ಸೋಮವಾರ, ಡಿಸೆಂಬರ್ 9, 2019
25 °C
ಸಂಸದ ಸುರೇಶ್ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ

ಸರ್ಕಾರಿ ಆಸ್ತಿ: ವರದಿ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಸರ್ಕಾರಿ ಕಟ್ಟಡಗಳು ಇರುವ ನಿವೇಶನಗಳು ಸರ್ಕಾರದ ಹೆಸರಿನಲ್ಲಿ ಇದೆಯೋ ಇಲ್ಲವೇ ಅನ್ಯರ ಹೆಸರಿನಲ್ಲಿ ಇದೆಯೋ ಎಂಬುದನ್ನು ಪತ್ತೆ ಮಾಡಲು ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸಂಸದ ಡಿ.ಕೆ. ಸುರೇಶ್ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಅವರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಶಾಲಾ ಕಾಲೇಜುಗಳವರೆಗೆ ಹಾಗೂ ವಿವಿಧ ಇಲಾಖೆಗಳ ಕಟ್ಟಡಗಳು ಯಾರ ಹೆಸರಿನಲ್ಲಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ದಾಖಲೆಗಳು ಇಲ್ಲದಿದ್ದರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ದಾಖಲೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಹಿಂದೆ ಸಮಾಜಕ್ಕೆ ಉಪಕಾರವಾಗಲಿ ಎಂದು ಹಿಂದಿನ ವರ್ಷಗಳಲ್ಲಿ ಹಿರಿಯರು ಭೂಮಿಯನ್ನು ದಾನ ನೀಡಿದ್ದರು. ಆದರೆ ಈಗಿನ ವರ್ಷಗಳಲ್ಲಿ ಭೂಮಿಗೆ ಬೆಲೆಗೆ ಬಂದಿರುವುದರಿಂದ ಈ ಆಸ್ತಿ ನಮ್ಮದು ಎಂದು ಮಕ್ಕಳು, ಮರಿಮಕ್ಕಳು ಬರುತ್ತಾರೆ. ಆದ್ದರಿಂದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಚ್. ಗಂಗಮಾರೇಗೌಡ ಮಾತನಾಡಿ ‘ಜಿಲ್ಲೆಯಲ್ಲಿ 1372 ಸರ್ಕಾರಿ ಶಾಲೆಗಳಿವೆ. ರಾಮನಗರ ಬ್ಲಾಕ್‌ನಲ್ಲಿ 301 ಶಾಲೆಗಳು ಬರುತ್ತವೆ. ಆದರೆ ಇದರಲ್ಲಿ 100ಕ್ಕೂ ಹೆಚ್ಚು ಶಾಲೆಗಳ ಕಟ್ಟಡದ ಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳಿಲ್ಲ’ ಎಂದು ಸಭೆಗೆ ಮಾಹಿತಿ ತಿಳಿಸಿದರು.

‘ನೀವು ಕೂಡಲೇ ಜಿಲ್ಲೆಯ ಎಲ್ಲಾ ಶಾಲೆಗಳ ಕಟ್ಟಡದ ಸ್ಥಳಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ. ದಾಖಲೆ ಇಲ್ಲದಿರುವ ಶಾಲೆಗಳ ಕಟ್ಟಡದ ಸ್ಥಳಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ’ ಎಂದು ಸಂಸದರು ಸೂಚಿಸಿದರು.

ಸಹಿ ಅಗತ್ಯ: ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡುವಾಗ ಕೃಷಿ ಇಲಾಖೆಯ ಅಧಿಕಾರಿಗಳು ನೀಡುವ ವರದಿಗೆ ಆಯಾ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಸದಸ್ಯರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಹಿ ಇರಬೇಕು ಎಂದು ಸಂಸದರು ತಿಳಿಸಿದರು.

ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರದ್ದಾದರೂ ಯೋಜನೆಯನ್ನು ಅಭಿವೃದ್ಧಿಗೊಳಿಸುವುದು ರಾಜ್ಯ ಸರ್ಕಾರ. ಏಜೆನ್ಸಿ ತೆಗೆದುಕೊಂಡಿರುವ ಅಧಿಕಾರಿ ಸರಿಯಾರಿ ಸ್ಪಂದಿಸುತ್ತಿಲ್ಲ ಎಂದರೆ ಅಂತಹವರ ವಿರುದ್ಧ ಸರ್ಕಾರಕ್ಕೆ ದೂರು ಕೊಡಿ ಎಂದರು.

‘ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಸರ್ಕಾರಿ ವೈದ್ಯರು ಹೆರಿಗೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಿದ್ದಾರೆ’ ಎಂದು ಸುರೇಶ್‌ ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಹೆರಿಗೆ ಮಾಡದೆ ಗರ್ಭಿಣಿಗೆ ತೊಂದರೆ ನೀಡಿದ ಪ್ರಸೂತಿ ತಜ್ಞೆ ಡಾ. ನಳಿನಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸಿಇಒ ಮುಲ್ಲೈ ಮುಹಿಲನ್‌ ಜಿಲ್ಲಾಶಸ್ತ್ರಚಿಕಿತ್ಸಕ ಡಾ. ವಿಜಯನರಸಿಂಹ ಅವರಿಗೆ ಸೂಚಿಸಿದರು.

50 ಹಾಸಿಗೆಗಳ ಆಸ್ಪತ್ರೆ ಮಾಡಿ: ಬಿಡದಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಿ. ಟೊಯೊಟಾ ಕಂಪನಿಯ ಅನುದಾನವನ್ನು ಬಳಸಿಕೊಂಡು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಎಂದು ಸುರೇಶ್‌, ಡಿಎಚ್ಒ ಅವರಿಗೆ ಸೂಚಿಸಿದರು.

ಪಿಡಿಒಗಳ ದೂರು: ಹಲವು ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿ ಹಕ್ಕು, ರಾಜಕೀಯ ಮುಖಂಡರ ಪ್ರತಿಷ್ಠೆಯಿಂದ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

‘ಪಿಡಿಒಗಳು ನೆಪಗಳನ್ನು ಹೇಳದೆ ಸರಿಯಾಗಿ ಕೆಲಸ ಮಾಡಬೇಕು. ಸರ್ಕಾರದ ವತಿಯಿಂದ ನಿಮಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಮರ್ಪಕವಾಗಿ ಕೆಲಸ ಮಾಡಿ’ ಎಂದು ಸುರೇಶ್ ಸೂಚಿಸಿದರು. ‘ಮುಂದಿನ ದಿನಗಳಲ್ಲಾದರೂ ರಾಜಕೀಯ ಮಾಡದೆ, ಕಳ್ಳ ಬಿಲ್‌ಗಳನ್ನು ಮಾಡದೆ ಕೆಲಸ ಮಾಡಿ’ ಎಂದರು.

ದೂರು: ‘ಕೆಲಸ ಮಾಡುತ್ತೇವೆ ಎಂದು ಸಭೆಯಲ್ಲಿ ಹೇಳುತ್ತಾರೆ, ಆದರೆ ಪಂಚಾಯಿತಿ ಕಚೇರಿಗೆ ಹೋದರೆ ಅಲ್ಲಿ ನಮ್ಮ ಕೆಲಸಗಳನ್ನು ಮಾಡಿಕೊಡುವುದಿಲ್ಲ’ ಎಂದು ಕೆಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ದೂರಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ್ ಸೇರಿದಂತೆ ಹಿರಿಯ ಅಧಿಕಾರಿಗಳ ಕಾರ್ಯವೈಖರಿಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಿ. ಚನ್ನಪಟ್ಟಣದಲ್ಲಿ 32 ಗ್ರಾಮ ಪಂಚಾಯಿತಿಗಳಿವೆ. ಆದರೆ ಎಲ್ಲಿಯೂ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಮುಂದಿನ ಫೆಬ್ರವರಿ ತಿಂಗಳಿನೊಳಗೆ ನೀವು ನರೇಗಾ ಅಡಿ ತೋಟಗಾರಿಕೆ ಇಲಾಖೆ ವತಿಯಿಂದ ₨40 ಕೋಟಿ ಮೊತ್ತದ ಕೆಲಸವನ್ನು ಮಾಡಿಸಬೇಕು. ಇದು ಕಡೆ ಎಚ್ಚರಿಕೆ. ಇಲ್ಲದಿದ್ದರೆ ನಿಮ್ಮ ಸಂಬಳವನ್ನು ತಡೆ ಹಿಡಿಸಲಾಗುವುದು’ ಎಂದು ಅವರು ಹೇಳಿದರು.

ನೋಟಿಸ್: ಸಭೆಗೆ ಬರದ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಸುರೇಶ್‌ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜ್, ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ ಇದ್ದರು.

ನರೇಗಾ: ಹಿಂದುಳಿದ ರಾಮನಗರ
‘ರಾಮನಗರ ಜಿಲ್ಲೆ ನರೇಗಾದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿತ್ತು. ಆದರೆ ಈಗ 27ನೇ ಸ್ಥಾನದಲ್ಲಿದೆ’ ಎಂದು ಸುರೇಶ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಉಪ ಕಾರ್ಯದರ್ಶಿಯವರ ಬೇಜವಬ್ದಾರಿತನದಿಂದ ಹೀಗಾಗಿದೆ. ಈಗಲಾದರೂ ಜಾಗೃತಿಯಿಂದ ಕೆಲಸ ಮಾಡಿ. ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳಿ’ ಎಂದು ಎಚ್ಚರಿಸಿದರು.

* ಸಾಕಷ್ಟು ಶಾಲಾ ಕಟ್ಟಡಗಳ ನಿವೇಶನಗಳು ಇನ್ನೂ ದಾನಿಗಳ ಹೆಸರಿನಲ್ಲಿವೆ. ಇವುಗಳನ್ನು ಸರ್ಕಾರದ ಹೆಸರಿಗೆ ಬದಲಿಸಿಕೊಳ್ಳಲು ಕ್ರಮ ಕೈಗೊಳ್ಳಿ

-ಡಿ.ಕೆ. ಸುರೇಶ್‌, ಸಂಸದ

ಪ್ರತಿಕ್ರಿಯಿಸಿ (+)