ಗುರುವಾರ , ಜೂನ್ 17, 2021
21 °C
ವಿಜಯಪುರ ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷರಿಂದ ಬ್ಲಾಕ್‌ಮೇಲ್‌; ಗೌರವ ಕಾರ್ಯದರ್ಶಿ ಆರೋಪ

ಕಸಾಪದಲ್ಲಿ ಎಲ್ಲವೂ ಸರಿಯಿಲ್ಲ; ಹುರಕಡ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಎಲ್ಲವೂ ಸರಿಯಿಲ್ಲ. ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷರು ಅವ್ಯವಹಾರ ಎಸಗಿದ್ದಾರೆ. ಇದನ್ನು ಪ್ರಶ್ನಿಸಿದರೇ; ಜಾತಿ ವಿಷಯವನ್ನೆತ್ತಿ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದು ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಸುವರ್ಣಾ ಹುರಕಡ್ಲಿ ಗಂಭೀರ ಆರೋಪ ಮಾಡಿದರು.

‘ಐದನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳ ಕುರಿತು ಪ್ರಶ್ನಿಸಿದ ನಂತರ, ನನ್ನನ್ನು ಎಲ್ಲರೂ ಗುರಿಯಾಗಿಸಿಕೊಂಡಿದ್ದಾರೆ. ನಾನು ಗೌರವ ಕಾರ್ಯದರ್ಶಿಯಾಗಿದ್ದರೂ; 6ನೇ ತಾಲ್ಲೂಕು ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿರಲಿಲ್ಲ. ಈ ಧೋರಣೆ ವಿರುದ್ಧ ಕಿಡಿಕಾರಿದ್ದಕ್ಕೆ ಎಚ್ಚೆತ್ತುಕೊಂಡ ಅಧ್ಯಕ್ಷರು, ಮತ್ತೆ ಎರಡು ಸಾವಿರ ಆಮಂತ್ರಣ ಪತ್ರಿಕೆ ಮುದ್ರಿಸಿ ನನ್ನ ಹೆಸರು ಹಾಕಿದ್ದಾರೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹುರಕಡ್ಲಿ ಆಮಂತ್ರಣ ಪತ್ರಿಕೆಗಳನ್ನು ಪ್ರದರ್ಶಿಸಿದರು.

‘ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರು ಮಾಡಿದ ಎಡವಟ್ಟಿನಿಂದ ಜಗಳವಾಗಿದೆ. ನಾನು ಯಾರ ಮನಸ್ಸಿಗೂ ನೋವುಂಟು ಮಾಡುವ ರೀತಿ ಮಾತನಾಡಿಲ್ಲ. ನಾನೂ ಒಬ್ಬ ಶಿಕ್ಷಕಿ, ನನಗೂ ಜವಾಬ್ದಾರಿಯಿದೆ. ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಲಕ್ಷ್ಮೀ ದೇಸಾಯಿ ಅವರು ನನ್ನ ವಿರುದ್ಧ ಅಸಂಬದ್ಧವಾಗಿ ಮಾತನಾಡಿದಕ್ಕೆ, ನಾನೂ ಸಿಟ್ಟಿನ ಭರದಲ್ಲಿ ಮಾತನಾಡಿದ್ದೇ. ಅದನ್ನೇ ದೊಡ್ಡದು ಮಾಡಿಕೊಂಡು ಪೊಲೀಸರಿಗೆ ಲಕ್ಷ್ಮೀ ದೂರು ನೀಡಿದ್ದರು.

ಪರಿಷತ್‌ನಲ್ಲಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಬಾರದು ಎನ್ನುವ ಏಕೈಕ ಉದ್ದೇಶದಿಂದ ಅವರಿಗೆ ಕ್ಷಮೆ ಕೋರಿದರೆ; ಅದಕ್ಕೆ ತೃಪ್ತರಾಗದ ಅವರು ಮಾಧ್ಯಮದವರ ಎದುರು ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದು ಏಳೆಂಟು ದಿನಗಳಿಂದ ಕಿರಿಕಿರಿ ನೀಡಿದ್ದರು. ಇದಕ್ಕೆ ಬೇಸತ್ತು ತಮ್ಮ (ಮಾಧ್ಯಮ) ಮುಂದೆ ಕ್ಷಮೆ ಕೋರುತ್ತೇನೆ’ ಎಂದು ಸುವರ್ಣಾ ಹುರಕಡ್ಲಿ ಗೋಷ್ಠಿಯಲ್ಲಿ ತಿಳಿಸಿದರು.

ಲಕ್ಷ್ಮೀ ದೇಸಾಯಿ ಮಾತನಾಡಿ ‘ಸುವರ್ಣಾ ಏಕವಚನ ಪದ ಪ್ರಯೋಗಿಸಿ ನಿಂದಿಸಿದ್ದರಿಂದ ಮನಸ್ಸಿಗೆ ನೋವಾಗಿದೆ. ಇದರಿಂದಾಗಿ ಮಾನಸಿಕವಾಗಿಯೂ ನೋವು ಅನುಭವಿಸಿದ್ದೇನೆ. ತಮಗೆ ಅನ್ಯಾಯವಾಗಿದ್ದರೆ ನನ್ನ ಮುಂದೆ ಹೇಳಬಹುದಿತ್ತು. ಅವರು ಏನೇ ಮಾತಾಡಿದರೂ ಒಂದೇ ಒಂದು ಮಾತು ಆಡಿಲ್ಲ. ಈಗ ನಾನು ಅವರ ವಿರುದ್ಧ ಅಶ್ಲೀಲ ಪದ ಪ್ರಯೋಗಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಒಪ್ಪಿಕೊಂಡಂತೆ ಮಾಧ್ಯಮವರ ಮುಂದೆ ಕ್ಷಮೆ ಕೋರಲು ತಿಳಿಸಿದ್ದೇನೆ’ ಎಂದು ಇದೇ ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.