ಶುಕ್ರವಾರ, ಮೇ 20, 2022
23 °C
ಜಾತಿ ಪ್ರಮಾಣಪತ್ರ ಗೊಂದಲ: ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮುಂದಕ್ಕೆ

ಬಾಲೆಹೊಸೂರು: ದಿನವಿಡೀ ಬಿಗುವಿನ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಜಾತಿ ಪ್ರಮಾಣಪತ್ರದ ಗೊಂದಲದ ಹಿನ್ನೆಲೆಯಲ್ಲಿ ಸೋಮವಾರ ಸಮೀಪದ ಬಾಲೆಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ ಅವರ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿ ಬಸವರಾಜಪ್ಪ ಮುಂದೂಡಿದರು.

‘ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಮಲ್ಲವ್ವ ಅಶೋಕ ಸಾಲಿ ಮತ್ತು ರೇಖಾ ಸಿದ್ದಪ್ಪ ನೆನಗನಹಳ್ಳಿ ಅವರ ಜಾತಿ ಪ್ರಮಾಣಪತ್ರಗಳು ನಕಲಿ ಇದ್ದು ಕೂಡಲೇ ಅವುಗಳನ್ನು ಹಿಂಪಡೆಯಬೇಕು. ಇಲ್ಲವೇ ಚುನಾವಣೆ ಮುಂದೂಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸದಸ್ಯರು ಬೆಳಿಗ್ಗೆಯಿಂದಲೇ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ ಆರಂಭಿಸಿದ್ದರು.

ಸಂಘರ್ಷ ಸಮಿತಿಯ ನೂರಾರು ಸದಸ್ಯರು ಗ್ರಾಮ ಪಂಚಾಯ್ತಿ ಎದುರೇ ಅಡುಗೆ ತಯಾರಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಚುನಾವಣಾಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿಗೆ ಪಂಚಾಯ್ತಿ ಒಳಗೆ ಅವಕಾಶ ಸಿಗಲಿಲ್ಲ. ನಾಮಪತ್ರ ಸಲ್ಲಿಸಲು ಬೆಳಿಗ್ಗೆ 9ರಿಂದ 11ರವರೆಗೆ ಸಮಯಾವಕಾಶ ಇತ್ತು. ಆದರೆ ಪ್ರತಿಭಟನಕಾರರು ಇದಕ್ಕೆ ಅವಕಾಶ ನೀಡಲಿಲ್ಲ.

ಕೊನೆಗೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮತ್ತು ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಮನವಿ ಆಲಿಸಿದರು.

ಸಮಿತಿಯ ಸುರೇಶ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ ಮಾತನಾಡಿ, ‘ಮಲ್ಲವ್ವ ಸಾಲಿ ಅವರ ಮೂಲಜಾತಿ ಹಿಂದೂ ಕಬ್ಬೇರ ಎಂದಿದೆ. ಇವರು ಬಾಲೇಹೊಸೂರಿನ ಅಶೋಕ ಸಾಲಿ ಅವರೊಂದಿಗೆ ವಿವಾಹ ಆಗಿದ್ದು, 2007ರ ಫೆ.13ರಂದು ಹಿಂದೂ ಕಬ್ಬೇರ 2ಎ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಆದರೆ, ಮತ್ತೆ ಇವರೇ 2013ರ ಅಕ್ಟೋಬರ್‌ 7ರಂದು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇವರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅದರಂತೆ ರೇಖಾ ಸಿದ್ದಪ್ಪ ನೆನಗನಹಳ್ಳಿ ಅವರ ಜಾತಿ ಪ್ರಮಾಣಪತ್ರವೂ ನಕಲಿ ಆಗಿದೆ’ ಎಂದು ಆರೋಪ ಮಾಡಿದರು.

‘ಮೊದಲು ಅವರ ಜಾತಿಯನ್ನು ತಿಳಿಸಿ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಬೇಕು’ ಎಂದು ಪಟ್ಟು ಹಿಡಿದರು.

‘ಈ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರಲ್ಲದೆ ‘ಅಲ್ಲಿವರೆಗೆ ಚುನಾವಣೆಯನ್ನು ಮುಂದೂಡಲಾಗಿದೆ’ ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಲಕ್ಷ್ಮೇಶ್ವರ ಪುರಸಭೆ ಉಪಾಧ್ಯಕ್ಷ ರಾಮಣ್ಣ ಗಡದವರ, ನಾಗರಾಜ ದೊಡ್ಡಮನಿ, ರಾಮಣ್ಣ ಅಡಗಿಮನಿ, ವಿನೋದ ಶಿರಹಟ್ಟಿ, ಸದಾಶಿವ ನಂದೆಣ್ಣವರ, ಮೋಹನ ನಂದೆಣ್ಣವರ, ಜುಂಜಪ್ಪ ಮುದಿಯಮ್ಮನವರ, ಶಿವು ಮುದಿಯಮ್ಮನವರ, ಶೇಖಪ್ಪ ಒಂಟಿ, ಶಿವು ಒಂಟಿ, ಮಲ್ಲಯ್ಯ ದೇವರಮನಿ, ನಿಂಗಪ್ಪ ಮಾದರ ಇದ್ದರು.

ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಶಿವಯೋಗಿ ಲೋಹಾರ, ಮಹಿಳಾ ಪಿಎಸ್‍ಐ ಪಿ.ಎಂ. ಬಡಿಗೇರ ಇದ್ದರು.

ಚುನಾವಣೆಗೆ ಅಡ್ಡಿಪಡಿಸಿದವರನ್ನು ಬಂಧಿಸಲು ಆಗ್ರಹ

ಈ ಮಧ್ಯೆ ಅದೇ ಗ್ರಾಮದ ಘಂಟಿಚೋರ್ ಸಮುದಾಯದವರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿ ರಸ್ತೆ ಪಕ್ಕದಲ್ಲಿಯೇ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ ಮತ್ತು ಚುನಾವಣಾಧಿಕಾರಿ ಬಸವರಾಜಪ್ಪ ಅವರ ಸಮಸ್ಯೆ ಆಲಿಸಿದರು.

ಅನಂತ ಕಟ್ಟಿಮನಿ, ಶಿವಕುಮಾರ ಕಡೇಮನಿ, ಎಂ.ಬಿ. ಚಪ್ಪರಮನಿ, ವೆಂಕಟೇಶ ಕಟ್ಟಿಮನಿ, ಲೋಕೇಶ ಕಟ್ಟಿಮನಿ, ವೈ.ಎಚ್. ಕಡೇಮನಿ ಮಾತನಾಡಿ, ‘ಮಾದಿಗ ಜನಾಂಗದವರು ಮಾತ್ರ ದಲಿತರಲ್ಲ. ಅದರಲ್ಲಿ ಹತ್ತನ್ನೆರಡು ಪಂಗಡಗಳು ಬರುತ್ತವೆ. ದಲಿತರು ಎಂದು ಹೇಳಿಕೊಳ್ಳವವರು ಮೊದಲು ಸಂವಿಧಾನ ಓದಲಿ. ಅದನ್ನು ಬಿಟ್ಟು ವಿನಾಕಾರಣ ಮತ್ತೊಂದು ಜಾತಿ ಜನರಿಗೆ ತೊಂದರೆ ಕೊಡುವುದು ತಪ್ಪು. ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಇದ್ದರೂ ಸಹ ನೂರಾರು ಜನ ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿಗೆ ಬೀಗ ಹಾಕುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು