3 ತಿಂಗಳಲ್ಲೇ ಸಮ್ಮಿಶ್ರ ಸರ್ಕಾರ ಪತನ; ಯತ್ನಾಳ

7
ನಾವು ಮಾತನಾಡಿದರೆ ವಿವಾದಾತ್ಮಕ ಹೇಳಿಕೆ; ಬುದ್ಧಿಜೀವಿಗಳು ಮಾತನಾಡಿದರೆ ಆಳವಾದ ಅಧ್ಯಯನವಾ..?

3 ತಿಂಗಳಲ್ಲೇ ಸಮ್ಮಿಶ್ರ ಸರ್ಕಾರ ಪತನ; ಯತ್ನಾಳ

Published:
Updated:

ವಿಜಯಪುರ: ‘ಮೂರು ತಿಂಗಳೊಳಗಾಗಿ ಕಾಂಗ್ರೆಸ್–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡುವ ಜತೆಗೆ, ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ. ಸ್ವಾಭಿಮಾನಿ ಸಿದ್ದರಾಮಯ್ಯ ಇದನ್ನು ಸಹಿಸಲ್ಲ. ಅಪ್ಪ–ಮಕ್ಕಳ ವಿರುದ್ಧ ಬಂಡೆದ್ದು, ಸರ್ಕಾರ ಬೀಳಿಸಲಿದ್ದಾರೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ವೀರಶೈವ ಲಿಂಗಾಯತ ನಾವೆಲ್ಲಾ ಒಂದು. ಎಂದೆಂದೂ ಹಿಂದೂ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದು ಶತಸಿದ್ಧ. ಪೂರ್ಣಾವಧಿ ಅವರೇ ಸಿಎಂ. ಇದರಲ್ಲಿ ಮತ್ತೆ ನೀವು ಇನ್ನೇನೋ ಸೃಷ್ಟಿಸಲು ಮುಂದಾಗಬೇಡಿ’ ಎಂದು ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರ ಕಾಲೆಳೆದರು.

ಬಾಯಿಗೆ ಬೀಗ ಹಾಕ್ರೀ: ‘ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗವಾಗಿಯೇ ಉತ್ತರ ಕರ್ನಾಟಕದವರನ್ನು ಟೀಕಿಸಿದ್ದಾರೆ. ಜಿಲ್ಲೆಯ ಜನರು ಜೆಡಿಎಸ್‌ಗೆ ಮತ ಹಾಕದಿದ್ದರೇ ಇಬ್ಬರು ಶಾಸಕರು ಹೇಗೆ ಆಯ್ಕೆಯಾಗುತ್ತಿದ್ದರು’ ಎಂದು ಯತ್ನಾಳ ಇದೇ ಸಂದರ್ಭ ಪ್ರಶ್ನಿಸಿದರು.

‘ಜಿಲ್ಲೆಯ ಇಬ್ಬರು ಜೆಡಿಎಸ್‌ ಶಾಸಕರಿಗೆ ನಾ ಕೇಳ್ತ್ವೀನಿ. ಖುರ್ಚಿ ಆಸೆಗಾಗಿ ಬಾಯಿ ಮುಚ್ಚಿಕೊಂಡು ಕೂರಬ್ಯಾಡ್ರೀ. ಅಪಮಾನ ಸಹಿಸಲಾಗದು. ನಿಮ್ಮ ನಾಯಕರ ಬಾಯಿಗೆ ಬೀಗ ಹಾಕದಿದ್ದರೇ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜೆಡಿಎಸ್‌ ಸಂಪೂರ್ಣ ನೆಲಕಚ್ಚಲಿದೆ’ ಎಂದು ಬಸನಗೌಡ ಹೇಳಿದರು.

ಚಿಲ್ಲರೆ ಮನುಷ್ಯ: ‘ರೋಡ್‌ ಚಾಪ್‌ಗಳಿಗೆ ಬುದ್ಧಿಜೀವಿಗಳು ಎಂಬ ಹಣೆಪಟ್ಟಿ ಕಟ್ಟಿ ಮಾಧ್ಯಮಗಳು ವಿಜೃಂಭಿಸುತ್ತಿರುವುದಕ್ಕೆ, ನಮ್ಮ ಹಣೆ ಚಚ್ಚಿಕೊಳ್ಳಬೇಕಿದೆ’ ಎಂದು ಶಾಸಕ ಬಸನಗೌಡ, ಚಿಂತಕ ಭಗವಾನ್‌ ಬಸವೇಶ್ವರರ ಬಗ್ಗೆ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

‘ಕೆ.ಎಸ್‌.ಭಗವಾನ್‌ ಎಂಥ ಚಿಲ್ಲರೆ ಮನುಷ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆತನ ಬಗ್ಗೆ ಮಾತನಾಡುವುದೇ ಅಪಮಾನ. ಇನ್ನೂ ನೀವು ಅವರನ್ನು ಸಂಜಿ ತನ್ಕ ಸ್ಟುಡಿಯೋದಲ್ಲಿ ಕೂರಿಸಿ ಒದರೋದನ್ನು ಬಂದ್‌ ಮಾಡ್ರೀ. ಆ ನಂತರ ಅವರನ್ನು ಯಾವ ಬೀದಿ ನಾಯಿನೂ ಕೇಳಲ್ಲಾ’ ಎಂದು ಹರಿಹಾಯ್ದರು.

‘ಬುದ್ಧಿಜೀವಿ ಎಂದು ಹೇಳಿಕೊಳ್ಳೋರಿಗೆ ಯಾಕೆ ರಕ್ಷಣೆ ಕೊಡಬೇಕು. ದೇಶ, ಧರ್ಮದ ಬಗ್ಗೆ ಅವರು ಹೀನಾಯವಾಗಿ ಮಾತನಾಡುವುದನ್ನು ನಿಲ್ಲಿಸಿದರೇ ಯಾವ ಸಮಸ್ಯೆಯೂ ಉದ್ಭವಿಸಲ್ಲ. ಅವರು ಮಾತನಾಡಿದರೆ ಆಳವಾದ ಅಧ್ಯಯನ, ಚಿಂತನೆ. ದೇಶ ಪ್ರೇಮದ ಬಗ್ಗೆ ನಾವು ಏನಾದ್ರೂ ಹೇಳಿದ್ರೇ ಮಾತ್ರ ವಿವಾದಾತ್ಮಕ ಹೇಳಿಕೆಯಾ ?. ಮೊದಲು ಲಫಂಗರ ಹೇಳಿಕೆ ಪಡೆಯೋದನ್ನು ನಿಲ್ಲಿಸಿ’ ಎಂದು ಯತ್ನಾಳ ಮಾಧ್ಯಮದವರಿಗೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !