ಬಿತ್ತನೆಗೆ ಹಿನ್ನಡೆ: ವರದಿ ಸಲ್ಲಿಸಲು ಸೂಚನೆ

7
ತಾಂತ್ರಿಕ ತೊಂದರೆಯಿಂದ ನರೇಗಾ ಅನುಷ್ಟಾನಕ್ಕೆ ಅಡಚಣೆ: ಕ್ರಮದ ಭರವಸೆ

ಬಿತ್ತನೆಗೆ ಹಿನ್ನಡೆ: ವರದಿ ಸಲ್ಲಿಸಲು ಸೂಚನೆ

Published:
Updated:
Deccan Herald

ರಾಮನಗರ: ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಂಸದ ಡಿ.ಕೆ. ಸುರೇಶ್ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು. ಮುಂಗಾರಿನ ಪರಿಸ್ಥಿತಿ ಬಗ್ಗೆ  ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೀಪಜಾ ಸಭೆಗೆ ಮಾಹಿತಿ ನೀಡಿದರು. ‘ಜಿಲ್ಲೆಯಲ್ಲಿ ಜುಲೈನಲ್ಲಿ ಬಿತ್ತನೆ ಕಾರ್ಯ ಹೆಚ್ಚು ನಡೆಯಬೇಕಿದ್ದು, ಈ ಅವಧಿಯಲ್ಲಿ ಶೇ.51 ರಷ್ಟು ಮಳೆ ಕೊರತೆಯಾಗಿದೆ. ಈವರೆಗೆ ಕೇವಲ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯವು ನಡೆದಿದೆ. ಮಾಗಡಿ 13 ಸಾವಿರ, ಕನಕಪುರ 200, ಚನ್ನಪಟ್ಟಣದಲ್ಲಿ 480 ಹಾಗೂ ರಾಮನಗರದಲ್ಲಿ 3900 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ’ ಎಂದರು.
ಈ ಕುರಿತು ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರೋಪಾಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸುರೇಶ್ ತಿಳಿಸಿದರು.

ನರೇಗಾ–ತಾಂತ್ರಿಕ ಸಮಸ್ಯೆ: ನರೇಗಾ ಅನುಷ್ಟಾನದಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದ ರಾಮನಗರವು ನೂತನ ತಂತ್ರಾಂಶದ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ತೀವ್ರ ಹಿನ್ನಡೆ ಅನುಭವಿಸಿರುವುದಕ್ಕೆ ಸುರೇಶ್ ಕಳವಳ ವ್ಯಕ್ತಪಡಿಸಿದರು.

‘2018–-19ನೇ ಸಾಲಿನಲ್ಲಿ 55 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ ಈವರೆಗೆ ಕೇವಲ 5 ಲಕ್ಷ ಮಾನವ ದಿನಗಳಲ್ಲಿ ಸೃಜಿಸಲಾಗಿದೆ. ತಂತ್ರಾಂಶ ಅಳವಡಿಕೆಗೆ ರಾಮನಗರವನ್ನು ಪ್ರಾಯೋಗಿಕ ಜಿಲ್ಲೆಯನ್ನಾಗಿ ತೆಗೆದುಕೊಳ್ಳಲಾಗಿದೆ. ಎನ್‍ಎಂಆರ್ ಸೃಜಿಸಲು ಅಡಚಣೆಯಾಗುತ್ತಿದೆ. ತಾಂತ್ರಿಕ ಸಮಸ್ಯೆಯ ಕುರಿತು ತಂತ್ರಾಂಶ ಅಭಿವೃದ್ಧಿಕಾರರ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ತಂತ್ರಾಂಶ ಸಂಪೂರ್ಣ ಅಭಿವೃದ್ಧಿಯಾಗುವವರೆಗೆ ಅದನ್ನು ಡಿ–-ಲಿಂಕ್ ಮಾಡುವುದು ಉತ್ತಮ’ ಎಂದು ಅಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸುರೇಶ್ ಭರವಸೆ ನೀಡಿದರು.

‘ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಇಲಾಖೆಯು ಉತ್ತಮ ಸಾಧನೆ ತೋರಿಲ್ಲ. ಮಾವು, ತೆಂಗು ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ರೈತರಿಗೆ ಅನುಕೂಲ ಆಗುತ್ತಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಈ ಹಣಕಾಸು ವರ್ಷಾಂತ್ಯಕ್ಕೆ ಕನಿಷ್ಠ ₨40 ಕೋಟಿ ವೆಚ್ಚದ ಕಾಮಗಾರಿಗಳನ್ನು ಮುಗಿಸಿರಬೇಕು’ ಎಂದು ಗುರಿ ನೀಡಿದರು.

ಎನ್‌ಎಂಆರ್ ತೆಗೆಯಲು ಸೂಚನೆ: ಸರ್ಕಾರದ ವಿವಿಧ ವಸತಿ ಯೋಜನೆಗಳ ಎನ್‌ಎಂಆರ್ ತೆಗೆಯಲು ಮೀನಮೇಷ ಎಣಿಸುತ್ತಿರುವ ಪಿಡಿಒಗಳಿಗೆ ಷೋಕಾಸ್ ನೀಡಿ, ವಾರದೊಳಗೆ ವರದಿ ನೀಡದಿದ್ದಲ್ಲಿ ಅಮಾನತಿಗೆ ಕ್ರಮ ಜರುಗಿಸುವಂತೆ ಅವರು ಜಿಲ್ಲಾಧಿಕಾರಿಗೆ ತಿಳಿಸಿದರು.
ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ಆಸ್ಪತ್ರೆಗಳ ದುರಸ್ತಿ ಸಂಬಂಧ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ಭೂದಾಖಲೆ ಬದಲಿಸಿಕೊಳ್ಳಿ: ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ದಾನವಾಗಿ ದೊರೆತಿರುವ ನಿವೇಶನಗಳ ಪಟ್ಟಿ ಮಾಡಿ, ಅಂತಹ ಆಸ್ತಿಯನ್ನು ಸರ್ಕಾರದ ಹೆಸರಿಗೇ ಖಾತೆ ಮಾಡಿಸಿಕೊಳ್ಳಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

‘ಈ ಹಿಂದೆ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ, ನೀರಿನ ಟ್ಯಾಂಕ್ ಮೊದಲಾದವುಗಳ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಗಳು ಜಮೀನು ದಾನ ಮಾಡಿದ್ದಾರೆ. ಅಂತಹ ಜಮೀನುಗಳನ್ನು ಸಂಬಂಧಿಸಿದ ಇಲಾಖೆಗಳು ನೋಂದಣಿ ಮಾಡಿಸಿಕೊಂಡಿಲ್ಲ. ಈಗ ಭೂಮಿಗೆ ಬಂಗಾರದ ಬೆಲೆ ಬಂದಿರುವ ಕಾರಣ ಅವರ ವಂಶಜರು ನ್ಯಾಯಾಲಯದ ಮೆಟ್ಟಿಲು ಏರತೊಡಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಸಂದರ್ಭ ಮೂರು ಶಾಲೆಗಳ ಜಮೀನಿಗೆ ಸಂಬಂಧಿಸಿ ಇದೇ ತೊಂದರೆಯಾಗಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉದ್ಬವಿಸದಂತೆ ಎಚ್ಚರ ವಹಿಸಬೇಕು. ದಾನ ಕೊಟ್ಟ ಜಮೀನುಗಳನ್ನು ಕಡ್ಡಾಯವಾಗಿ ಖಾತೆ ಮಾಡಿಸಬೇಕು’ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಕೊರತೆ: ‘ಜಿಲ್ಲೆಯಲ್ಲಿ 149 ಆಶಾ ಕಾರ್ಯಕರ್ತೆಯರ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಕರೆಯಲಾಗಿದ್ದು, 60 ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದಾರೆ. 109 ಆರೋಗ್ಯ ಸಹಾಯಕಿಯರ ಹುದ್ದೆಗಳೂ ಖಾಲಿ ಇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪಿ. ಅಮರ್‌ನಾಥ್‌ ಸಭೆಯ ಗಮನಕ್ಕೆ ತಂದರು.

‘ಆರೋಗ್ಯ ಇಲಾಖೆಯ 120 ಗುತ್ತಿಗೆ ನೌಕರರಿಗೆ ಸಂಬಂಧಿಸಿದ ಗುತ್ತಿಗೆದಾರರು ನಿಗದಿತ ವೇತನ ನೀಡದೇ ವಂಚಿಸುತ್ತಿದ್ದಾರೆ’ ಎಂದು ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ವರದಿ ನೀಡುವಂತೆ ಸಂಸದರು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸದೇ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿರುವುದು. ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿತ್ತಿರುವ ಕುರಿತು ಸುರೇಶ್ ಡಿಎಚ್‌ಒರನ್ನು ಪ್ರಶ್ನಿಸಿದರು.

ಶಾಸಕ ಎ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ ಇದ್ದರು. ಜಿ.ಪಂ. ಅಧ್ಯಕ್ಷ ಸಿ.ಪಿ. ರಾಜೇಶ್ ಹಾಗೂ ಸಿಇಒ ಮುಲ್ಲೈ ಮುಹಿಲನ್‌ ಗೈರಾಗಿದ್ದರು.

ಆಂಬುಲನ್ಸ್‌ ಕೊಟ್ಟರೂ ಡ್ರೈವರ್‌ ಇಲ್ಲ!
‘ಸಚ್ಚಿದಾನಂದ ಸ್ವಾಮೀಜಿ ಕನಕಪುರದ ದೊಡ್ಡಾಲಹಳ್ಳಿ ಆಸ್ಪತ್ರೆಗೆ ಆಂಬುಲನ್ಸ್ ಕೊಡುಗೆ ನೀಡಿದ್ದಾರೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು.
‘ಆಸ್ಪತ್ರೆ ಅನುದಾನದಲ್ಲಿ ಡ್ರೈವರ್ ವೇತನಕ್ಕೆ ಅವಕಾಶ ಇಲ್ಲ’ ಎಂದು ಡಿಎಚ್‌ಒ ಪ್ರತಿಕ್ರಿಯಿಸಿದರು. ತಾಲ್ಲೂಕು ಅನುದಾನದಲ್ಲಿಯೇ ಅವಕಾಶ ಮಾಡಿಕೊಂಡು, ಆಂಬುಲನ್ಸ್ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು.

ಎಚ್‌ಐವಿ, ಕ್ಷಯ: ಜಾಗೃತಿಗೆ ಸೂಚನೆ
‘ಕ್ಷಯ ಹಾಗೂ ಎಚ್‌ಐವಿ ಪೀಡಿತರಲ್ಲಿ ಕನಕಪುರ ತಾಲ್ಲೂಕಿನವರೇ ಹೆಚ್ಚಿಗೆ ಇದ್ದಾರೆ’ ಎಂದು ಸಂಸದ ಸುರೇಶ್ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.

‘ಕನಕಪುರದ ಕೈಗಾರಿಕೆಗಳು, ಕ್ವಾರಿಗಳಲ್ಲಿ ವಲಸಿಗ ಕಾರ್ಮಿಕರು ಹೆಚ್ಚಾಗಿದ್ದು, ಅವರಲ್ಲಿ ಈ ರೋಗಬಾಧೆಗಳು ಕಾಣಿಸಿಕೊಂಡಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಜಿಲ್ಲೆಯಲ್ಲಿ 616 ರೋಗಿಗಳು ಕ್ಷಯ ಪೀಡಿತರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ 181 ಎಚ್ಐವಿ ಪ್ರಕರಣಗಳು ಹೊಸತಾಗಿ ಪತ್ತೆಯಾಗಿವೆ. ಇವರಲ್ಲಿ 13 ಗರ್ಭಿಣಿಯರು ಸೇರಿದದು, ಶಿಶುಗಳಿಗೆ ರೋಗ ತಗುಲದಂತೆ ಎಚ್ಚರ ವಹಿಸಲಾಗಿದೆ’ ಎಂದು ಡಿಎಚ್‌ಒ ಹೇಳಿದರು. ‘ಕ್ಷಯದಿಂದ ಬಳಲುತ್ತಿರುವವರಿಗೆ ಸರ್ಕಾರವು ಮಾಸಿಕ ₨500 ನೀಡುತ್ತಿದ್ದು, ಈ ಬಗ್ಗೆ ರೋಗಿಗಳಲ್ಲಿ ಅರಿವು ಮೂಡಿಸಿ’ ಎಂದು ಸಂಸದರು ಹೇಳಿದರು.

ಸಾಲ ಮನ್ನಾ: ಮಾಹಿತಿ ಇಲ್ಲ
‘ಸಾಲ ಮನ್ನಾ ಸಂಬಂಧ ಸರ್ಕಾರದಿಂದ ಯಾವುದೇ ಸುತ್ತೋಲೆಗಳು ನಮ್ಮ ಕೈಸೇರಿಲ್ಲ. ಹೀಗಾಗಿ ಎಷ್ಟು ಸಾಲ ಮನ್ನಾ ಆಗಲಿದೆ ಎಂಬುದರ ಮಾಹಿತಿ ಇಲ್ಲ’ ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ರೈತರು ಪಡೆದಿರುವ ಅಲ್ಪಾವಧಿ, ದೀರ್ಘಾವಧಿ ಸಾಲದ ಮಾಹಿತಿಯನ್ನು ವಾರದೊಳಗೆ ನೀಡುವಂತೆ ಸಂಸದರು ಸೂಚಿಸಿದರು.

ಮೋದಿ ಹೊಗಳಿಸಿದ್ದು ಏಕೆ?
‘ವಿಮಾ ಏಜೆನ್ಸಿಯ ಸಮಸ್ಯೆಯಿಂದಾಗಿ ಕಳೆದ ಸಾಲಿನ ಬೆಳೆ ವಿಮೆ ಹಣ ಇನ್ನೂ ಕೈಸೇರಿಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕಿ ದೀಪಜಾ ಸಂಸದರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ‘ಪ್ರಧಾನ ಮಂತ್ರಿ ಅವರೊಂದಿಗೆ ರೈತರು ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಅವಕಾಶ ದೊರೆತಾಗ ಅದನ್ನು ಸದ್ಬಳಕೆ ಮಾಡಿಕೊಳ್ಳದೇ ಕೇವಲ ಅವರನ್ನು ಹೊಗಳುವುದಕ್ಕೆ ಮೀಸಲಿಟ್ಟಿರಿ. ಆಗ ಈ ಸಮಸ್ಯೆಯನ್ನು ಗಮನಕ್ಕೆ ತರಬಹುದಿತ್ತು. ಈಗ ನಾನೇನು ಮಾಡಲಿ’ ಎಂದು ಪ್ರಶ್ನಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !