ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಮೂಡಿಸುವ ಬಸವ ಪುರಾಣ

ಮಣಕವಾಡದ ಶ್ರೀಗಳಿಂದ ಡಿ.20 ರಿಂದ ಜ.21ರವರೆಗೆ ಪ್ರವಚನ– ತೋಂಟದ ಶ್ರೀ
Last Updated 5 ಡಿಸೆಂಬರ್ 2022, 10:39 IST
ಅಕ್ಷರ ಗಾತ್ರ

ಗದಗ: ‘ದಾಸೋಹ, ಕಾಯಕ, ಸಮಾನತೆಯೇ ಬಸವ ಪುರಾಣ. ಈ ಪುರಾಣ ಪ್ರವಚನದ ಮೂಲಕ ಹೃದಯಗಳ ಬೆಸುಗೆ ಆಗುವುದಲ್ಲದೇ ಪರಸ್ಪರರಲ್ಲಿ ಶಾಂತಿ, ಸೌಹಾರ್ದ ಮೂಡುತ್ತದೆ’ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಶಾಖಾ ಮಠವಾದ ಆನಂದಾಶ್ರಮದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವ ಸೇವೆಯನ್ನು ಮಾಡುವವರ ಸಂಕಲ್ಪಗಳು ಬಹುಬೇಗನೇ ಈಡೇರುತ್ತವೆ. ಹೀಗಾಗಿ 33 ದಿನಗಳಕಾಲ ಭಕ್ತರು ಬಸವ ಪುರಾಣ ಆಲಿಸುವುದರ ಜತೆಗೆ ಬಸವ ಪ್ರಸಾದ ಸೇವಿಸಬೇಕು’ ಎಂದು ಹೇಳಿದರು.

‘ಡಿ.20 ರಿಂದ ಜ.21ರವರೆಗೆ ಬಸವ ಪುರಾಣ ನಡೆಯಲಿದೆ. 33 ದಿನಗಳ ಕಾಲ ನಡೆಯುವ ಬಸವ ಪುರಾಣವನ್ನು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪ್ರವಚನ ಮಾಡುವರು. ಬಸವ ಪುರಾಣದ ಸಿದ್ಧತೆ ಪರಿಶೀಲಿಸಲು ಆಶ್ರಮದಲ್ಲಿ ಒಂದು ಕಾರ್ಯಾಲಯ ಆರಂಭವಾಗಲಿದೆ. ಭಕ್ತರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ, ಜವಾಬ್ದಾರಿ ನಿಭಾಯಿಸಬೇಕು’ ಎಂದು ಸೂಚಿಸಿದರು.

ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಹಾಲಕೆರೆ ಮಠದ ಹಿಂದಿನ ಬೆತ್ತದ ಅಜ್ಜನವರು 1947ರಲ್ಲಿ ಗದುಗಿನಲ್ಲಿ ‘ಜ್ಞಾನ ದಾಸೋಹ’ ಮಾಡಿದ್ದರು. ಅದಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಈ ಬಸವ ಪುರಾಣ ನಡೆಯುತ್ತಿದೆ. ಸರ್ಕಾರದ ಸೌಲಭ್ಯಕ್ಕೆ ಜಾತಿ ಸಂಘಟನೆ ಮಾಡಿಕೊಳ್ಳಲಿ. ಆದರೆ, ಕೂಡಿ ಬದುಕಲು ಅದು ಅಡ್ಡಿಯಾಗದಿರಲಿ ಎಂಬುದು ಈ ಬಸವ ಪುರಾಣದ ಉದ್ದೇಶವಾಗಿದೆ’ ಎಂದರು.

‘ಲಿಂ.ಹಾಲಕೆರೆ ಅಭಿನವ ಅನ್ನದಾನ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ 12 ಬಸವ ಪುರಾಣ ಮಾಡುವ ಸಂಕಲ್ಪ ಮಾಡಿದ್ದರು. ಈಗಾಗಲೇ ಆಂಧ್ರದ ಶ್ರೀಶೈಲ ಸೇರಿ 11 ಸ್ಥಳಗಳಲ್ಲಿ ಮಾಡಿದ್ದಾರೆ. ಇದೀಗ ಅವರ ಸಂಕಲ್ಪದಂತೆ 12ನೇ ಬಸವ ಪುರಾಣ ಗದಗನಲ್ಲಿ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ, ಮಣಕವಾಡದ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಓಂಕಾರೇಶ್ವರ ಮಠದ ಪಕ್ಕೀರೇಶ್ವರ ಸ್ವಾಮೀಜಿ, ಅಡವೀಂದ್ರಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ, ಶಿವಾನುಭವ ಸಮಿತಿ ಅಧ್ಯಕ್ಷ ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ ವೇದಿಕೆಯಲ್ಲಿದ್ದರು.

ಶಿವಾನುಭವ ಸಮಿತಿ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ವನಮಾಲಾ ಮಾನಶೆಟ್ಟಿ ಪ್ರಾರ್ಥಿಸಿದರು. ಎಂ.ವಿ. ಕುಂದ್ರಾಳಹಿರೇಮಠ ನಿರೂಪಿಸಿದರು. ಡಾ.ಕಲ್ಲಯ್ಯ ಹಿರೇಮಠ ವಂದಿಸಿದರು.

ಸಭೆಯಲ್ಲಿ ಚನ್ನಯ್ಯ ಹಿರೇಮಠ, ಸಾಲಿಮಠ, ನಿವೃತ್ತ ಶಿಕ್ಷಕ ಕಮತರ ಸೇರಿ ಹಾಲಕೆರೆ ವಿವಿಧ ಶಾಖಾಮಠದ ಭಕ್ತರು ಭಾಗವಹಿಸಿದ್ದರು.

ಸಮಿತಿ ರಚನೆ

ಬಸವ ಪುರಾಣ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಎಲ್ಲ ಸಮಿತಿಗೆ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಮಹಾಪೋಷಕರು. ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಗೌರವ ಅಧ್ಯಕ್ಷರು, ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷರಾಗಿರುತ್ತಾರೆ.

ಉಳಿದಂತೆ ವಿವಿಧ ಸಮಿತಿಗಳನ್ನು ಪ್ರಮುಖರನ್ನು ನೇಮಿಸಿ, ಅವರಿಗೆ ಜವಾಬ್ದಾರಿ ನೀಡಬೇಕು. ಅಲ್ಲದೇ, ಬಸವ ಪುರಾಣ ಆಲಿಸಲು ಬರುವ ದೂರದ ವಾರ್ಡ್‍ಗಳ ಭಕ್ತರಿಗೆ ವಾಹನ ಸೌಲಭ್ಯ, ಬಸವ ಪ್ರಸಾದ ವ್ಯವಸ್ಥೆ, ಸಂಜೆ 6.30 ರಿಂದ 7.30 ರವೆರೆಗ ಪುರಾಣ ಮಾಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಚಂದ್ರು ಬಾಳಿಹಳ್ಳಿಮಠ, ಮಂಜುನಾಥ ಬೇಲೇರಿ, ವಿ.ಕೆ. ಗುರುಮಠ, ಕೆ.ಬಿ. ಸಂತೋಜಿ, ಯೂ.,ಆರ್. ಭೂಸನೂರಮಠ, ಡಾ.ಉಮೇಶ ಪುರದ, ಮಾರ್ತಾಂಡಪ್ಪ ಹಾದಿಮನಿ, ನಗರಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಸೇರಿ ಹಲವರು ವಿವಿಧ ಸಲಹೆ ನೀಡಿದರು.

ವಾರ್ಡ್‍ಗಳಲ್ಲಿ ಶರಣರ ಪಾದಯಾತ್ರೆ

ಈ ನಾಡಿಗೆ ‘ಸ್ವಚ್ಛ ಭಾರತ’ ಕಲ್ಪನೆಯನ್ನು 12ನೇ ಶತಮಾನದಲ್ಲೇ ಶರಣರು ನೀಡಿದ್ದಾರೆ. 33 ದಿನಗಳ ಕಾಲ ನಡೆಯುವ ಬಸವ ಪುರಾಣದ ಪ್ರತಿ ದಿನ ಬೆಳಿಗ್ಗೆ ಅವಳಿ ನಗರದ ಒಂದೊಂದು ವಾರ್ಡ್‌ನಲ್ಲಿ ಶರಣರು ಪಾದಯಾತ್ರೆ ನಡೆಸಿ, ಸಮಾನತೆ, ಬಸವ ತತ್ವದ ಜಾಗೃತಿಗೆ ಸಲಹೆ ನೀಡಿದರು.

ಈ ವೇಳೆ ಶರಣರು ಸಾಗುವ ದಾರಿಗಳಲ್ಲಿ ಮಹಿಳೆಯರು ರಂಗೋಲಿ, ಹೂ ಹಾಕಿ ಅಲಂಕರಿಸಬೇಕು ಎಂದು ಭಕ್ತರು ಸಲಹೆ ನೀಡಿದರು.

ವಾರ್ಡ್‍ಗಳಲ್ಲಿ ಶರಣ ಸಂಚಾರ ಯಶಸ್ಸಿಗೆ ವಾರ್ಡ್‍ವಾರು ಉಪಸಮಿತಿ ರಚಿಸಲು ಶಿವಲಿಂಗಶಾಸ್ತ್ರಿ ಹಿರೇಮಠ ಸಿದ್ದಾಪೂರ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT