ಬುಧವಾರ, ಆಗಸ್ಟ್ 10, 2022
24 °C
ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್‌– ಸಚಿವ ಸಿ.ಸಿ.ಪಾಟೀಲ ಲೇವಡಿ

ಸತ್ಯ ಪಾದರಸವಿದ್ದಂತೆ; ಹಿಡಿದಿಡುವುದು ಕಷ್ಟ-ಸಚಿವ ಸಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಸತ್ಯ ಪಾದರಸವಿದ್ದಂತೆ. ಅದನ್ನು ಕೈಯಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಸ್ವಲ್ಪ ಕಿಂಡಿ ಸಿಕ್ಕರೂ ಸತ್ಯ ಜಿಗಿದು ಬಿಡುತ್ತದೆ. ಸಮಸ್ಯೆಗಳನ್ನು ಸದಾ ಜೀವಂತವಾಗಿ ಇಡಲು ಬಯಸುವ ಕಾಂಗ್ರೆಸ್‌ನ ಸ್ಥಿತಿ ಕೂಡ ಈಗ ಅದೇರೀತಿ ಆಗಿದೆ’ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕೇವಲ ರಾಜಕಾರಣ ಮಾಡುವುದಕ್ಕಾಗಿ ಸತ್ಯ ಮರೆಮಾಚಲು ಪ್ರಯತ್ನಿಸಬಾರದು. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ನೂನ್ಯತೆಗಳನ್ನು ಸರಿಪಡಿಸುವುದಾಗಿ ಸಿಎಂ ತಿಳಿಸಿದ್ದಾರೆ. ಆದರೂ, ಕಾಂಗ್ರೆಸ್‌ ತನ್ನ ಅಸ್ತಿತ್ವ ಇನ್ನೂ ಇದೆ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿ ಕೂಡಲಸಂಗಮ ಶ್ರೀಗಳು ಹೋರಾಟ ಆರಂಭಿಸಿದ್ದಾರೆ. ಸ್ವಾಮೀಜಿ ಅವರ ಮನವಿಯನ್ನು ಸಿ.ಎಂ ಮುಂದೆ ಮಂಡಿಸಿದ್ದೇವೆ. ಅವರು ನೀಡಿದ ಕೆಲವು ಸಲಹೆ, ಸೂಚನೆಗಳನ್ನೂ ಸ್ವಾಮೀಜಿ ಅವರಿಗೆ ತಿಳಿಸಲಾಗಿದೆ. ಹಾಗಾಗಿ ತಮ್ಮ ಹೋರಾಟವನ್ನು ಸ್ವಲ್ಪ ದಿವಸಗಳ ಕಾಲ ಮುಂದಕ್ಕೆ ಹಾಕಿದ್ದಾರೆ’ ಎಂದು ಹೇಳಿದರು.

‘ನಾನು ಮತ್ತು ಶಾಸಕ ಯತ್ನಾಳ ಹಾಗೂ ಪಂಚಮಸಾಲಿ ಸಮುದಾಯದ ಶಾಸಕರು ಈ ವಿಷಯದಲ್ಲಿ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಿದ್ದೇವೆ. ಪಂಚಮಸಾಲಿ ಸಮುದಾಯದ ಎರಡೂ ಪೀಠಗಳು ಕೂಡಿ ಬಾಳಬೇಕು ಎಂಬುದು ನನ್ನ ಆಸೆ. ಆದರೆ, ಆ ವಿಷಯ ಎರಡು ಪೀಠಗಳ ಶ್ರೀಗಳಿಗೆ ಬಿಟ್ಟ ವಿಚಾರ’ ಎಂದು ಹೇಳಿದರು. 

‘ಪಿಎಸ್‌ಐ ನೇಮಕಾತಿ ಹಗರಣವನ್ನು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತಿದೆ. ಹಗರಣದಲ್ಲಿ ಭಾಗಿಯಾಗಿರುವವರ ಇನ್ನಷ್ಟು ಮಂದಿಯ ಹೆಸರು ಕಾಂಗ್ರೆಸ್‌ ನಾಯಕರಿಗೆ ಗೊತ್ತಿದ್ದರೆ ತಿಳಿಸಲಿ, ತಕ್ಷಣವೇ ಅವರನ್ನು ಬಂಧಿಸಲಾಗುವುದು’ ಎಂದು ಹೇಳಿದರು.

ಮಹಾರಾಷ್ಟ್ರ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎರಡು ವಿಭಿನ್ನ ತತ್ವ, ಸಿದ್ಧಾಂತಗಳನ್ನು ಹೊಂದಿದ ಸರ್ಕಾರ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಮಹಾ ವಿಕಾಸ ಅಘಾಡಿ ಸರ್ಕಾರವೇ ಸಾಕ್ಷಿ’ ಎಂದು ಹೇಳಿದರು.

‘ಸಿಎಂ ಉದ್ಭವ್‌ ಠಾಕ್ರೆ ಸಚಿವ ಸಂಪುಟದ ಸಹೋದ್ಯೋಗಿಗಳ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂಬ ಆರೋಪ ಇದೆ. ಸಚಿವರು ಅವರನ್ನು ಭೇಟಿ ಆಗಲು ವಾರಗಟ್ಟಲೆ ಕಾಯಬೇಕಿತ್ತಂತೆ. ಅಲ್ಲದೇ ಅವರ ಒಳಜಗಳಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರ ಒಳಜಗಳದಲ್ಲಿ ತಲೆಹಾಕುವ ಅವಶ್ಯಕತೆ ಬಿಜೆಪಿಗೂ ಇಲ್ಲ’ ಎಂದು ಹೇಳಿದರು. 

‘ಮಹಾರಾಷ್ಟ್ರ ಸರ್ಕಾರದ ಸಚಿವರೊಬ್ಬರು, ಬಂಡಾಯ ಎದ್ದಿರುವ 56 ಮಂದಿ ಶಾಸಕರ  ಪೋಸ್ಟ್‌ಮಾರ್ಟಂ ವರದಿ ಕಳಿಸುತ್ತೇವೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಚಿವರೊಬ್ಬರು ಬಳಸಬಹುದಾದ ಶಬ್ದವೇ ಇದು? ಬಂಡಾಯ ಶಾಸಕರಿಗೆ ವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ಅವರೇನು ಇವರ ಗುಲಾಮರೇ? ಶಾಸಕರಿಗೆ ಸಚಿವರೊಬ್ಬರು ಈ ರೀತಿಯ ಎಚ್ಚರಿಕೆ ಕೊಡುತ್ತಾರೆ ಎಂದರೆ ಅವರೆಲ್ಲರೂ ಎಷ್ಟು ರೋಸಿ ಹೋಗಿರಬೇಕು. ಈ ಕಾರಣದಿಂದಲೇ ಅವರೆಲ್ಲರೂ ಹೊರ ಬಂದಿದ್ದಾರೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು