ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಎಳೆಯರಿಗೆ ಮಾದರಿ ಕೃಷಿಕ ಕುಶಾಲಯ್ಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಕೃಷಿ ನಡೆಸುತ್ತಿರುವ ರೈತ
Last Updated 3 ಜೂನ್ 2022, 4:44 IST
ಅಕ್ಷರ ಗಾತ್ರ

ನರಗುಂದ: ಕೃಷಿಯು ಖರ್ಚಿನ ಮೂಲವಾಗುತ್ತಿರುವುದರಿಂದ ಹೆಚ್ಚಿನ ರೈತರು ದೂರ ಸರಿಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ವೈರುಧ್ಯವೆಂಬಂತೆ ತಾಲ್ಲೂಕಿನ ಹದಲಿ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವ ಕುಶಾಲಯ್ಯ ಜವಳಿಮಠ ಇಳಿ ವಯಸ್ಸಿನಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಕೈಗೊಳ್ಳುವುದರ ಮೂಲಕ ಇಂದಿನ ರೈತರಿಗೆ ಮಾದರಿಯಾಗಿದ್ದಾರೆ. ಬಯಲು ಸೀಮೆಯಲ್ಲಿ ನಿತ್ಯ ಹಸಿರು ಕಾಣುವ ಮೂಲಕ ಮಲೆನಾಡ ವಾತಾವರಣ ಸೃಷ್ಟಿಸಿದ್ದಾರೆ.

68 ವಯ್ಯಸ್ಸಿನ ಕುಶಾಲಯ್ಯ ಬಿಎಸ್ಸಿ ಪದವಿಧರರಾಗಿದ್ದು, ತಾವು ಪಡೆದ ಶಿಕ್ಷಣದ ಕಾಲದಲ್ಲಿ ಸರ್ಕಾರಿ ನೌಕರಿ ಸಿಗುವಂತಿದ್ದರೂ ಅದರ ಬಗ್ಗೆ ಯೋಚಿಸದೇ ಸಂಪೂರ್ಣ ಕೃಷಿಯಲ್ಲಿ ತೊಡಗಿರುವುದು ವಿಶೇಷ. ಕಳೆದ ಎರಡು ವರ್ಷದ ಹಿಂದೆ ನೀರಾವರಿ ಸೌಲಭ್ಯ ಪಡೆದು ಸಮಗ್ರ ಕೃಷಿ ಕೈಗೊಂಡಿದ್ದು ನಾಲ್ಕು ಎಕರೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ. ಇದರಲ್ಲಿ 600 ಪೇರಲ, (200 ಸಂಪೂರ್ಣ ಗುಲಾಬಿ ಬಣ್ಣದ ಫಲ), 60 ಹುಣಸೆ, 200 ತೆಂಗು, 1000 ಮಹಾಗನಿ, 25 ಚಿಕ್ಕು, 20 ಮಾವು, 300 ನುಗ್ಗೆ, 30 ನಿಂಬೆ, 50 ಕರಬೇವು, 50 ನೀರಲ, 50 ಸೀತಾಫಲ, 10 ಉತ್ತತ್ತಿ ಬಾರಿ, 10 ಬಿದಿರು ಗಿಡಗಳು ಸೇರಿದಂತೆ ಸುಮಾರು 2,500 ವಿವಿಧ ಸಸಿಗಳಿದ್ದು ಹೆಮ್ಮರವಾಗಲು ತುದಿಗಾಲಲ್ಲಿ ನಿಂತಿವೆ. ಕೆಲವೇ ದಿನಗಳಲ್ಲಿ ಫಲ ನೀಡುವ ಮೂಲಕ ಲಕ್ಷಾಂತರ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.

ಅಂತರ ಬೇಸಾಯ: ಸಹಸ್ರಾರು ಗಿಡಗಳ ನಡುವೆ ಅಂತರ ಬೇಸಾಯ ಕೈಗೊಂಡಿರುವ ರೈತ ಜವಳಿಮಠ ಈರುಳ್ಳಿ, ಗೋಧಿ, ಕಡಲೆ, ಶೇಂಗಾ, ಮೆಣಸಿನಕಾಯಿ ಬೆಳೆದು ಇವುಗಳ ಮೂಲಕವು ಲಾಭ ಪಡೆಯುತ್ತಿದ್ದಾರೆ.

ಆಧುನಿಕ ತಂತ್ರಜ್ಞಾನ: ಬೆಣ್ಣೆಹಳ್ಳದ ಮೂಲಕ ಪಂಪಸೆಟ್ ಅಳವಡಿಸಿದ್ದ, ಜತೆಗೆ ಕೃಷಿ ಹೊಂಡ ತೆಗೆದು ನೀರಾವರಿ ಮೂಲಕ ಕೃಷಿ ಮಾಡುತ್ತಿದ್ದಾರೆ. ಇದರ ಮೂಲಕ ಹನಿ ನೀರಾವರಿ, ತುಂತುರು ನೀರಾವರಿ ಮೂಲಕ ಸಮಗ್ರ ಕೃಷಿ ಕೈಗೊಂಡಿದ್ದಾರೆ. ಎತ್ತು ಚಕ್ಕಡಿಗಳನ್ನು ಹೊಂದದ ಇವರು ಟ್ರಾಕ್ಟರ್ ಮೂಲಕ ಇಡಿ ಕೃಷಿಯತ್ತ ಪಯಣ ಸಾಗಿದೆ. ಎಡೆ ಹೊಡೆಯಲು ಸಹಿತ ಯಂತ್ರ ಅಳವಡಿಸಿರುವ ಕುಶಾಲಯ್ಯ ಸಾವಯವ ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆದಿದ್ದಾರೆ. ಸಮಗ್ರ ಕೃಷಿಯ ಆರಂಭದ ಹಂತದಲ್ಲಿರುವ ಇವರು ಪೇರಲ, ನುಗ್ಗೆ ಹಾಗೂ ಅಂತರ ಬೇಸಾಯದ ವಿವಿಧ ಬೆಳೆಗಳಿಂದ ₹4 ಲಕ್ಷ ಆದಾಯ ಗಳಿಸಿದ್ದಾರೆ.

ಮಾದರಿ: ಇಳಿ ವಯ್ಯಸ್ಸಿನಲ್ಲೂ ನಿತ್ಯ 8 ಗಂಟೆ ಹೊಲದಲ್ಲಿ ಕೆಲಸ ಮಾಡುವ ಇವರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಲಹೆ ಪಡೆದು ಭವಿಷ್ಯಕ್ಕಾಗಿ ಗಿಡ ನೆಟ್ಟಿದ್ದು ಇವರ ಕೃಷಿ ಯುವಕರಿಗೆ ಮಾದರಿಯಾಗಿದೆ.

ಶ್ರೇಷ್ಠ ಕೃಷಿಕ ಪ್ರಶಸ್ತಿ: ಕೃಷಿ ಇಲಾಖೆಯಿಂದ ನರಗುಂದ ತಾಲ್ಲೂಕು ಮಟ್ಟದ 2021ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿರುವ ಇವರು ಉತ್ಸಾಹಿ ರೈತರಾಗಿದ್ದಾರೆ.

ಕೃಷಿಯಿಂದ ಸಾಕಷ್ಟು ಆದಾಯ ಸಾಧ್ಯವಿದೆ. ಆದರೆ ಆಳಾಗಿ ದುಡಿದಾಗ ಅದರ ಸಾರ್ಥಕತೆ ಬರುತ್ತದೆ. ನನಗೆ ನಿತ್ಯ ಕೆಲಸ ಮಾಡಿದಾಗಲೇ ಖುಷಿ. ಯುವಕರು ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಯತ್ತ ಒಲವು ತೋರಿಸಬೇಕು ಕುಶಾಲಯ್ಯ ಜವಳಿಮಠ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT