ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಭಾಷೆ ಪ್ರಭುತ್ವಕ್ಕೆ ಭಾರತೀಯರ ಮುದ್ರೆ

1ನೇ ತರಗತಿಯಿಂದ ಇಂಗ್ಲಿಷ್‌ ಕಡ್ಡಾಯ ಸಂವಾದದಲ್ಲಿ ಚಿಂತಕ ರಾಜೇಂದ್ರ ಚೆನ್ನಿ ಪ್ರತಿಪಾದನೆ
Last Updated 4 ಜನವರಿ 2019, 14:49 IST
ಅಕ್ಷರ ಗಾತ್ರ

ಶಿವಮೊಗ್ಗ:ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್‌ ಭಾಷೆ ಪ್ರಭುತ್ವ ಸಾಧಿಸಲು ಭಾರತೀಯರೇ ಕಾರಣ. ಇದರಿಂದ ದಲಿತರು, ಹಿಂದುಳಿದವರು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದುಚಿಂತಕಡಾ.ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್‌ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಅವರ 188ನೇ ಜನ್ಮದಿನ ಹಾಗೂ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಕಡ್ಡಾಯವಾಗಿ ಬೇಕು ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ಮೇಲ್ವರ್ಗದವರು ದಲಿತರಿಗೆ ಶಿಕ್ಷಣ ನೀಡಲು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ಸಂಸ್ಕೃತಕ್ಕೆ ನೀಡಲು ಒಲವು ತೋರುತ್ತಿದ್ದರು. ಅಂತಹ ಸಮಯದಲ್ಲಿ ರಾಜಾರಾಮ ಮೋಹನರಾಯ್ ಸೇರಿದಂತೆ ಹಲವು ನಾಯಕರು ಭಾರತೀಯರಿಗೆ ಇಂಗ್ಲಿಷ್‌ ಶಿಕ್ಷಣ ಅಗತ್ಯವಿದೆ ಎಂದು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟರು. ಮಧ್ಯಮ ವರ್ಗದವರೂ ಅದಕ್ಕೆ ಧ್ವನಿಗೂಡಿಸಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.

ಭಾರತೀಯ ಚರಿತ್ರೆ ಅವಲೋಕಿಸಿದರೆ ಅನಾದಿ ಕಾಲದಿಂದಲೂ ಆಡಳಿತದಲ್ಲಿರುವವರ ಭಾಷೆಯೇ ಶಿಕ್ಷಣದ ಭಾಷೆಯಾಗಿದೆ. ಬ್ರಿಟಿಷರ ಕಾಲದಲ್ಲೂ ಅದು ಮುಂದುವರಿಯಿತು. ಆದರೆ, ಬ್ರಿಟಿಷರು ಬಲವಂತವಾಗಿ ಹೇರಲಿಲ್ಲ. ಅವರು ರಚಿಸಿದ ಹಂಟರ್ ಸಮಿತಿ ಮುಂದೆ ಜ್ಯೋತಿಬಾ ಪುಲೆ ಅವರು ಆಂಗ್ಲ ಭಾಷೆ ಶಿಕ್ಷಣ ಅಗತ್ಯ ಕುರಿತು ಮನವರಿಕೆ ಮಾಡಿಕೊಟ್ಟರು. ಶೂದ್ರರ ಸ್ಥಿತಿಗತಿ, ಅವರಿಗೆ ಬೇಕಿರುವ ಶಿಕ್ಷಣ ಕುರಿತು ಆಡಳಿತಶಾಹಿ ಕಣ್ಣು ತೆರೆಸಿದರು. ಸಾವಿತ್ರಿಬಾಯಿ ಅವರ ಮೇಲೆ ಸಗಣಿ, ಮಣ್ಣು ಎರಚಿದರೂ ಅವರು ತಲೆಕೆಡಸಿಕೊಳ್ಳದೇ ಶೋಷಿತರಿಗೆ ಅಕ್ಷರ ಕಲಿಸಿದರು. ಕೆಳವರ್ಗದವರ ಉಳಿವಿಗೆ ಶಿಕ್ಷಣವೇ ಅಸ್ತ್ರ, ಇಂಗ್ಲಿಷ್‌ ತಾಯಿಯ ಬಾಗಿಲಲ್ಲಿ ಮನು ಸಾಯಬೇಕು ಎಂದು ಕವನಗಳ ಮೂಲಕ ಪ್ರತಿಪಾದಿಸಿದರು ಎಂದು ವಿಶ್ಲೇಷಿಸಿದರು.

ಯುನೆಸ್ಕೊ ವಿವಿಧ ದೇಶಗಳಲ್ಲಿ ನಡೆಸಿದ ಅಧ್ಯಯನ ವರದಿಗಳ ಪ್ರಕಾರ ಮಾತೃಬಾಷೆಯ ಶಿಕ್ಷಣದಿಂದ ಮಗುವಿನ ವಿಕಾಸ ಸಾಧ್ಯ. ಆ ಮೂಲಕ ಇತರೆ ಭಾಷೆ ಕಲಿಯಬಹುದು. ಮಾತೃಭಾಷೆ ಜತೆಗೆ ಆ ನೆಲದ ಸಂಸ್ಕೃತಿಯೂ ಉಳಿಯುತ್ತದೆ. ಮಾತೃಭಾಷೆಯಲ್ಲೇ ಶಿಕ್ಷಣ ಬೇಕು ಎನ್ನುವ ಎಲ್ಲರ ವಾದಒಪ್ಪಬಹುದಾದರೂ ರಾಜ್ಯದಲ್ಲೇ ಎಷ್ಟೊಂದು ಭಾಷೆಗಳಿವೆ. ಒಂದು ಶಾಲೆಯಲ್ಲಿ 50 ಭಾಷೆಯಲ್ಲೂ ಶಿಕ್ಷಣ ನೀಡಲು ಸಾಧ್ಯವೇ ಎಂದು ಪ್ರಶ್ನೆಯೂ ಎದುರಾಗುತ್ತದೆ. ಇಂಗ್ಲಿಷ್‌ ಇಂದು ಉದ್ಯೋಗದ, ಪ್ರತಿಷ್ಠೆಯ, ಅನ್ನದ ಭಾಷೆಯಾದ ಕಾರಣ ಎಲ್ಲರೂ ಬಯಸುತ್ತಿದ್ದಾರೆ ಎಂದು ವಿವರ ನೀಡಿದರು.

ಶಿಕ್ಷಣದಿಂದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹೋಗಲಾಡಿಸಲು ಸಾಧ್ಯವಾಗದಿದ್ದರೂ ಅಕ್ಷರ ಜ್ಞಾನ ಅವರಲ್ಲಿ ಅರಿವಿನ ಚಿಂತನೆ ಹೆಚ್ಚಿಸಿದೆ. ಉನ್ನತ ಸ್ಥಾನ ತಲುಪಲು ಮೆಟ್ಟಿಲಾಗಿದೆ. ಹಾಗಾಗಿಯೇ ಇಂದು ದಲಿತರು, ದಮನಿತರು ಇಂಗ್ಲಿಷ್‌ ಭಾಷೆಯತ್ತ ಒಲವು ತೋರುತ್ತಿದ್ದಾರೆ ಎಂದರು.

ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ , ಐದು ವರ್ಷಗಳಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ 1ರಿಂದ 7 ಕೋಟಿ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 1ರಿಂದ 3 ಕೋಟಿತಷ್ಟು ಇಳಿಕೆ ಕಂಡಿದೆ. ಖಾಸಗಿ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ನಾಶ ಮಾಡುತ್ತಿವೆ ಎಂದು ಆರೋಪಿಸಿದರು.

ಸಹ್ಯಾದ್ರಿ ಕಾಲೇಜು ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇಟಿ ಮಾತನಾಡಿ, ಶಿಕ್ಷಣ ದಾಸ್ಯದ ಬಿಡುಗಡೆಯ ದಾರಿ. ಶಿಕಷ್ಣ ಎಂದರೆ ಅಕ್ಷರ ಪರಿಚಯಿಸುವುದಲ್ಲ. ಶಿಕ್ಷಣದ ಹೆಸರಿನಲ್ಲಿ ಇಂದು ದೊಡ್ಡ ಕಂದಕ ನಿರ್ಮಿಸಲಾಗಿದೆ. ಮೇಲ್ವರ್ಗದವರಿಗೆ ಇಂಗ್ಲಿಷ್, ತಳ ಸಮುದಾಯಕ್ಕೆ ಮಾತೃಭಾಷೆ ಎಂಬ ಹುನ್ನಾರ ನಡೆಸಿದ್ದಾರೆ ಎಂದುಕಳವಳ ವ್ಯಕ್ತಪಡಿಸಿದರು.

ಪ್ರಾಧ್ಯಾಪಕಿ ಹಾಲಮ್ಮ, ಪ್ರೊ.ಚಂದ್ರಪ್ಪ, ಶಿವಬಸಪ್ಪ, ದಲಿತ ಸಂಘಟನೆಯ ಮುಖಂಡರಾದ ಎನ್‌.ಮಂಜುನಾಥ್, ಟಿ.ಎಚ್. ಹಾಲೇಶಪ್ಪ, ರುದ್ರಮ್ಮ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT