ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂಕದಕಟ್ಟಿ ಮೃಗಾಲಯ: ನೈಟ್‌ ಸಫಾರಿ ಆರಂಭಕ್ಕೆ ಸಂಪೂರ್ಣ ಸಹಕಾರ

ಬಿಂಕದಕಟ್ಟಿ ಮೃಗಾಲಯದಲ್ಲಿನ ಪ್ರಾಣಿ ಮನೆ, ಆವರಣ ಉದ್ಘಾಟಿಸಿ ಸಚಿವ ಭರವಸೆ
Published 13 ಮಾರ್ಚ್ 2024, 15:19 IST
Last Updated 13 ಮಾರ್ಚ್ 2024, 15:19 IST
ಅಕ್ಷರ ಗಾತ್ರ

ಗದಗ: ‘ನೈಟ್‌ ಸಫಾರಿ ಆರಂಭಿಸುವ ಮೂಲಕ ಇಲ್ಲಿನ ಬಿಂಕದಕಟ್ಟಿ ಝೂ ಅನ್ನು ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯವನ್ನಾಗಿಸಬೇಕು. ಅದಕ್ಕೆ ಬೇಕಿರುವ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಇಲ್ಲಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಬುಧವಾರ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿರುವ ಗುಳ್ಳೆನರಿ, ಬಂಗಾಳಿ ನರಿ ಹಾಗೂ ಕೆನ್ನಾಯಿ ಪ್ರಾಣಿ ಮನೆ ಹಾಗೂ ಆವರಣ ಮತ್ತು ಮಾಗಡಿ ಕೆರೆ ರಾಮ್ಸಾರ್ ಸೈಟ್ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

‘ಸಹಕಾರಿ ಧುರೀಣ ಕೆ.ಎಚ್.ಪಾಟೀಲ ಅವರು ಕಂಡ ಕನಸಿನಂತೆ ಗದಗ ಮೃಗಾಲಯ ಆರಂಭವಾಗಿದೆ. ಅವರ ಆಶಯದಂತೆ ಮೃಗಾಲಯ ತುಂಬ ಚೆನ್ನಾಗಿ ನಡೆಯಬೇಕಿದೆ. ಗದಗ ಮೃಗಾಲಯಕ್ಕೆ ಹೆಚ್ಚುವರಿಯಾಗಿ 13 ಎಕರೆ ಜಮೀನು ಸೇರಿದಂತೆ ಒಟ್ಟು 15 ಎಕರೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ. ಮೃಗಾಲಯ ವಿಸ್ತರಣೆ ಕಾರ್ಯ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಆಗ ಝೂನ ಪ್ರವೇಶ ದ್ವಾರ ಹೊಸಪೇಟೆ– ಹುಬ್ಬಳ್ಳಿ ಹೆದ್ದಾರಿಗೆ ಹೊಂದಿಕೊಂಡಂತೆ ಇರಲಿದೆ’ ಎಂದು ತಿಳಿಸಿದರು.

‘2025 ಮಾರ್ಚ್‌ 16ರಂದು ಕೆ.ಎಚ್.ಪಾಟೀಲ ಜನ್ಮಶತಾಬ್ಧಿ ವರ್ಷಕ್ಕೆ ಇಂತಹ ಸಾಕಷ್ಟು ರಚನಾತ್ಮಕ ಕೆಲಸಗಳು ಆಗಬೇಕಿದೆ. ಸಿಂಗಾಪುರದಲ್ಲಿ ನೈಟ್‌ ಸಫಾರಿ ಇದ್ದು, ಅಲ್ಲಿನಂತೆ ನಮ್ಮಲ್ಲೂ ಕೂಡ ರಾತ್ರಿ ಸಫಾರಿ ಯಾಕೆ ಆಗಬಾರದು ಎಂಬ ಯೋಚನೆ ಮೂಡಿ, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ, 2025 ಮಾರ್ಚ್‌ 16ರ ಒಳಗೆ ಬಿಂಕದಕಟ್ಟಿ ಮೃಗಾಲಯದಲ್ಲಿ ಕೂಡ ನೈಟ್‌ ಸಫಾರಿ ಆರಂಭವಾಗಬೇಕು. ಅದಕ್ಕೆ ಬೇಕಿರುವ ಎಲ್ಲ ರೀತಿಯ ನೆರವನ್ನು ಸರ್ಕಾರದಿಂದ ಒದಗಿಸಲಾಗುವುದು’ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್‌ ಮೀನಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಡಾ.ಎಚ್.ಎನ್.ನಾಗನೂರ, ರವಿ ಮೂಲಿಮನಿ, ಪ್ರಭು ಬುರಬುರೆ, ಎಸ್.ಎನ್.ಬಳ್ಳಾರಿ, ಎಂ.ಆರ್.ಪಾಟೀಲ, ಶಶಿಕಲಾ ಹೊಸಮನಿ ಇದ್ದರು.

‘ಮೃಗಾಲಯಕ್ಕೆ ಆನೆ ತರುವ ಯೋಚನೆ’

‘ಬಿಂಕದಕಟ್ಟಿ ಮೃಗಾಲಯದ ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇದೆ. ಹೊಸ ಹೊಸ ಆಕರ್ಷಣೆಗಳು ಪ್ರತಿ ತಿಂಗಳು ಸೇರ್ಪಡೆ ಆಗುತ್ತಲೇ ಇರುತ್ತವೆ. ಸದ್ಯ ಮೃಗಾಲಯದಲ್ಲೀಗ ಶೇ 70ರಷ್ಟು ಪ್ರಾಣಿಗಳಿದ್ದು ಉಳಿದ ಶೇ 30ರಷ್ಟನ್ನು ಹೊಸ ಪ್ರಾಣಿಗಳ ಸೇರ್ಪಡೆ ಮೂಲಕ ಪೂರ್ಣಗೊಳಿಸಲಾಗುವುದು. ಆನೆ ತರುವ ಯೋಜನೆ ಇದ್ದು ದತ್ತು ಪಡೆಯುವ ವ್ಯಕ್ತಿಗಳಿಗಾಗಿ ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು. ಮಾಗಡಿ ಕೆರೆಗೆ ಯುನೆಸ್ಕೋ ಗುರುತಿಸುವ ರಾಮ್ಸಾರ್ ಸೈಟ್‍ಗೆ ಸೇರ್ಪಡೆಯಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT