ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ಲೋಕಸಭಾ ಕ್ಷೇತ್ರದ 12 ಅಭ್ಯರ್ಥಿಗಳಲ್ಲಿ ಇಬ್ಬರ ಮಧ್ಯೆ ಗೆಲುವಿನ ಪೈಪೋಟಿ
Last Updated 22 ಮೇ 2019, 12:52 IST
ಅಕ್ಷರ ಗಾತ್ರ

ಶಿವಮೊಗ್ಗ:ಮತದಾನದ ನಂತರ ಒಂದು ತಿಂಗಳ ಕಾಯುವಿಕೆಗೆ ಗುರುವಾರ ಸಂಜೆ ವೇಳೆಗೆ ವಿರಾಮ ದೊರೆಯಲಿದ್ದು, ಕಣದಲ್ಲಿರುವ 12 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಅನಾವರಣಗೊಳ್ಳಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ 12 ಅಭ್ಯರ್ಥಿಗಳು ಕಣದಲ್ಲಿ ಇದ್ದರೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಸ್.ಮಧುಬಂಗಾರಪ್ಪ ಅವರ ಮಧ್ಯೆ ನೇರ ಪೂಪೋಟಿ ಕಂಡಿಬಂದಿತ್ತು. ಇಬ್ಬರ ಮಧ್ಯೆ ಹೆಚ್ಚುಕಡಿಮೆ ಸಮಬಲದ ಸ್ಪರ್ಧೆ ನಡೆದಿತ್ತು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ, ಬೈಂದೂರು ಹಾಗೂ ಶಿಕಾರಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಸಾಗರ, ಸೊರಬ, ಭದ್ರಾವತಿ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸುವ ಸೂಚನೆಗಳಿವೆ. ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಇಬ್ಬರಿಗೂ ಹೆಚ್ಚುಕಡಿಮೆ ಸಮ ಮತಗಳು ಬರುವ ಸಾಧ್ಯತೆ ಇದೆ. ಯಾರೇ ಗೆಲುವು ಸಾಧಿಸಿದರೂ ಕಡಿಮೆ ಮತಗಳ ಅಂತರದ ಗೆಲುವಾಗಿರುತ್ತದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ.

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಎರಡನೇ ಬಾರಿ ನಡೆದ ಸೆಣಸಾಟ ಕುತೂಹಲ ಕೆರಳಿಸಿತ್ತು. ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಇಬ್ಬರಲ್ಲಿ ಯಾರೇ ಗೆದ್ದರೂ ಇತಿಹಾಸವಾಗಲಿದೆ.2009ರಲ್ಲಿ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಘವೇಂದ್ರ ಬಂಗಾರಪ್ಪ ಅವರನ್ನೇ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಎರಡನೇ ಬಾರಿ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಅವರನ್ನು ಸೋಲಿಸಿದ್ದರು. ಈಗ ಗೆಲುವು ಅವರ ಪರವಾಗಿ ಬಂದರೆ ಮೂರನೆ ಬಾರಿ ಗೆದ್ದ ಕೀರ್ತಿ ಅವರದಾಗಲಿದೆ (ಹ್ಯಾಟ್ರಿಕ್‌ ಗೆಲುವು ಅಲ್ಲ). ಮಧು ಬಂಗಾರಪ್ಪ ಗೆದ್ದರೆ ಉಪ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಜತೆಗೆ, ಜಿಲ್ಲೆಯ ಎರಡು ಪ್ರತಿಷ್ಠಿತ ಕುಟುಂಬದ ದಶಕಗಳ ಹಗೆತನಕ್ಕೆ ಮತ್ತೊಂದು ಅಧ್ಯಾಯ ಸೇರಿದಂತಾಗುತ್ತದೆ.

ಈ ಬಾರಿ ಮೈತ್ರಿ ಪಕ್ಷಗಳ ಮುಖಂಡರು ಮಲೆನಾಡಿನ ಸ್ಥಳೀಯ ಸಮಸ್ಯೆಗಳನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಮತದಾರರನ್ನು ಸೆಳೆದಿದ್ದರು. ಸಿದ್ದರಾಮಯ್ಯ, ಕುಮಾರಸ್ವಾಮಿ ನೀಡಿದ ಕೊಡಗುಗೆಗಳನ್ನೂ ನೆನಪಿಸಿದ್ದರು. ಬಿಜೆಪಿ ಮೋದಿ ಅಲೆಯ ಜತೆಗೆ, ದೇಶದ ಭದ್ರತೆ, ಹಿಂದುತ್ವ, 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಆಧಾರದಲ್ಲಿ ಪ್ರಚಾರ ನಡೆಸಿತ್ತು. ಯಾವ ವಿಷಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಅವರ ಆಯ್ಕೆಗಳೇನು ಎನ್ನುವ ಅಂತರಾಳವೂ ಸಂಜೆಯ ವೇಳೆಗೆ ಬಹಿರಂಗವಾಗಲಿದೆ.

ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 4ರ ವೇಳಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತರಬೇತಿ ಪಡೆದ 500ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT