ಕಲ್ಪನೆ ಇವತ್ತು ನನಸಾಗಿದೆ. ಎಲ್ಲಿಯವರೆಗೆ ನಮ್ಮಲ್ಲಿ ಸ್ವಾಭಿಮಾನವಿರುತ್ತದೋ ಅಲ್ಲಿಯವರೆಗೆ ನಾವು ಜಗತ್ತನ್ನು ಆಳುತ್ತೇವೆ. ಅದನ್ನು ಕಳೆದುಕೊಂಡರೆ ಜಗತ್ತಿನವರೆಲ್ಲರೂ ನಮ್ಮನ್ನು ಆಳಲು ಆರಂಭಿಸುತ್ತಾರೆ ಎಂದು ವಿವೇಕಾನಂದರು ಹೇಳಿದ್ದರು. ಇವತ್ತು ಭಾರತ ಜಗತ್ತನ್ನು ಆಳುವ ಕಾಲ ಸಮೀಪವಾಗಿದೆ ಎಂದರು.

ಸೇವೆ ಮತ್ತು ತ್ಯಾಗಗಳ ಪ್ರತಿರೂಪವೇ ಸಹೋದರಿ ನಿವೇದಿತಾ. ಅವರ ವ್ಯಕ್ತಿತ್ವ ಈ ದೇಶದ ಹೆಣ್ಣು ಮಕ್ಕಳಿಗೆ ಆದರ್ಶವಾಗಿದೆ ಎಂದರು.
ಬೆಳಕು ಅಕಾಡೆಮಿಯ ಅಶ್ವಿನಿ ಅಂಗಡಿ ಮಾತನಾಡಿ, ಐರ್ಲೆಂಡ್ ಮೂಲದ ಸಹೋದರಿ ಭಾರತದಲ್ಲಿ ಮಹಿಳಾ ಶಕ್ತಿಗೆ ಪ್ರೇರಣೆ ದೊರಕಿಸಿದ ಮಹಾಮಾತೆಯಾಗಿದ್ದಾರೆ. ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ನಿವೇದಿತಾ ಅವರ ಪ್ರತಿಮೆ ಇದ್ದ ರಥದ ಶೋಭಾಯಾತ್ರೆ ನಡೆಸಲಾಯಿತು.

ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್. ಕುಮಾರಸ್ವಾಮಿ, ರಾಮನಗರ ಪ್ಯಾಲೇಸ್ ಕಲ್ಯಾಣ ಮಂಟಪದ ಮಾಲೀಕ ಪ್ರಭಾಕರ್, ಯುವ ಬ್ರಿಗೇಡ್‌್ ಸಂಚಾಲಕರಾದ ಕೃಷ್ಣ ಎಸ್.ರಾಜು, ಕಾರ್ತೀಕ್, ಹಿತೈಷಿ, ಸಿದ್ದರಾಜು, ಗೌತಮ್‌, ತೇಜಸ್‌, ರಾಹುಲ್‌, ಷಣ್ಮುಗಿಪ್ರಿಯ, ಜಿ. ಕಿರಣ್‌, ಅನಿಲ್‌ಬಾಬು ಇದ್ದರು.

ಗಾಯಕಿಯರಾದ ಸುಷ್ಮಾ, ಐಶ್ವರ್ಯ ಪ್ರಾರ್ಥಿಸಿದರು. ಆರ್.ಕೆ. ಸತೀಶ್ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್. ಚನ್ನವೀರಪ್ಪ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು