ಭದ್ರಾ ಜಲಾಶಯದತ್ತ ಜನಸಾಗರ

7
ಸ್ವಚ್ಚತೆ, ಮೂಲ ಸೌಕರ್ಯ ಇಲ್ಲಿ ಮರೀಚಿಕೆ

ಭದ್ರಾ ಜಲಾಶಯದತ್ತ ಜನಸಾಗರ

Published:
Updated:
Deccan Herald

ಭದ್ರಾವತಿ: ಭದ್ರಾ ಜಲಾಶಯ ತುಂಬಿ ಹರಿಯುತ್ತಿದ್ದು, ಅಣೆಕಟ್ಟಿನಿಂದ ಹೊರಬಿಟ್ಟಿರುವ ನೀರಿನ ಅಬ್ಬರವನ್ನು ವೀಕ್ಷಿಸಲು ಜನಸಾಗರವೇ ಒಂದೆಡೆ ಹರಿದು ಬರುತ್ತಿದ್ದರೆ, ಮತ್ತೊಂದೆಡೆ ಬಾಗಿನ ಅರ್ಪಣೆಯ ನೆಪದಲ್ಲಿ ರಾಜಕೀಯ ನಾಯಕರೇ ದಂಡೇ ಹೆಜ್ಜೆ ಹಾಕುತ್ತಿದೆ.

ಕಳೆದ 10 ದಿನದಲ್ಲಿ ಲಕ್ಷಾಂತರ ಜನರು ಜಲಾಶಯ ಸೊಬಗು ಸವಿಯಲು ಬರುತ್ತಿದ್ದರೆ, ಮೊತ್ತೊಂದೆಡೆ ಬಂದವರಿಗೆ ಅವಶ್ಯ ಇರುವ ಕುಡಿಯುವ ನೀರು, ಶೌಚಾಲಯ, ವಸತಿ ಸೇರಿದಂತೆ ಇನ್ನಿತರೆ ಸೌಕರ್ಯ ಮರೀಚಿಕೆ ಎನಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಮೈದುಂಬಿ ಹರಿಯದೆ ಮೌನವಹಿಸಿದ್ದ ಭದ್ರೆಗೆ ಈ ಬಾರಿ ವರುಣನ ಆರ್ಭಟ ಹೆಚ್ಚಾಗಿದ್ದರಿಂದ ಭರಪೂರ ನೀರು ಹರಿದು ಬಂದು ಜಲಾಶಯ ತುಂಬಿ, ಅಣೆಕಟ್ಟಿನ ನಾಲ್ಕು ಗೇಟಿನಲ್ಲೂ ನೀರು ಹರಿಸಲಾಗಿದೆ.

ಇದರ ಸೌಂದರ್ಯ ಸವಿಯಲು ನಾಗರಿಕರು ಒಂದೆಡೆ ಜಮಾಯಿಸಿದ್ದರೆ, ಮತ್ತೊಂದೆಡೆ ಭದ್ರಾ ಜಲಾಶಯ ವ್ಯಾಪ್ತಿಯ ಜಿಲ್ಲೆಗಳ ಚುನಾಯಿತ ಶಾಸಕರು, ಪ್ರತಿನಿಧಿಗಳು ಬಾಗಿನ ಅರ್ಪಣೆ ನೆಪದಲ್ಲಿ ಸಹಸ್ರಾರು ಜನರನ್ನು ಕರೆತಂದು ಅದರ ಸಂಭ್ರಮದ ಜಾತ್ರೆ ನಡೆಸಿರುವುದು ನಿರಂತರವಾಗಿ ನಡೆದಿರುವುದು ಈಬಾರಿಯ ವಿಶೇಷ.

ಬಾಗಿನ ಇತಿಹಾಸ: ಜಲಾಶಯ ತುಂಬಿ ಹರಿದಾಗ ಅದಕ್ಕೆ ಗೌರವ ಸಮರ್ಪಿಸುವ ಕೆಲಸವನ್ನು ಮೂರು ದಶಕದ ಹಿಂದಿನಿಂದಲೂ ರೈತ ನೀರಾವರಿ ಹೋರಾಟಗಾರರು, ರೈತ ಸಂಘಟನೆಗಳು ನಡೆಸಿಕೊಂಡ ಬಂದ ಸಂಪ್ರದಾಯ ಇದೆ.

ಜಲಾಶಯದಿಂದ ಹೊರಹೊರಟ ನೀರು ವಿಶೇಷವಾಗಿ ದಾವಣಗೆರೆ ಭಾಗದ ರೈತರ ಬೆಳೆಗಳಿಗೆ ಹೆಚ್ಚಿನ ಅನುಕೂಲತೆ ಮಾಡಿಕೊಡುತ್ತಿದ್ದ ಕಾರಣಕ್ಕೆ ಅಲ್ಲಿನ ನೀರಾವರಿ ಹೋರಾಟ ಸಮಿತಿ ಮುಖಂಡರಾದ ನರಸಿಂಹಪ್ಪ, ಎಸ್.ಎ. ರವೀಂದ್ರನಾಥ ಇತರರು ಬಾಗಿನ ಅರ್ಪಿಸಿ, ಜಲಾಶಯ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಆಗ್ರಹಿಸಿ ಸಭೆ ನಡೆಸುತ್ತಿದ್ದರು.

ಶಿವಮೊಗ್ಗ ರೈತ ಮುಖಂಡರು ಸಹ ನಾಲಾ ವ್ಯಾಪ್ತಿಯ ರೈತರ ಜತೆಗೂಡಿ ತುಂಬಿದ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಅಣೆಕಟ್ಟಿನ ಕುರಿತಾಗಿ ವಿಶೇಷ ಕಾಳಜಿಯ ಮನವಿಪತ್ರ ಸಲ್ಲಿಸಿ ಸಭೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದರು.

ಕಾಲಾನಂತರ ಜಲಾಶಯ ಭಾಗದ ಚುನಾಯಿತ ಶಾಸಕರು, ಪ್ರತಿನಿಧಿಗಳು ಬಾಗಿನ ಅರ್ಪಿಸುವ ಪದ್ಧತಿಯನ್ನು ಕಳೆದೆರಡು ದಶಕದಿಂದ ಆರಂಭಿಸಿದ ಪರಿಣಾಮ ಜನಜಾತ್ರೆಯ ಅಬ್ಬರಗಳು ಆರಂಭವಾದವು.

ಸೌಕರ್ಯ ಕೊರತೆ:  ಜಲಾಶಯ ನೀರಿನಿಂದ ತುಂಬಿ ಹರಿದರು ವ್ಯವಸ್ಥಿತ ಕುಡಿಯುವ ನೀರಿನ ಕೊರತೆ ಮಾತ್ರ ಈಗಲೂ ಇದೆ. ಇದರ ಕುರಿತಾಗಿ ಯಾವುದೇ ವ್ಯವಸ್ಥೆ ಕಲ್ಪಿಸುವಲ್ಲಿ ಲೋಕೋಪಯೋಗಿ ಇಲಾಖೆ ವಿಫಲವಾಗಿದೆ.
ಇಡೀ ಜಲಾಶಯ ವ್ಯಾಪ್ತಿಯಲ್ಲಿ ಬಯಲೇ ಶೌಚಾಲಯ ಎಂಬ ಸ್ಥಿತಿ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ಇದಕ್ಕಾಗಿ ತೊಂದರೆ ಎದುರಿಸುವ ಸ್ಥಿತಿ ಇದೆ.

ಇರುವ ಒಂದು ಅತಿಥಿಗೃಹ ಯಾವಾಗಲೂ ಗಣ್ಯರಿಗೆ ಮೀಸಲಿರುವ ಕಾರಣ ಅದರ ಮುಂಭಾಗದ ಪರಿಸರದಲ್ಲಿ ಪ್ರವಾಸಿಗರು ಜಲಾಶಯ ಸೌಂದರ್ಯ ಸವಿಯಲು ಬೇಕಾದ ಸೂಕ್ತ ಆಸನಗಳ ಕೊರತೆ ಎದ್ದು ಕಾಣುತ್ತದೆ.

‘ಇಲ್ಲಿಗೆ ಬರುವ ಜನರಿಗೆ ಸೂಕ್ತ ಶೌಚಾಲಯ ಇಲ್ಲದ ಕಾರಣ ಶಾಲಾ, ಕಚೇರಿಗಳು ಕಟ್ಟಡದ ಗೋಡೆಗಳು ಆಧಾರವಾಗಿ ಎಲ್ಲೆಲ್ಲೂ ಕೆಟ್ಟ ವಾಸನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶಾಲೆಗೂ ರಜೆ ನೀಡಿದ ಉದಾಹರಣೆ ಇದೆ ಎನ್ನುತ್ತಾರೆ’ ಸ್ಥಳೀಯ ನಿವಾಸಿ ಸತೀಶ್.

ಜನಪ್ರತಿನಿಧಿಗಳ ಅದ್ದೂರಿ ಬಾಗಿನ ಅರ್ಪಣೆ ಕಾರ್ಯಕ್ರಮಗಳಿಂದ ಊಟ ಮಾಡಿದ ತಟ್ಟೆ, ತಿಂದು ಎಸೆದು ಹೋಗಿರುವ ಅನಾವಶ್ಯಕ ವಸ್ತುಗಳ ರಾಶಿ ಜಲಾಶಯ ಆವರಣದ ಹೆಲಿಪ್ಯಾಡ್ ಬಳಿ ಬಿದ್ದು ಗಬ್ಬು ವಾಸನೆ ಸೃಷ್ಟಿಯಾಗಿದೆ ಎನ್ನುತ್ತಾರೆ ಶಂಕರೇಗೌಡ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !