ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಿ

ಭಾಲ್ಕಿ, ಬಸವಕಲ್ಯಾಣ, ಬೀದರ್‌ ಶಾಸಕರಾದ ಈಶ್ವರ ಖಂಡ್ರೆ, ರಹೀಂ ಖಾನ್, ನಾರಾಯಣರಾವ್‌ ಆಗ್ರಹ
Last Updated 10 ಜೂನ್ 2018, 12:33 IST
ಅಕ್ಷರ ಗಾತ್ರ

ಬೀದರ್‌: ‘ಎಲ್ಲ ಸಮುದಾಯದವರಿಗೆ ಪ್ರಾತಿನಿಧ್ಯ ಕಲ್ಪಿಸಲು ಬೀದರ್‌ ಜಿಲ್ಲೆಯ ಇನ್ನೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಜಿಲ್ಲೆಯ ಮೂವರು ಕಾಂಗ್ರೆಸ್‌ ಶಾಸಕರು ಶನಿವಾರ ಆಗ್ರಹಿಸಿದರು.

‘ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಮೂರು ಬಾರಿ ಗೆದ್ದಿರುವ ಶಾಸಕರಿಗೆ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೊಡಬೇಕು’ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಬೀದರ್‌ ಶಾಸಕ ರಹೀಂ ಖಾನ್‌ ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.

‘22 ತಿಂಗಳ ಅವಧಿಗೆ ಪೌರಾಡಳಿತ ಸಚಿವನಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಪೂರ್ಣಾವಧಿ ಸಚಿವನಾಗಲು ಅವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನಗೆ ಸಚಿವ ಸ್ಥಾನ ಕೊಡುವಂತೆ ಈಗಾಗಲೇ ನಾಲ್ವರು ಶಾಸಕರು ಪಕ್ಷದ ವರಿಷ್ಠರಿಗೆ ಲಿಖಿತ ಮನವಿ ಕೊಟ್ಟಿದ್ದಾರೆ’ ಎಂದು ಈಶ್ವರ ಖಂಡ್ರೆ ಹೇಳಿದರು.

‘ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧ. ಹಿಂದಿನ ಸರ್ಕಾರದ ಅವಧಿಯಲ್ಲಿನ ಯೋಜನೆಗಳನ್ನು ಪೂರ್ಣಗೊಳಿಸಲು ನನಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿದ್ದಾರೆ’ ಎಂದು ತಿಳಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಚುನಾವಣೆಯ ಮೇಲೆ ಪರಿಣಾಮ ಬೀರಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್‌ ಕಡಿಮೆ ಸ್ಥಾನಗಳನ್ನು ಪಡೆದಿದೆ ಎನ್ನುವುದು ಸರಿಯಲ್ಲ. ವಿಜಯಪುರ ಶಾಸಕ ಎಂ.ಬಿ.ಪಾಟೀಲ ಗುಂಪಿನಲ್ಲಿ ನಾನು ಇಲ್ಲ. ವಾಸ್ತವದಲ್ಲಿ ಪಕ್ಷದಲ್ಲಿ ಆ ಬಣ, ಈ ಬಣ ಎನ್ನುವುದೇ ಇಲ್ಲ’ ಎಂದು ಹೇಳಿದರು.

ನನಗೂ ಕೊಡಿ, ಅವರಿಗೂ ಕೊಡಿ: ‘ಬೀದರ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ನನಗೆ ಅಲ್ಪಸಂಖ್ಯಾತರ ಕೋಟಾದಲ್ಲಿ ಹಾಗೂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಈಶ್ವರ ಖಂಡ್ರೆ ಅವರಿಗೂ ಸಚಿವ ಸ್ಥಾನ ಕೊಡಬೇಕು’ ಎಂದು ರಹೀಂ ಖಾನ್‌ ಒತ್ತಾಯಿಸಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸಂಪುಟದಲ್ಲಿ ಇನ್ನೊಬ್ಬ ಅಲ್ಪಸಂಖ್ಯಾತ ಶಾಸಕರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಹೇಳಿದರು.

ಸರ್ಕಾರ ಉಳಿಯದು: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಯದು.  ಸಿದ್ದರಾಮಯ್ಯ ಮನಸ್ಸು ಮಾಡಿದರೆ ಸರ್ಕಾರ ಎರಡು ನಿಮಿಷವೂ ಉಳಿಯುವುದಿಲ್ಲ’ ಎಂದು ಶಾಸಕ ಬಿ. ನಾರಾಯಣರಾವ್ ಗುಡುಗಿದರು.

‘ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಕೊಡಲಾಗಿದೆ. ಯಾರಿಂದಲೂ ಸಿದ್ದರಾಮಯ್ಯ ಅವರ ಕೂದಲನ್ನೂ ಅಲುಗಾಡಿಸಲು ಸಾಧ್ಯವಾಗದು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ’ ಎಂದು ಟೀಕಿಸಿದರು.

‘ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ಕೊಡುವಂತೆ ನಾನು, ರಹೀಂ ಖಾನ್‌ ಹಾಗೂ ಚಿಂಚೋಳಿ ಶಾಸಕ ಉಮೇಶ ಜಾಧವ ಸಹಿ ಹಾಕಿದ ಮನವಿಪತ್ರವನ್ನು ಪಕ್ಷದ ವರಿಷ್ಠರಿಗೆ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

ಬೀದರ್ ಜಿಲ್ಲೆಯೊಂದಕ್ಕೇ ನಾಲ್ಕು ಸಚಿವ ಸ್ಥಾನ ಕೊಡಲು ಸಾಧ್ಯವೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಲ್ಲೆಯ ನಾಲ್ವರು ಸಚಿವರಾದರೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಸಂತಸವಾಗುವುದಿಲ್ಲವೆ? ಪಕ್ಷದ ವರಿಷ್ಠರು ಕೊಡಲಿ, ಬಿಡಲಿ ನಾವು ಸಚಿವ ಸ್ಥಾನವನ್ನು ಕೇಳಲಿದ್ದೇವೆ. ಸಚಿವ ಸ್ಥಾನ ದೊರಕದಿದ್ದರೆ ಪ್ರಮುಖರ ಸಭೆ ನಡೆಸಿ ಒತ್ತಡ ಹಾಕುತ್ತೇವೆ’ ಎಂದರು.

‘ಆತ್ಮಾವಲೋಕನ ಮಾಡಿಕೊಳ್ಳಲಿ’

ಬೀದರ್‌: ‘ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದಾಗಿ ಬೀದರ್‌ನಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ಆರಂಭವಾಗಿಲ್ಲ ಎಂದು ಸಂಸದ ಭಗವಂತ ಖೂಬಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಖಂಡನೀಯ. ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆದ್ದಿದೆ ಎನ್ನುವ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಈ ಬಾರಿ ಹೆಚ್ಚುವರಿಯಾಗಿ ಒಂದು ಸ್ಥಾನ ಪಡೆದಿದೆ. ಸಂಸದರಾಗಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ವಿಫಲರಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಟೀಕಿಸಿದರು.

‘ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಗೆ ಸೇರಿದ ಮೂರು ಎಕರೆ ಜಾಗ ಹಸ್ತಾಂತರ ಆಗಬೇಕಿದೆ. ಕಾನೂನು ತೊಡಕು ಇರುವ ಕಾರಣ ವಿಳಂಬವಾಗಿದೆ’ ಎಂದು ಸಮಜಾಯಿಸಿ ನೀಡಿದರು.

‘2016ರ ಜೂನ್‌ 19 ರಂದು ಪೌರಾಡಳಿತ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೆ. 22 ತಿಂಗಳ ಅವಧಿಯಲ್ಲಿ ₹ 390 ಕೋಟಿ ವೆಚ್ಚದಲ್ಲಿ 100 ಕಿ.ಮೀ ಉದ್ದದ ಕಾರಂಜಾ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಿಸಲಾಗಿದೆ. ಮಂಜರಾ ನದಿಯಿಂದ ಜಲಾಶಯಕ್ಕೆ ನೀರು ಹಾಗೂ ಬಸವಕಲ್ಯಾಣದ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

‘ಕಾರಂಜಾ ಯೋಜನೆ ಅಡಿ 23 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದೆ. ಬೀದರ್‌ ನಗರದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿಗಳು ನಡೆದಿವೆ. ಈ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತೆ ಸಚಿವ ಸ್ಥಾನ ಕೊಡಬೇಕು’ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಹಾಗೂ ಬೀದರ್‌ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ಕೊಡಬೇಕು.
- ಬಿ.ನಾರಾಯಣರಾವ್, ಬಸವಕಲ್ಯಾಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT