ಸಂಬಂಧಗಳ ಬೆಸೆಯುವತ್ತ ‘ಅವ್ವ’ನ ಹೆಜ್ಜೆ

ಗದಗ: ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ಅವರ ತಾಯಿಯ ನೆನಪಿನ ಜತೆಗೆ ನಾಡಿನ ಎಲ್ಲ ತಾಯಂದಿರನ್ನು ಸ್ಮರಿಸುವ ಉದ್ದೇಶದೊಂದಿಗೆ 2011ರಲ್ಲಿ ಸ್ಥಾಪನೆಗೊಂಡ ಅವ್ವ ಸೇವಾ ಟ್ರಸ್ಟ್, ಹಲವು ಹೃದಯಸ್ಪರ್ಶಿ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ತಂದೆ ತಾಯಿ ಬಗ್ಗೆ ಪ್ರೀತಿಯ ಭಾವ ಮೂಡಿಸುತ್ತಿದೆ. ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ.
‘ಆಧುನೀಕತೆ ಹೆಸರಿನಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣದಿಂದ ಕೌಟುಂಬಿಕ ವ್ಯವಸ್ಥೆಯಲ್ಲಿ ಆಗಿರುವ ಪಲ್ಲಟಗಳನ್ನು ಮರು ಜೋಡಿಸುವ ಉದ್ದೇಶದೊಂದಿಗೆ ಅವ್ವ ಸೇವಾ ಟ್ರಸ್ಟ್ ವರ್ಷಕ್ಕೊಂದು ಭಾವನಾತ್ಮಕ ಕಾರ್ಯಕ್ರಮ ಆಯೋಜಿಸುತ್ತಿದೆ. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಆಗಬೇಕು ಎಂಬುದು ಟ್ರಸ್ಟ್‌ನ ಸಂಕಲ್ಪ. ಈ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮಗಳಿಂದ ಅನೇಕರ ಮನಃಪರಿವರ್ತನೆಯಾಗಿದೆ. ತಂದೆ ತಾಯಿ ಬಗ್ಗೆ ಒಲವು ಮೂಡಿಸಿಕೊಂಡ ಮಕ್ಕಳು ಅವರಿಗೆ ಪ್ರೀತಿ ಹಂಚುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಉದ್ದೇಶ ಸಾಫಲ್ಯವಾಗಿದೆ. ತಂದೆ ತಾಯಿಗಳನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ ಎಂಬುದು ಟ್ರಸ್ಟ್‌ನ ಕಳಕಳಿಯಾಗಿದೆ’ ಎನ್ನುತ್ತಾರೆ ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ.ಬಸವರಾಜ ಧಾರವಾಡ.
‘ಕೂಡು ಕುಟುಂಬಗಳ ಸೌಂದರ್ಯವೇ ಬೇರೆ. ಮನೆಯಲ್ಲಿರುವ ಅವ್ವ, ಅಜ್ಜ, ಅಪ್ಪ– ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಒಬ್ಬರಿಗೊಬ್ಬರು ಸ್ಪಂದಿಸುತ್ತಾರೆ. ನೋವು ನಲಿವಿನಲ್ಲಿ ಆಸರೆ ಆಗುತ್ತಾರೆ. ಒಟ್ಟಾಗಿದ್ದಾಗ ಮನೆಯಲ್ಲಿ ನಗುವಿನ ಚಿಲುಮೆ ಇರುತ್ತದೆ. ಕೂಡು ಕುಟುಂಬಗಳ ಈ ಸವಿಯನ್ನು ಪ್ರತಿಯೊಬ್ಬರೂ ಅನುಭವಿಸುವಂತೆ ಯುವಜನತೆಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು.
‘ಡಿ.6 ಹೊರಟ್ಟಿ ಅವರ ತಾಯಿಯ ಪುಣ್ಯತಿಥಿ. ಆ ದಿನ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಹೊರಟ್ಟಿ ಅವರ ತಾಯಿ ನೆಪದಲ್ಲಿ ನಾಡಿನ ಎಲ್ಲ ತಾಯಂದಿರನ್ನೂ ಸ್ಮರಿಸಲಾಗುತ್ತಿದೆ. ಕಳೆದ ವರ್ಷ 83 ಮಂದಿ ತಾಯಂದಿರನ್ನು ಗೌರವಿಸಲಾಗಿದೆ. ಇಳಕಲ್ ಸೀರೆ, ಧಾರವಾಡ ಪೇಢಾ ನೀಡಿ, ಮಕ್ಕಳ ಜತೆಗೆ ಹರಟುವ ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಅವರು ತಿಳಿಸಿದರು.
ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಪ್ರೇರಣೆಯಿಂದ ಆರಂಭಗೊಂಡ ಅವ್ವ ಸೇವಾ ಟ್ರಸ್ಟ್‌ನ ಚಟುವಟಿಕೆಗಳು ರಾಜಕೀಯದಿಂದ ದೂರ ಇವೆ. ದಲಿತರು, ಅಂಗವಿಕಲರು, ಪ್ರತಿಭಾವಂತ ವಿದ್ಯಾರ್ಥಿಗಳು, ಅಸಹಾಯಕರಿಗೆ ಕೈಲಾದ ಸಹಾಯ ಮಾಡುವುದು ಟ್ರಸ್ಟ್‌ನ ಮೂಲ ಉದ್ದೇಶವಾಗಿದೆ. ಇಲ್ಲೀವರೆಗೆ ನೂರಾರು ಬಡ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಟ್ರಸ್ಟ್ ಭರಿಸಿದೆ. ಅಂಗವಿಕಲ ಮಕ್ಕಳಿಗೆ ಟ್ರೈಸಿಕಲ್, ಕ್ರೀಡಾ ಪ್ರತಿಭೆಗಳಿಗೂ ಸಹಾಯ ಮಾಡುವ ಮೂಲಕ ಟ್ರಸ್ಟ್ ತನ್ನ ಸೇವಾ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.
ಶಿವಾನುಭವದಲ್ಲಿ...
ಗದಗ ನಗರದ ತೋಂಟದಾರ್ಯ ಮಠದಲ್ಲಿ ಡಿ.5ರಂದು ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ವಿಶೇಷ ಶಿವಾನುಭವ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ 12 ಮಂದಿ ಶಿಕ್ಷಕಿಯರ ತಾಯಂದಿರನ್ನು ಸನ್ಮಾನಿಸಲಾಗುವುದು. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಮಠದಲ್ಲಿರುವ ಸೇವಾಕಾರ್ಯಕರ್ತರಿಗೆ ಬಟ್ಟೆ ವಿತರಣೆ ಮಾಡಲಾಗುತ್ತಿದೆ. ಜತೆಗೆ ಸಾಂಸ್ಕೃತಿಕ ಚಿಂತಕಿ ಸವಿತಾ ಅಮರಶೆಟ್ಟಿ ‘ಅವ್ವ‘ನ ಕುರಿತು ಮಾತನಾಡಲಿದ್ದಾರೆ.
ಅವ್ವ ಸೇವಾ ಟ್ರಸ್ಟ್‌ನ ಬಸವರಾಜ ಹೊರಟ್ಟಿ, ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಉಪಸ್ಥಿತರಿರುವರು.
ನಾನು ಇಂದು ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ಹಿಂದಿರುವ ಶಕ್ತಿಯೇ ನನ್ನ ಅವ್ವ. ಅವಳ ತ್ಯಾಗ, ಪ್ರೀತಿ ಹೆಚ್ಚಿನದು. ನನಗಾಗಿ ದುಡಿದ ನನ್ನವ್ವನನ್ನು ಹೇಗೆ ಮರೆಯಲು ಸಾಧ್ಯ
- ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ
ರಾಜಕೀಯ ಸೋಂಕಿಲ್ಲದ ಕಾರ್ಯಕ್ರಮಗಳ ಮೂಲಕ ತಾಯಿಯ ನೆನಪು ಚಿರಸ್ಥಾಯಿಗೊಳಿಸಬೇಕು ಎಂಬುದು ಅವ್ವ ಸೇವಾ ಟ್ರಸ್ಟ್‌ನ ಸಂಕಲ್ಪ. ಈ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ
-ಡಾ.ಬಸವರಾಜ ಧಾರವಾಡ, ಅವ್ವ ಸೇವಾ ಟ್ರಸ್ಟ್ ಸಂಚಾಲಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.